Advertisement

ಬಾಬ್ರಿಗೆ ಮರುಜೀವ; ಅಡ್ವಾಣಿ, ಜೋಷಿ, ಉಮಾ ವಿರುದ್ಧ ವಿಚಾರಣೆ

03:45 AM Apr 20, 2017 | |

ನವದೆಹಲಿ: ಇಪ್ಪತ್ತೈದು ವರ್ಷಗಳ ಹಿಂದಿನ ಬಾಬ್ರಿ ಮಸೀದಿ ಧ್ವಂಸದ ಕ್ರಿಮಿನಲ್‌ ಸಂಚು ಪ್ರಕರಣಕ್ಕೆ ಮತ್ತೂಮ್ಮೆ ಮರುಜೀವ ಸಿಕ್ಕಿದ್ದು, ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ. ಆಡ್ವಾಣಿ, ಮುರಳಿ ಮನೋಹರ ಜೋಷಿ ಮತ್ತು ಉಮಾಭಾರತಿ ಸೇರಿದಂತೆ 20 ಮಂದಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವಂತೆ ಸುಪ್ರೀಂಕೋರ್ಟ್‌ ಮಹತ್ವದ ಆದೇಶ ನೀಡಿದೆ.

Advertisement

ಇದರೊಂದಿಗೆ, ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಗೆ ಅಡ್ವಾಣಿ ಏರಬಹುದೆನ್ನುವ ಜಿಜ್ಞಾಸೆಗೆ ಕೊಡಲಿ ಏಟು ಬಿದ್ದಿದೆ. ಎರಡು ವರ್ಷಗಳೊಳಗೆ ವಿಚಾರಣೆ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್‌ ಸೂಚಿಸಿದ್ದು, ಒಂದೊಮ್ಮೆ ಆರೋಪ ಸಾಬೀತಾದಲ್ಲಿ ಬಿಜೆಪಿ ನಾಯಕರು ಐದು ವರ್ಷ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ.

ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿ ಅಲಹಾಬಾದ್‌ ಹೈಕೋರ್ಟ್‌ ಹೆಚ್ಚಿನ ವಿಚಾರಣೆ ಅರ್ಜಿಯನ್ನು ಕೈಬಿಟ್ಟಿತ್ತು. ಇದನ್ನು ಪ್ರಶ್ನಿಸಿ ಹಾಜಿ ಮೆಹಬೂಬ್‌ ಅಹಮ್ಮದ್‌ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಸಿಬಿಐ ಕೂಡ ವಿಚಾರಣೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿತ್ತು. ಇದಕ್ಕೀಗ ಸುಪ್ರೀಂ ಕೋರ್ಟ್‌ ಇದಕ್ಕೆ  ಅವಕಾಶ ಕಲ್ಪಿಸಿ, ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿರುವುದು ಬಿಜೆಪಿಯ ಹಿರಿಯ ನಾಯಕರ ಆತಂಕಕ್ಕೆ ಕಾರಣವಾಗಿದೆ.

ಸುಪ್ರೀಂಕೋರ್ಟ್‌ನ ಈ ಆದೇಶದ ಪರಿಣಾಮ ಬಿಜೆಪಿ ಪಾಳಯದಲ್ಲಿಯೂ ಒತ್ತಡ ಹೆಚ್ಚಿದೆ. “ಕರಸೇವಕರ’ ವಿಚಾರಣೆಗೆ ಯಾವುದೇ ಅಭ್ಯಂತರವಿಲ್ಲ ಎಂದಿರುವ ಸುಪ್ರೀಂಕೋರ್ಟ್‌, ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪ್ರತಿದಿನ ವಿಚಾರಣೆ ನಡೆಸಿ ಬೇಗ ಇತ್ಯರ್ಥಗೊಳಿಸಲು ನಿರ್ಧರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿ.ಸಿ.ಘೋಷ್‌ ಮತ್ತು ಆರ್‌.ಎಫ್. ನಾರಿಮನ್‌ ಅವರನ್ನೊಳಗೊಂಡ ನ್ಯಾಯಪೀಠ, “ಅಲಹಾಬಾದ್‌ ಹೈಕೋರ್ಟ್‌ ತೀರ್ಪಿನ ವಿರುದ್ಧ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಲಾಗಿದೆ ಎಂದಿದೆ.

