Advertisement

Nitin Gadkari: ಇಥೆನಾಲ್‌ಗೆ ಪ್ರೋತ್ಸಾಹಿಸಿದರೆ ರಾಜ್ಯದಲ್ಲಿ ಕ್ರಾಂತಿ: ಗಡ್ಕರಿ

11:06 PM Feb 22, 2024 | Team Udayavani |

ಬೆಳಗಾವಿ/ಶಿವಮೊಗ್ಗ:  ದೇಶದಲ್ಲಿ ಈಗ ಎಥೆನಾಲ್‌ ಕ್ರಾಂತಿ ಆರಂಭವಾಗಿದೆ. ಕರ್ನಾಟಕ ಕೂಡ ಜೈವಿಕ ಇಂಧನ ತಯಾರಿಕೆ ಹಬ್‌ ಆಗಲಿದೆ. ಎಥೆನಾಲ್‌, ಮಿಥೆನಾಲ್‌, ಬಯೋ ಡೀಸೆಲ್‌, ಬಯೋ ಎಲ್‌ಎನ್‌ಜಿ, ಗ್ರೀನ್‌ ಹೈಡ್ರೋಜನ್‌, ವಿದ್ಯುತ್‌ ನಮ್ಮ ಭವಿಷ್ಯ ಎಂದು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದರು.

Advertisement

ಬೆಳಗಾವಿಯಲ್ಲಿ 7,290 ಕೋಟಿ ರೂ. ಹಾಗೂ ಶಿವಮೊಗ್ಗದಲ್ಲಿ 6,168 ಕೋಟಿ ರೂ. ವೆಚ್ಚದ ತಲಾ 18 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ  ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಎಥೆನಾಲ್‌ ದೊರೆಯುತ್ತದೆ. ಕಬ್ಬು ಬೆಳೆ ಹೆಚ್ಚಿರುವ ಕಡೆ ಎಥೆನಾಲ್‌ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚು ಅವಕಾಶಗಳಿವೆ. ರೈತರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ದೃಷ್ಟಿಯಿಂದ ಎಥೆನಾಲ್‌ ಬಳಕೆಗೆ ರಾಜ್ಯ ಸರಕಾರ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ವಿಮಾನ ಇಂಧನ ಉತ್ಪಾದನೆ:

ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಎಥೆನಾಲ್‌ ಮೂಲಕ ವಿಮಾನ ಇಂಧನ ಉತ್ಪಾದನೆಗೂ ಅವಕಾಶಗಳಿವೆ. ಕರ್ನಾಟಕ ಸರಕಾರ ಇಲ್ಲಿನ ರೈತರಿಗೆ ನೆರವು ನೀಡಿದರೆ ಮುಂದಿನ ದಿನಗಳಲ್ಲಿ ಬೆಳಗಾವಿ ಎಥೆನಾಲ್‌ ಉತ್ಪಾದನೆ ಅಷ್ಟೇ ಅಲ್ಲ, ವಿಮಾನಗಳ ಇಂಧನ ಉತ್ಪಾದನೆ ಮಾಡುವ ಕೇಂದ್ರವಾಗಲಿದೆ. ನಮ್ಮ ರೈತರು ಕೇವಲ ಅನ್ನದಾತರಲ್ಲ, ಉದ್ಯೋಗದಾತರು ಹಾಗೂ ವಿದ್ಯುತ್‌ ಉತ್ಪಾದಕರೂ ಆಗಲಿದ್ದಾರೆ ಎಂದರು.

