ಕಲಬುರಗಿ: ಹಿಂದೆಂದೂದು ಕಂಡರಿಯದ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಕ್ರಾಂತಿಕಾರಿ ಅಭಿವೃದ್ಧಿ ಕಾರ್ಯಗಳಾಗುತ್ತಿವೆ ಎಂದು ಸಂಸದ ಡಾ. ಉಮೇಶ ಜಾಧವ್ ಹೇಳಿದರು.
ಕಲಬುರಗಿ- ಬೆಂಗಳೂರು ನಡುವೆ ವಂದೇ ಭಾರತ ರೈಲಿಗೆ ಚಾಲನೆ ನೀಡಿ ಮಾತನಾಡಿದರು.
ತಮ್ಮ ಅವಧಿಯಲ್ಲಿ ಕಲಬುರಗಿಯಿಂದ ವಿಮಾನ ಹಾರಾಟ ಶುರುವಾಗಿರುವುದು, ಹಲವು ದಶಕಗಳ ಬೇಡಿಕೆಯಾಗಿದ್ದ ಕಲಬುರಗಿ- ಬೆಂಗಳೂರು ನಡುವೆ ನೇರವಾಗಿ ಹೊಸ ರೈಲುಗಳ ಸಂಚಾರ ಶುರುವಾಗಿರುವುದು, ಒಂದು ಲಕ್ಷ ನೇರವಾಗಿ ಉದ್ಯೋಗ ಕಲ್ಪಿಸುವ ಮೆಗಾ ಟೆಕ್ಸ್ ಟೈಲ್ ಪಾರ್ಕ ಸ್ಥಾಪನೆಯಾಗುತ್ತಿರುವುದು, ಸಹಸ್ರಾರು ಕೋಟಿ ರೂ ಮೊತ್ತದ ಭಾರತ ಮಾಲಾ ಕಲಬುರಗಿ ಮೂಲಕ ಹಾದು ಹೋಗುತ್ತಿರುವುದು, 2000 ಕೋ.ರೂ ವೆಚ್ಚದ ಜಲ ಜೀವನ ಮಿಷನ್ ಸೇರಿದಂತೆ ಕಾಮಗಾರಿಗಳು ಕ್ರಾಂತಿಕಾರಿಯಾಗಿವೆ ಎಂದು ವಿವರಣೆ ನೀಡಿದರು.
ವಿರೋಧ ಪಕ್ಷದವರು ಏನ್ ಅಭಿವೃದ್ಧಿ ಮಾಡಲಾಗಿದೆ ಎಂದು ಕೇಳುತ್ತಿದ್ದರು. ಈ ಎಲ್ಲ ಕಾರ್ಯಗಳನ್ನು ಕಣ್ತೆರೆದು ನೋಡಬಹುದು. ಇದೇ ತೆರನಾದ ಅಭಿವೃದ್ಧಿ ಕಾರ್ಯಗಳು ಮುಂದಿನ ದಿನಗಳಲ್ಲೂ ಮುಂದುವರೆಯಲಿವೆ ಎಂದು ಸಂಸದರು ಪ್ರಕಟಿಸಿದರು.
ಈಚೆಗೆ ಕಲಬುರಗಿ ವಿಮಾನ ನಿಲ್ದಾಣ ದಿಂದ ರಾತ್ರಿ ವಿಮಾನ ಸಂಚಾರ ಶುರುವಾಗಿರುವುದು ಅದಲ್ಲದೇ ಕಲಬುರಗಿಯಿಂದಲೇ ರೈಲು ಸಂಚಾರ ಶುರುವಾಗುವ ನಿಟ್ಟಿನಲ್ಲಿ ಎರಡನೇ ಫಿಟ್ ಲೈನ್ ಕಾಮಗಾರಿ ಆರಂಭವಾಗಿರುವುದು ಇತರ ಹತ್ತಾರು ಕಾರ್ಯಗಳು ನಡೆದಿವೆ. ಇನ್ನೂ ಹಲವು ಕಾರ್ಯಗಳಾಗಬೇಕಿದೆ ಎಂದು ಸಂಸದ ಡಾ. ಉಮೇಶ ಜಾಧವ್ ಪ್ರಕಟಿಸಿದರು.
ಶಾಸಕರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಜಾಧವ್, ಸುನೀಲ್ ವಲ್ಲಾಪುರೆ, ಬಿ.ಜಿ.ಪಾಟೀಲ್, ಮಾಜಿ ಸಚಿವ ಮಾಲೀಕಯ್ಯ ವಿ. ಗುತ್ತೇದಾರ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಸೋಲಾಪುರ ರೈಲ್ವೇ ವಿಭಾಗದ ಡಿಜಿಎಂ ನೀರಜ್ ಕುಮಾರ ದೊರೆ, ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುನ, ಪೊಲೀಸ್ ಆಯುಕ್ತ ಆರ್. ಚೇತನ, ಎಸ್ಪಿ ಅಕ್ಷಯ ಹಾಕೆ, ಪಾಲಿಕೆ ಆಯುಕ್ತ ಭುವನೇಶ ಪಾಟೀಲ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ ಸೇರಿದಂತೆ ಮುಂತಾದವರಿದ್ದರು.