ಆಡ್ವಾಣಿ ಮತ್ತು ಇತರ 20 ಮಂದಿ ವಿರುದ್ಧ ಸೆಕ್ಷನ್‌ 120ಬಿ, 153ಎ, 153ಬಿ ಮತ್ತು 505 ಅಡಿಯಲ್ಲಿ ಎಫ್ಐಆರ್‌ ದಾಖಲಾಗಿದ್ದು, ವಿಚಾರಣೆ ನಿರಂತರವಾಗಿ ನಡೆದುಕೊಂಡು ಬಂದಿದೆ. 25 ವರ್ಷಗಳಿಂದ ವಿಚಾರಣೆ ಹಂತದಲ್ಲಿಯೇ ಇರುವ ಬಿಜೆಪಿ ನಾಯಕರ ಮೇಲಿನ ಆರೋಪ ಒಂದೊಮ್ಮೆ ಸಾಬೀತಾದಲ್ಲಿ ಐದು ವರ್ಷ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ.

Advertisement

ಕಲ್ಯಾಣ ಸಿಂಗ್‌ ವಿಚಾರಣೆ ಸದ್ಯಕ್ಕಿಲ್ಲ:
ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ಮಾಜಿ ಸಿಎಂ, ರಾಜಸ್ಥಾನದ ಹಾಲಿ ರಾಜ್ಯಪಾಲ ಕಲ್ಯಾಣ್‌ ಸಿಂಗ್‌ ವಿಚಾರಣೆಯಿಂದ ಹೊರತಾಗಿಲ್ಲ. ಆದರೆ ಸದ್ಯಕ್ಕೆ ರಾಜ್ಯಪಾಲರಾಗಿರುವ ಕಾರಣ ರಾಜೀನಾಮೆ ನೀಡಿ ಪ್ರಕರಣ ಎದುರಿಸಬೇಕಾಗಿಲ್ಲ. ಅವರ ಅವಧಿ ಪೂರ್ಣಗೊಂಡ ಬಳಿಕ ವಿಚಾರಣೆ ನಡೆಸಿದರೆ ಸಾಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ. 1992ರಲ್ಲಿ ಈ ಪ್ರಕರಣ ನಡೆಯುವಾಗ ಕಲ್ಯಾಣ್‌ ಸಿಂಗ್‌ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು.

ನ್ಯಾಯಾಧೀಶರ ಬದಲಾವಣೆ ಇಲ್ಲ:
ಈ ಪ್ರಕರಣ ಇತ್ಯರ್ಥಗೊಳ್ಳುವ ತನಕ ನ್ಯಾಯಪೀಠದಲ್ಲಿರುವ ನ್ಯಾಯಾಧೀಶರೇ ಮುಂದುವರಿಯಬೇಕು. ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡುವಂತಿಲ್ಲ ಎನ್ನುವ ಅಭಿಪ್ರಾಯವನ್ನು ಸುಪ್ರೀಂಕೋರ್ಟ್‌ ವ್ಯಕ್ತಪಡಿಸಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳ ವಿಚಾರಣೆ ರಾಯ್‌ಬರೇಲಿ ಮತ್ತು ಲಕ್ನೋಗಳಲ್ಲಿ, ಎರಡು ಕಡೆ ನಡೆಸಬೇಕಾಗಿಲ್ಲ. ಒಟ್ಟುಗೂಡಿಸಿ ಒಂದೇ ಕಡೆ ವಿಚಾರಣೆ ನಡೆಸಿ. ನ್ಯಾಯಾಧೀಶರಿಲ್ಲ ಎನ್ನುವ ಕಾರಣಕ್ಕೆ ವಿಚಾರಣೆಯನ್ನೂ  ಮುಂದೂಡುವಂತಿಲ್ಲ. ಮುಂದಿನ ನಾಲ್ಕು ವಾರಗಳಲ್ಲಿ ವಿಚಾರಣೆ ಆರಂಭಗೊಳ್ಳಬೇಕು ಎಂದಿದೆ.
1992ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ಲಕ್ನೋ ಮತ್ತು ರಾಯ್‌ಬರೇಲಿಗಳಲ್ಲಿ ಪ್ರತ್ಯೇಕ ದೂರುಗಳನ್ನು ನೀಡಲಾಗಿತ್ತು. ಅಲ್ಲದೆ, ಪ್ರತ್ಯೇಕವಾಗಿಯೇ ವಿಚಾರಣೆ ನಡೆದಿದೆ. ಬಳಿಕ ಏಪ್ರಿಲ್‌ 6ರಂದು ಒಂದೇ ಕಡೆ ವಿಚಾರಣೆ ನಡೆಸಲು ನ್ಯಾಯಪೀಠ ಸೂಚನೆ ನೀಡಿತ್ತು.