Advertisement

ಎಥೆನಾಲ್‌ ಬಳಕೆಗೆ ಪ್ರೋತ್ಸಾಹ ನೀಡಲು ದೇಶಾದ್ಯಂತ ನಾಲ್ಕು ಸಾವಿರದಷ್ಟು ಎಥೆನಾಲ್‌ ಪಂಪ್‌ ಸ್ಥಾಪನೆಗೆ ಅನುಮತಿ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಜಗತ್ತಿಗೆ ಎಥೆನಾಲ್‌ ರಫ್ತು ಮಾಡುಲ ಗುರಿ ಹೊಂದಲಾಗಿದೆ. ಎಥೆನಾಲ್‌ ಹಾಗೂ ಮಿಥೆನಾಲ್‌ ಆಧಾರಿತ ವಾಹನಗಳನ್ನು ರಸ್ತೆಗಿಳಿಸುವ ಮೂಲಕ ಪರಿಸರ ರಕ್ಷಣೆ ಜತೆಗೆ ರೈತರ ಆರ್ಥಿಕಾಭಿವೃದ್ಧಿಗೂ ಅವಕಾಶ ಕಲ್ಪಿಸಲಾಗುವುದು ಎಂದರು.

ರಾಜ್ಯದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಳ್ಳುವ ಗುರಿ ಹೊಂದಿದ್ದು, ಬಹುತೇಕ ಕಾಮಗಾರಿಗಳಿಗೆ ಚಾಲನೆ ದೊರೆತಿದೆ. ಬೆಳಗಾವಿ-ಗೋವಾ ಹಾಗೂ ಬೆಳಗಾವಿ-ಹುನಗುಂದ-ರಾಯಚೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಬಳಿಕ ಪ್ರಯಾಣದ ಅವಧಿಯೂ ಇಳಿಯಲಿದೆ. ರಾಜ್ಯ ಸರಕಾರವು ಅರಣ್ಯ ಇಲಾಖೆ ಅನುಮತಿ ದೊರಕಿಸಿ ಕೊಡುವ ಜತೆಗೆ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಟ್ಟರೆ ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅನುಕೂಲವಾಗುತ್ತದೆ ಎಂದರು.

ಕೊಡಚಾದ್ರಿಯಿಂದ ಕೊಲ್ಲೂರಿಗೆ ರೋಪ್‌ವೇ :

ಕೊಡಚಾದ್ರಿಯಿಂದ ಕೊಲ್ಲೂರು ಹಾಗೂ ಕೊಪ್ಪಳದ ಅಂಜನಾದ್ರಿ ರೋಪ್‌ವೇ ನಿರ್ಮಾಣ ಆಗಲಿದೆ. ಬೆಂಗಳೂರಿನಲ್ಲಿ 17 ಸಾವಿರ ಕೋಟಿ ವೆಚ್ಚದ ಆರು ಪ್ಯಾಕೇಜ್‌ಗಳ ರಿಂಗ್‌ ರಸ್ತೆ ಕಾಮಗಾರಿ ಮುಂದಿನ ಜನವರಿಗೆ ಪೂರ್ಣಗೊಳ್ಳಲಿದೆ. ರಾಜ್ಯದ ಲೋಕೋಪಯೋಗಿ ಇಲಾಖೆ ಕಳುಹಿಸಿದ ಹದಿನೇಳು ಪ್ರಮುಖ ಯೋಜನೆಗಳನ್ನು ಪರಿಶೀಲಿಸಿ ಆದಷ್ಟು ಬೇಗ ಅಗತ್ಯ ಮಂಜೂರಾತಿ ನೀಡಲಾಗುವುದು ಎಂದರು.

ನಾಡಗೀತೆ ದೇಶದಲ್ಲೇ ಅತ್ಯುತ್ತಮ :

ಕನ್ನಡ ನಾಡಗೀತೆ ಕೇಳಿದಾಗ ಬಹಳ ಸಂತೋಷವಾಗುತ್ತದೆ. ದೇಶದಲ್ಲೇ ಅತ್ಯುತ್ತಮ ಗೀತೆ ಎಂದು ಹೇಳಲು ಯಾವುದೇ ಹಿಂಜರಿಕೆ ಇಲ್ಲ. ಕನ್ನಡ ನನಗೆ ಅರ್ಥವಾಗದಿದ್ದರೂ ಕೆಲವು ಶಬ್ದಗಳಿಂದ ಅದರ ಭಾವಾರ್ಥ ಅರ್ಥವಾಗುತ್ತದೆ. ಇದನ್ನು ರಚಿಸಿದವರಿಗೆ, ಸಂಗೀತ ನೀಡಿದವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಗಡ್ಕರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next