ಚಿಕ್ಕಬಳ್ಳಾಪುರ: ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯದ ಕನಸು ಕಂಡಿದ್ದರು. ಅದೇ ರೀತಿ ಪ್ರಧಾನಿ ಮೋದಿ ಆತ್ಮ ನಿರ್ಭರ್ ಯೋಜನೆಯ ಮೂಲಕ ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸಿ ಗ್ರಾಮೀಣ ಪ್ರದೇಶದ ಸ್ವರೂಪ ಬದಲಾಯಿಸಲು ಮುಂದಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರಾಗಿ ಕೆ.ವಿ.ನಾಗರಾಜ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಪ್ರಧಾನಿ ಮೋದಿ ಮಾಡಿದ್ದಾರೆ. ಸಬಕ್ ಸಾಥ್ ಸಬಕಾ ವಿಕಾಸ್ ಎಂಬ ಘೋಷಣೆಯೊಂದಿಗೆ ಸಮಾಜದಲ್ಲಿರುವ ಎಲ್ಲಾ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ರೈತರಿಗೆ ನೆರವು: ದೇಶದಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಎಲ್ಲಾ ರೀತಿಯ ನೆರವು, ಸಹಕಾರ ನೀಡುತ್ತಿದ್ದಾರೆ. ಅದೇ ರೀತಿಯಲ್ಲಿ ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ಜಾರಿಗೊಳಿಸಿದೆ ಜೊತೆಗೆ ಉಭಯ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆಗಳಿಗೆ ವಾರ್ಷಿಕ ನೇರವಾಗಿ 10 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದರು.
ನಾಗರಾಜ್‌ರಿಂದ ಪ್ರಾಮಾಣಿಕವಾಗಿ ಸೇವೆ:
ರಾಜ್ಯದಲ್ಲಿ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೆ.ವಿ.ನಾಗರಾಜ್ ಅವರು ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದ ಮಾವು ಬೆಳೆಯನ್ನು ಅನೇಕ ಜಿಲ್ಲೆಗಳಿಗೆ ವಿಸ್ತರಿಸಿ, ಬೆಳೆಗಾರರಿಗೆ ವೈಜ್ಞಾನಿಕ ವಾಗಿ ದರ ಒದಗಿಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆ ಗುರುತಿಸಿ ಸಿಎಂ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಸ್ಥಾನಕ್ಕಾಗಿ ನೇಮಕ ಮಾಡಿದ್ದಾರೆ ಎಂದು ಹೇಳಿದರು.
ಖಾದಿ ಗ್ರಾಮೋದ್ಯೋಗ ಮಂಡಳಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೆ.ವಿ.ನಾಗರಾಜ್ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ 35 ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದೇನೆ. ಒಂದು ವರ್ಷ ಮೂರು ತಿಂಗಳು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಂಡಳಿಯ ಅಧ್ಯಕ್ಷನಾಗಿದ್ದೆ. ಸಚಿವ ಡಾ.ಸುಧಾಕರ್ ಶಿಫಾರಸಿನ ಮೇರೆಗೆ ಮತ್ತೂಮ್ಮೆ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಸ್ಥಾನ ಲಭಿಸಿದೆ. ಅದಕ್ಕಾಗಿ ಸಚಿವರು, ಸಿಎಂ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. ಜಿಪಂ ಮಾಜಿ ಅಧ್ಯಕ್ಷ ಕೇಶವರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.