ಸಿನಿಮಾವೊಂದು ಸೂಪರ್ ಹಿಟ್ ಆಗಿ, ಭರ್ಜರಿ ಕಲೆಕ್ಷನ್ ಮಾಡಿದರೆ ಆಯಾ ತಂಡ ಅಥವಾ ನಿರ್ಮಾಪಕ ಖುಷಿಯಿಂದ ಸಿನಿಮಾದ ಕಲೆಕ್ಷನ್ ಅನ್ನು ಅಧಿಕೃತವಾಗಿ ಮಾಧ್ಯಮ ಮುಂದೆ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಉದಾಹರಣೆಗಳನ್ನು ಈ ಹಿಂದಿನ ವರ್ಷಗಳಲ್ಲಿ ನೋಡಿದ ಪ್ರೇಕ್ಷಕ ಈ ವರ್ಷ ಕೇಳಿದ ಒಂದು ಪ್ರಶ್ನೆ ಎಂದರೆ, “ಯಾಕೆ ಯಾರು ಕಲೆಕ್ಷನ್ ಬಗ್ಗೆ ಮಾತನಾಡುತ್ತಿಲ್ಲ…’ ಎಂಬುದು. ಅದರಲ್ಲೂ ಸ್ಟಾರ್ ಸಿನಿಮಾಗಳು ಬಿಡುಗಡೆಯಾದ ಒಂದು ವಾರದಲ್ಲೇ ಮಾಧ್ಯಮ ಮುಂದೆ ಬಂದು ಸಿನಿಮಾ ಸೂಪರ್ ಹಿಟ್ ಆಯ್ತು ಎಂದು ಖುಷಿಯಿಂದ ಹೇಳಿಕೊಂಡವೇ ಹೊರತು ಸಿನಿಮಾದ ಕಲೆಕ್ಷನ್ ಬಗ್ಗೆ ಮಾತನಾಡಲೇ ಇಲ್ಲ. ಈ ಕುರಿತು ಮಾಧ್ಯಮಗಳ ಪ್ರಶ್ನೆ ಬಂದಾಗ, “ಅದು ಈ ವೇದಿಕೆಯಲ್ಲಿ ಬೇಡ, ಇನ್ನೊಂದಿನ ಹೇಳುವೆ’ ಎಂಬ ಉತ್ತರದೊಂದಿಗೆ ಸುಮ್ಮನಾಗುತ್ತಿದ್ದರು.
ಸೂಪರ್ಹಿಟ್ನ ಕನಸು…
ಈ ವರ್ಷ ಬಿಡುಗಡೆಯಾದ ಯಾವ ಸ್ಟಾರ್ ಸಿನಿಮಾವೂ ಅಭೂತಪೂರ್ವ ಜಯ ಸಾಧಿಸಿಲ್ಲ ಎಂಬುದು ಇಡೀ ಚಿತ್ರರಂಗಕ್ಕೆ, ಸಿನಿಮಾ ಪ್ರೇಮಿಗಳಿಗೆ ಗೊತ್ತಿರುವ ಸತ್ಯ. ಅದಕ್ಕೆ ಕಾರಣ ಹಲವು ಇರಬಹುದು. ಹಾಗಂತ ಈ ಸಿನಿಮಾಗಳು ನಿರ್ಮಾಪಕರ ಕೈ ಕಚ್ಚಿಲ್ಲ. ಏಕೆಂದರೆ ಸಾಮಾನ್ಯವಾಗಿ ಸ್ಟಾರ್ ಸಿನಿಮಾಗಳು ಬಿಡುಗಡೆ ಪೂರ್ವದಲ್ಲಿ ಒಂದಷ್ಟು “ರೈಟ್ಸ್’ಗಳ ಮೂಲಕ ಬಿಝಿನೆಸ್ ಮಾಡಿ, ನಿರ್ಮಾಪಕರನ್ನು ಅರ್ಧ ಸೇಫ್ ಮಾಡಿರುತ್ತವೆ. ಇದಲ್ಲದೇ, ದೊಡ್ಡ ಅಭಿಮಾನಿ ಬಳಗ ಹೊಂದಿದ ಸ್ಟಾರ್‌ಗಳ ಚಿತ್ರಗಳು ಮೊದಲ ವಾರದ “ಶೇರ್’ನಲ್ಲಿ ಒಂದು ಹಂತಕ್ಕೆ ನಿರ್ಮಾಪಕ ನಿಟ್ಟುಸಿರು ಬಿಡುವಂತೆ ಮಾಡುತ್ತವೆ. ಅದು ಈ ವರ್ಷವೂ ಮುಂದುವರೆಯಿತು. ಇದರ ಹೊರತಾಗಿ ಔಟ್ ಆಫ್ ದಿ ಬಾಕ್ಸ್ ಸುದ್ದಿಯಾಗಿ ಪ್ರೇಕ್ಷಕನನ್ನು ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಈ ವರ್ಷ ಸ್ಟಾರ್ ಸಿನಿಮಾಗಳು ಸಫಲವಾಗಲಿಲ್ಲ. ಆದರೆ, ಚಿತ್ರತಂಡಗಳು ಮಾತ್ರ ಸಂತೋಷ ಕೂಟ ಆಯೋಜಿಸಿ, ಕೇಕ್ ಕಟ್ ಮಾಡಿ, ಆ ಕ್ಷಣದ ಖುಷಿಯನ್ನು ಅನುಭವಿಸಿವೆ. ಗೆಲುವಿನ ಮಾನದಂಡ ಬದಲಾಗಿರುವುದರಿಂದ ಇವತ್ತು ನಿರ್ಮಾಪಕ ಸೇಫ್ ಆಗುವುದು ಕೂಡಾ ದೊಡ್ಡ ಗೆಲುವೇ.
