Advertisement

ಐಹೊಳೆ ಸ್ಥಳಾಂತರ ಬೇಡಿಕೆಗೆ ಮರುಜೀವ

11:13 AM Sep 23, 2019 | Suhan S |

ಅಮೀನಗಡ: ದೇವಾಲಯಗಳ ತೊಟ್ಟಿಲು ಎಂದೇ ಖ್ಯಾತಿ ಪಡೆದ ಐಹೊಳೆ ಸ್ಥಳಾಂತರ ದಶಕಗಳ ಬೇಡಿಕೆ ಮಲಪ್ರಭಾ ನದಿಯ ಭೀಕರ ಪ್ರವಾಹ ಬಂದ ಹೋದ ಮೇಲೆ ಚಾಲನೆ ಪಡೆದುಕೊಂಡಿದೆ.

Advertisement

ಇತ್ತೀಚಿಗೆ ಬಂದು ಹೋದ ಭೀಕರ ಪ್ರವಾಹದಿಂದ ಐಹೊಳೆ ಗ್ರಾಮಕ್ಕೆ ಪ್ರವಾಹ ನೀರು ಬಂದಿರುವುದರಿಂದ ಐತಿಹಾಸಿಕ ದೇವಾಲಗಳು ಸೇರಿದಂತೆ ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ಇದರಿಂದ ನೂರಾರು ಕುಟುಂಬಗಳು ಸಮಸ್ಯೆ ಎದುರಿಸುತ್ತಿವೆ. ಭವಿಷ್ಯದ ದೃಷ್ಟಿಯಿಂದ ಸ್ಥಳಾಂತರವಾಗುವುದೇ ಉತ್ತಮ ಎಂಬ ಲೆಕ್ಕಾಚಾರದಲ್ಲಿ ಸಾರ್ವಜನಿಕರಿದ್ದು, ಐಹೊಳೆ ಸ್ಥಳಾಂತರಕ್ಕೆ ಪ್ಲಸ್‌ ಪಾಯಿಂಟ್‌ ಆಗಲಿದೆ ಎಂಬ ಮಾತುಗಳು ಗ್ರಾಮದಲ್ಲಿ ಕೇಳಿ ಬಂದಿದೆ.

ಕನಸಾಗೇ ಉಳಿದ ಸ್ಥಳಾಂತರ: ದೇಶದಲ್ಲೇ ಹಿಂದೂ ದೇವಾಲಯ ನಿರ್ಮಾಣ ಪ್ರಯೋಗ ಶಾಲೆಯೆಂದು ಖ್ಯಾತಿಯಾಗಿರುವ ಐಹೊಳೆ ಗ್ರಾಮದ ಸ್ಥಳಾಂತರ 30 ವರ್ಷದ ಬೇಡಿಕೆ. ಈ ಹಿಂದೆ 2006ರಲ್ಲಿ 9 ದೇವಾಲಯಗಳ ಸಂಕೀರ್ಣಗಳ ಸುತ್ತಲಿನ 144 ಆಸ್ತಿಗಳ (ಮನಗೆಳು) ಸ್ಥಳಾಂತರಕ್ಕೆ ಪಟ್ಟಿ ಮಾಡಲಾಗಿತ್ತು. ಆದರೆ ಇಡೀ ಗ್ರಾಮವನ್ನೇ ಸ್ಥಳಾಂತರಿಸುವಂತೆ ಗ್ರಾಮಸ್ಥರಿಂದ ಕೂಗು ಆರಂಭಗೊಂಡಿತು. ಅಲ್ಲಿಂದ ಸ್ಥಳಾಂತರಿಸುವುದರ ಕುರಿತು ಚರ್ಚೆಗಳು ಜೋರಾಗಿ ಆರಂಭಗೊಂಡವು. ನಂತರ 2013ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದಾಗ ಐಹೊಳೆ ಗ್ರಾಮದ ಅಳಿಯ ಅಂದು ಮುಖ್ಯಮಂತ್ರಿಯಾಗಿದ್ದ ಜಗದೀಶ್‌ ಶೆಟ್ಟರ ಸ್ಥಳಾಂತರಿಸಲು ಮುಂದಾಗಿದ್ದರು. ಅಷ್ಟೆ ಅಲ್ಲ ಅಡಿಗಲ್ಲು ಸಮಾರಂಭ ಕೂಡ ನಡೆದಿತ್ತು. ಸ್ಥಳಾಂತರಕ್ಕೆ ಅವಶ್ಯವಿದ್ದ 252 ಎಕರೆ ಜಮೀನು ಗುರುತಿಸಲಾಗಿತ್ತು.

