ಮುನ್ನೂರು: ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ಅಡೆತಡೆಗಳನ್ನು ಹೋಗಲಾಡಿಸಿ ರಾಜ್ಯ ಸರಕಾರ ಕ್ರಾಂತಿಕಾರಿ ನೀತಿಯನ್ನು ಜಾರಿಗೊಳಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ದಕ್ಷಿಣ ವಲಯ ವತಿಯಿಂದ ಮುನ್ನೂರಿನ ದ.ಕ.ಜಿ.ಪಂ. ಹಿ.ಪ್ರಾ ಶಾಲೆಯಲ್ಲಿ ಒಂದನೇ ತರಗತಿಗೆ ಆಂಗ್ಲ ಮಾಧ್ಯಮ ವಿಭಾಗದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿರುವ ಕೆಲಸ ಸರಕಾರದ ಐತಿಹಾಸಿಕ ಕಾರ್ಯಕ್ರಮವಾಗಿದೆ. ಮಂಗಳೂರು ಕ್ಷೇತ್ರದ ಐದು ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭವಾಗಿದೆ ಎಂದರು.
ಕುತ್ತಾರಿನ ಮುನ್ನೂರು ಸರಕಾರಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಇನ್ಪೋಸಿಸ್ ಸಂಸ್ಥೆ 2 ಕೋ. ರೂ. ನೀಡುವ ಮೌಖೀಕ ಭರವಸೆ ನೀಡಿದ್ದು, ಹಣ ಮಂಜೂರಾತಿಯಾದರೆ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಲಿದ್ದು, ನೂತನ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಪೂರಕವಾಗಿ ಮಾದರಿ ಶಾಲೆಯಾಗಲಿದೆ ಎಂದು ತಿಳಿಸಿದರು.
ಮಕ್ಕಳು ಬಲಿಷ್ಠ ರಾದಲ್ಲಿ ದೇಶ ಬಲಿಷ್ಠವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಆರಂಭಿಸುವ ಮೂಲಕ ಬಲಿಷ್ಠರನ್ನಾಗಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಮುನ್ನೂರು ಶಾಲಾ ವಠಾರದಲ್ಲಿ ಸ್ಥಳೀಯ ಕಟ್ಟಡಗಳ ತ್ಯಾಜ್ಯ ನೀರಿನ ತೊಂದರೆಗೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರಕಾರದಿಂದ ಸದ್ಯ 10ಲಕ್ಷ ರೂ. ಶಾಲೆಯ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ ಎಂದರು.
ಮುನ್ನೂರು ಗ್ರಾ.ಪಂ. ಅಧ್ಯಕ್ಷೆ ರೂಪಾ ಅಧ್ಯಕ್ಷತೆ ವಹಿಸಿದ್ದರು. ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು. ಕಣಚೂರು ಮೋನು, ಜಿ.ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ತಾ.ಪಂ. ಸದಸ್ಯೆ ವಿಲ್ಮಾ ವಿಲ್ಫ್ರೆಡ್ ಡಿ’ಸೋಜಾ, ಪಿಡಿಒ ರವೀಂದ್ರ ನಾಯ್ಕ, ಶಿಕ್ಷಣ ಇಲಾಖೆಯ ಪ್ರಶಾಂತ್, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ಶೆಟ್ಟಿ, ಮುನ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಮುಸ್ತಾಫ, ಗ್ರಾ.ಪಂ ಸದಸ್ಯ ಹಸನಬ್ಬ, ಎಸ್‌ಡಿಎಂಸಿ ಅಧ್ಯಕ್ಷೆ ಭಾರತಿ, ತಾ.ಪಂ ಸದಸ್ಯೆ ಸುರೇಖಾ ಚಂದ್ರಹಾಸ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶಾರದಾ ನಿರೂಪಿಸಿದರು.