ದರ್ಶನ ನೀಡಿದ ಸ್ಟಾರ್:
2023ರಲ್ಲಿ ಕೆಲವೇ ಕೆಲವು ಸ್ಟಾರ್ ನಟರು ತಮ್ಮ ಸಿನಿಮಾ ಮೂಲಕ ದರ್ಶನ ನೀಡಿದ್ದಾರೆ. “ಕ್ರಾಂತಿ’ ಮೂಲಕ ದರ್ಶನ ಆರಂಭಿಸಿದ ದರ್ಶನ್ ಆ ನಂತರ “ಗರಡಿ’ಯಲ್ಲಿ ಅತಿಥಿಯಾಗಿ ಬಂದರು. ಈ ವರ್ಷದ ಕೊನೆಯಲ್ಲಿ ಮತ್ತೂಮ್ಮೆ “ಕಾಟೇರ’ ಮೂಲಕ ಅದ್ಧೂರಿ ಎಂಟ್ರಿಕೊಡಲಿದ್ದಾರೆ. ಅಲ್ಲಿಗೆ ಈ ವಷ ಮೂರು ಚಿತ್ರಗಳ ಮೂಲಕ ತೆರೆಮೇಲೆ ಬಂದ ಖ್ಯಾತಿ ದರ್ಶನ್ ಅವರದು. ನಟ ಶಿವರಾಜ್‌ಕುಮಾರ್ ಅವರು “ಘೋಸ್ಟ್’ ಸಿನಿಮಾ ಮೂಲಕ ಮಾಸ್ ಪ್ರಿಯರನ್ನು ರಂಜಿಸುವಲ್ಲಿ ಹಿಂದೆ ಬೀಳಲಿಲ್ಲ. ಈ ಚಿತ್ರ ನಿರ್ಮಾಪಕರ ಮೊಗದಲ್ಲಿ ಗೆಲುವಿನ ನಗು ತಂದಿದೆ. “ಕಬ್ಜʼ’ ಮೂಲಕ ಉಪೇಂದ್ರ, ಸುದೀಪ್ ರಗಡ್ ಆಗಿ ಎಂಟ್ರಿಕೊಟ್ಟರು. “ಕಬ್ಜ’ ಚಿತ್ರ ಆರಂಭದ ಬಿಝಿನೆಸ್‌ನಿಂದ ಎಲ್ಲರ ಹುಬ್ಬೇರಿಸಿದ್ದು ಸುಳ್ಳಲ್ಲ. ಇನ್ನು, ರಕ್ಷಿತ್ ಶೆಟ್ಟಿ “ಸಪ್ತ ಸಾಗರದಾಚೆ ಎಲ್ಲೋ -1,2′ ಮೂಲಕ ಒಂದು ವಿಭಿನ್ನ ಪ್ರೇಮಕಥೆಯ ಮೂಲಕ ಬಂದು ಒಂದೊಳ್ಳೆಯ ಕಲೆಕ್ಷನ್ ಮಾಡಿ, ಸಮಾಧಾನದ ನಿಟ್ಟುಸಿರು ಬಿಟ್ಟರು. ಉಳಿದಂತೆ ಗಣೇಶ್, ಧನಂಜಯ್, ರಮೇಶ್ ಅರವಿಂದ್, ಜಗ್ಗೇಶ್, ಡಾರ್ಲಿಂಗ್ ಕೃಷ್ಣ, ಪ್ರಜ್ವಲ್ , ರಾಜ್ ಬಿ ಶೆಟ್ಟಿ ಬೇರೆ ಬೇರೆ ಸಿನಿಮಾಗಳ ಮೂಲಕ ತೆರೆಮೇಲೆ ಕಾಣಿಸಿಕೊಂಡರು.
ಕಾಟೇರ ಮೇಲೆ ಭರ್ಜರಿ ನಿರೀಕ್ಷೆ :
ಸದ್ಯ ಕನ್ನಡ ಚಿತ್ರರಂಗ “ಕಾಟೇರ’ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದೆ. ವರ್ಷಾಂತ್ಯದಲ್ಲಿ (ಡಿ.29) ಬಿಡುಗಡೆಯಾಗುತ್ತಿರುವ ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ದೊಡ್ಡ ಯಶಸ್ಸು ತಂದುಕೊಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಅದಕ್ಕೆ ಪೂರಕವಾಗಿ ಚಿತ್ರದ ಟ್ರೇಲರ್, ಸಾಂಗ್ಸ್ ಹಿಟ್‌ಲಿಸ್ಟ್ ಸೇರಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿ, ತರುಣ್ ಸುಧೀರ್ ನಿರ್ದೇಶಿಸಿರುವ ಸಿನಿಮಾವಿದು. ಈಗಾಗಲೇ “ರಾಬರ್ಟ್’ ಮೂಲಕ ದೊಡ್ಡ ಗೆಲುವು ದಾಖಲಿಸಿದ್ದ ಈ ಜೋಡಿ “ಕಾಟೇರ’ ಮೂಲಕ ಮತ್ತೂಮ್ಮೆ ಪ್ರೇಕ್ಷಕರ ಮನ ಗೆಲ್ಲುವ ನಿರೀಕ್ಷೆ ಇದೆ.