ಇದಕ್ಕಾಗಿ ಸರ್ಕಾರದಿಂದ 50.41 ಕೋಟಿ ಅನುದಾನ ಕಾಯ್ದಿರಿಸಿತ್ತು. ನಂತರದ ರಾಜಕೀಯ ಬೆಳವಣಿಗೆಯಿಂದ ಸ್ಥಳಾಂತರ ಮತ್ತೆ ನನೆಗುದಿಗೆ ಬಿದ್ದಿದೆ. ಆದರೀಗ ಕಳೆದ ತಿಂಗಳ ಮಲಪ್ರಭಾ ನದಿ ಪ್ರವಾಹದಿಂದ ಜಲಾವೃತಗೊಂಡ ಐಹೊಳೆಯನ್ನು ಸಂಪೂರ್ಣವಾಗಿ ಸ್ಥಳಾಂತರಿಸಲು ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ಒಟ್ಟು ಮನೆಗಳು 1032 ಆಗಿದೆ. ದಾಖಲಾಗದ ಮನೆಗಳ ಸಂಖ್ಯೆ 10 ಇವೆ. ಪರಿಹಾರ ಸರ್ವೇ ಅ ಧಿಕಾರಿಗಳ ಮೇಲೆ ಸ್ಥಳಾಂತರ ಅವಲಂಬಿತವಾಗಿದೆ.

ಭಾರತೀಯ ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಗ್ರಾಮಸ್ಥರ ಸಮನ್ವತೆಯ ಕೊರತೆಯಿಂದ 30 ವರ್ಷಗಳ ಐಹೊಳೆ ಸ್ಥಳಾಂತರ ಬೇಡಿಕೆ ಈಡೇರದೆ ನನೆಗುದಿಗೆ ಬಿದ್ದಿದೆ. ಇತ್ತ ಪ್ರಾಚ್ಯ ಇಲಾಖೆಯವರ ಕಠಿಣ ನಿಯಮಗಳ ನಿರ್ಧಾರದಿಂದ ಗ್ರಾಮದಲ್ಲಿ ರಸ್ತೆ, ಚರಂಡಿ ನಿಮಾರ್ಣ, ಮನೆ ದುರಸ್ತಿ, ಹೊಸ ಮನೆ ಕಟ್ಟಡ ನಿರ್ಮಾಣಕ್ಕೆ

Advertisement

ತಡೆಹಿಡಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಗ್ರಾಮಸ್ಥರು ಮೂಲಸೌಲಭ್ಯ ಪಡೆಯಲು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಅಷ್ಟೆ ಅಲ್ಲ ಸ್ಥಳಾಂತರ ಬೇಡಿಕೆಯ ನಿರ್ಲಕ್ಷ್ಯ ಪ್ರಾಚ್ಯ ಇಲಾಖೆ ಕಠಿಣ ನಿಯಮದಿಂದ ಗ್ರಾಮದ ಸ್ಥಿತಿ ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ ಆಗಿದೆ. ಆದರೆ ಇತ್ತೀಚೆಗೆ ಬಂದು ಹೋದ ಭೀಕರ ಪ್ರವಾಹದಿಂದ ಐಹೊಳೆ ಗ್ರಾಮ ಸ್ಥಳಾಂತರಗೊಳ್ಳಲು ಅನುಕೂಲವಾಗಿದೆ. ಸ್ಥಳಾಂತರವಾಗುವುದೇ ಉತ್ತಮ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು, ಜನಪ್ರತಿನಿ ಧಿಗಳು ಐತಿಹಾಸಿಕ ಸ್ಮಾರಕಗಳು ಉಳಿಸುವುದು, ಗ್ರಾಮಸ್ಥರ ಮುಂದಿನ ಭವಿಷ್ಯ ದೃಷ್ಟಿಯಿಂದ ಗ್ರಾಮಸ್ಥರ ವಿವಿಧ ಬೇಡಿಕೆ ಈಡೇರಿಸಲು ಸ್ಥಳಾಂತರ ಕಾರ್ಯಕ್ಕೆ ಮುಂದಾಗಿ ಐತಿಹಾಸಿಕ ಪ್ರವಾಸಿ ತಾಣ ಐಹೊಳೆಯನ್ನು ವಿಶ್ವ ಪಾರಂಪರೆಯ ತಾಣಗಳಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸಬೇಕು ಎಂಬುದು ಪ್ರಜ್ಞಾವಂತರ ಆಗ್ರಹ.