ಜಂಟಿಯಾಗಿ ವಿಚಾರಣೆ ನಡೆಸುವ ಬಗ್ಗೆ ಬಿಜೆಪಿ ನಾಯಕ ಲಾಲ್‌ಕೃಷ್ಣ ಆಡ್ವಾಣಿ ಮತ್ತು ಎಂ. ಎಂ. ಜೋಷಿ ಪರ ವಕೀಲ ಕೆ.ಕೆ. ವೇಣುಗೋಪಾಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬುಧವಾರ ಸಂಜೆ ಇಬ್ಬರೂ ನಾಯಕರು ಭೇಟಿಯಾಗಿ ಸುಪ್ರೀಂ ಆದೇಶದ ಬಗ್ಗೆ ಚರ್ಚಿಸಿದ್ದಾರೆ.

ಆರೋಪಿಗಳು ಯಾರು?
ಎಲ್‌ ಕೆ ಅಡ್ವಾಣಿ (ಸಂಸದರು)
ಮುರುಳಿ ಮನೋಹರ ಜೋಷಿ (ಬಿಜೆಪಿ ಮಾರ್ಗದರ್ಶಕ್‌ ಮಂಡಳಿ ಸದಸ್ಯ)
ಉಮಾಭಾರತಿ (ಕೇಂದ್ರ ಸಚಿವೆ)
ಕಲ್ಯಾಣ್‌ ಸಿಂಗ್‌ (ರಾಜಾಸ್ಥಾನ ರಾಜ್ಯಪಾಲ)
ಬಾಳಾ ಠಾಕ್ರೆ (ಮೃತರಾಗಿದ್ದಾರೆ)
ಗಿರಿರಾಜ್‌ ಕಿಶೋರ್‌ (ಮೃತರಾಗಿದ್ದಾರೆ)

ಮುಂದಿನ ಕಾನೂನಿನ ಹೆಜ್ಜೆ
* ನಾಲ್ಕು ವಾರದೊಳಗೆ ವಿಚಾರಣಾ ಕೋರ್ಟ್‌ ಸ್ಥಾಪನೆ
* ಎರಡು ವರ್ಷದೊಳಗೆ ವಿಚಾರಣೆ ಪೂರ್ಣ
* ಪ್ರತಿದಿನ ವಿಚಾರಣೆ ನಡೆಸಬೇಕು
* ವಿಚಾರಣೆ ಮುಂದೂಡುವಂತಿಲ್ಲ
* ಆರೋಪ ಸಾಬೀತಾದಲ್ಲಿ ರೋಪಿಗಳು ಐದು ವರ್ಷ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ.

ಮುಂದಿನ ರಾಜಕೀಯ ಬೆಳವಣಿಗೆ?
* ಎಲ್‌.ಕೆ. ಆಡ್ವಾಣಿ ಅವರಿಗೆ ರಾಷ್ಟ್ರಪತಿಯಾಗುವ ಅವಕಾಶ ಕೈತಪ್ಪಬಹುದು
* ಉಮಾ ಭಾರತಿ ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಒತ್ತಡ ಹೆಚ್ಚಬಹುದು
* ಹಿಂದುತ್ವದ ಬಲದಿಂದ ರಾಜಕಾರಣ ಮಾಡುತ್ತಿರುವ ಬಿಜೆಪಿಗೆ ಮಹತ್ವದ್ದಾಗಿ ಪರಿಣಮಿಸಲಿದೆ.
* ಕಾಂಗ್ರೆಸ್‌ ಸೇರಿ ವಿಪಕ್ಷಗಳಿಗೆ ಇದರಿಂದ ಬಹಳ ಲಾಭವೇನು ಇಲ್ಲ.