ಸಮನ್ವಯತೆ ಕೊರತೆ :  ಮಲಪ್ರಭಾ ನದಿ ತೀರದಲ್ಲಿರುವ ಐತಿಹಾಸಿಕ ರಾಷ್ಟ್ರೀಯ ಪ್ರವಾಸಿ ತಾಣ ಐಹೊಳೆಗೆ ದೇಶ- ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಐಹೊಳೆಯಲ್ಲಿ 125ಕ್ಕೂ ಹೆಚ್ಚು ದೇಗುಲಗಳಿದ್ದು, 6ನೇ ಶತಮಾನದ ಈ ಕೋಟೆ ಕರ್ನಾಟಕದ ಒಂದು ಪ್ರಾಚಿನ ದುರ್ಗವಾಗಿದೆ. ಇಲ್ಲಿ ಬೃಹತ್‌ ಶಿಲಾಯುಗದ ಕಾಲದಿಂದಲೂ ಪ್ರಾಚ್ಯ ಅವಶೇಷಗಳು ಕಾಣ ಸಿಗುತ್ತವೆ. ಬಾದಾಮಿ ಚಾಲುಕ್ಯರ ಕಾಲದ ಒಂದು ಪ್ರಮುಖ ನಗರವಾಗಿದ್ದ ಐಹೊಳೆ ವಾಸ್ತುಶಿಲ್ಪ ಕೃತಿಗಳಿಗಾಗಿ ಹೆಸರು ವಾಸಿಯಾಗಿದೆ. ಏಳನೇ ಶತಮಾನದಲ್ಲೇ ಇದು ಪ್ರಸಿದ್ಧ ಕಲಾಕೇಂದ್ರವಾಗಿತ್ತು. ವಿಶ್ವ ಪರಂಪರೆಯಲ್ಲಿ ಇಲ್ಲಿನ ದೇವಾಲಗಳು ಸ್ಥಾನ ಪಡೆಯಲು ಅರ್ಹತೆ ಇದ್ದರೂ ಪ್ರಾಚ್ಯ ಇಲಾಖೆ, ಪ್ರವಾಸಿಯೋದ್ಯಮ ಇಲಾಖೆ ಹಾಗೂ ಗ್ರಾಮಸ್ಥರ ನಡುವಿನ ಸಮನ್ವಯತೆಯ ಕೊರತೆಯಿಂದ ಸ್ಥಾನ ಪಡೆದಿಲ್ಲ.

ಸಾರ್ವಜನಿಕರ ನಿರ್ಮಾಣ ತಡೆ: ಐಹೊಳೆಯ ಇತಿಹಾಸಿ ಪ್ರಸಿದ್ಧ ಪಾರಂಪರಿಕ ಸ್ಮಾರಕಗಳಾದ ದುರ್ಗ ದೇವಾಲಯ, ಲಾಡಖಾನ್‌ ಹುಚ್ಚಮಲ್ಲಿ ದೇವಾಲಯ, ರಾವಳಪಡಿ ಗುಹಾಂತರ, ಗಳಗನಾಥ ದೇವಾಲಯ ಸೇರಿದಂತೆ ನೂರಾರು ದೇವಾಲಯಗಳು ಕೆಲ ಸ್ಥಳಿಯರ ಇತಿಹಾಸ ಪ್ರಜ್ಞೆ ಕೊರತೆಯಿಂದ ಸಾರ್ವಜನಿಕರ ಮನೆಗಳ ನಡುವೆ, ಸಂದಿ ಗೊಂದಿಗಳಲ್ಲಿ ಸಿಲುಕಿ ಅಸ್ತಿತ್ವ ಕಳೆದುಕೊಂಡಿದೆ. ಕೆಲವರು ಪ್ರಸಿದ್ಧದೇವಾಲಯಗಳ ಆವರಣದೊಳಗೆ ಆಡು ಕುರಿ, ಹಸು ಸೇರಿದಂತೆ ಇತರ ಸಾಕು ಪ್ರಾಣಿಗಳನ್ನು ಕಟ್ಟುವುದು ರೂಢಿಯಾಗಿದೆ. ಇದನ್ನು ಮನಗಂಡ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯವರು ಗ್ರಾಮದಲ್ಲಿ ಯಾವುದೇ ತರಹದ ನಿರ್ಮಾಣ ಕಾರ್ಯಕ್ಕೆ ತಡೆಯೊಡ್ಡಿದೆ

 

-ಎಚ್‌.ಎಚ್‌. ಬೇಪಾರಿ

Advertisement

Udayavani is now on Telegram. Click here to join our channel and stay updated with the latest news.

Next