ಉಮಾ ರಾಜೀನಾಮೆ ನೀಡಬೇಕಿಲ್ಲ-ಜೇಟ್ಲಿ
ಬಾಬ್ರಿ ಮಸೀದಿ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ಉಮಾ ಭಾರತಿ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿತ್ತ ಸಚಿವ ಅರುಣ್‌ ಜೇಟ್ಲಿ, ಈ ಪ್ರಕರಣ 1993ರಿಂದಲೂ ನಡೆದುಕೊಂಡು ಬಂದಿದೆ. ಈ ಹಿಂದೆ ಇಂದ ಪರಿಸ್ಥಿತಿಯೇ ಈಗಲೂ ಇದೆ. ಗಂಭೀರವಾಗಿ ಯೀಚಿಸುವಂಥದ್ದೇನು ಹೊಸತು ಈಗ ನಡೆದಿಲ್ಲ. ಇದೇ ಸ್ಥಿತಿ ಮುಂದುವರಿಯಲಿದೆ. ಈ ಹಿಂದೆ ಅನೇಕ ಕಾಂಗ್ರೆಸ್‌ ನಾಯಕರ ಮೇಲೂ ಇಂಥ ಗಂಭೀರ ಆರೋಪಗಳು ಕೇಳಿಬಂದಿವೆ. ಆದರೆ ಅವರೇನು ಮಾಡಿದ್ದರು? ಆರೋಪದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕಾಗಿಲ್ಲ ಎಂದು ಹೇಳಿದ್ದಾರೆ. ಉಮಾ ಭಾರತಿ ಕೂಡ ತಾವು ರಾಜೀನಾಮೆ ನೀಡುವ ಪ್ರಮೇಯವೇ ಇಲ್ಲ ಎಂದಿದ್ದಾರೆ.

ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ಕಾಂಗ್ರೆಸ್‌
ಬಾಬ್ರಿ ಮಸೀದಿ ಧ್ವಂಸ ಸಂಚು ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ ಆದೇಶ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್‌ ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ಧ ವಾಗಾœಳಿ ನಡೆಸಿದೆ. ಪ್ರಕರಣದಲ್ಲಿ ತಪ್ಪಿತಸ್ಥರು ಎನಿಸಿಕೊಂಡವರು ಕಠಿಣ ಶಿಕ್ಷೆ ಅನುಭವಿಸಬೇಕು. ಸುಪ್ರೀಂಕೋರ್ಟ್‌ ವಿಚಾರಣೆ ನಡೆಸುತ್ತಿದ್ದು, ಶೀಘ್ರ ಇತ್ಯರ್ಥಗೊಳಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಪ್ರಕಟಿಸುತ್ತದೆನ್ನುವ ವಿಶ್ವಾಸವಿದೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲಾ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಕಿಡಿ ಕಾರಿದ ಅವರು, “ಮೋದಿ ಅವರು ಗಂಭೀರ ಆರೋಪ ಎದುರಿಸುತ್ತಿರುವವರಿಗೆ ಸಚಿವ ಸ್ಥಾನ ನೀಡಿ ಮೆರೆದಾಡಿಸುತ್ತಿದೆ. ಮೊದಲು ಅವರಿಂದ ರಾಜೀನಾಮೆ ಪಡೆಯಬೇಕು’ ಕಾನೂನು ಎಲ್ಲರಿಗೂ ಒಂದೇ ಆಗಿದೆ ಎಂದಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್‌ ಸಿಬಲ್‌ ಕೂಡ ಸುಪ್ರೀಂ ಆದೇಶವನ್ನು ಸ್ವಾಗತಿಸಿದ್ದು, ಮೋದಿ ಕೂಡ ಇದನ್ನು ಪಾಲಿಸುತ್ತಾರೆನ್ನುವ ವಿಶ್ವಾಸವಿದೆ ಎಂದಿದ್ದಾರೆ.

ಈ ನಡುವೆ ಸುಪ್ರೀಂಕೋರ್ಟ್‌ ಆದೇಶವನ್ನು ಎನ್‌ಸಿಪಿ ಕೂಡ ಸ್ವಾಗತಿಸಿದೆ. ಕೇಂದ್ರ ಸಚಿವೆ ಉಮಾ ಭಾರತಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಎನ್‌ಸಿಪಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದೆ.

ಎಲ್‌.ಕೆ. ಆಡ್ವಾಣಿ ಅವರೂ ರಾಷ್ಟ್ರಪತಿ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿದ್ದು, ಇದನ್ನು ತಪ್ಪಿಸಬೇಕೆನ್ನುವ ಕಾರಣಕ್ಕಾಗಿ ನರೇಂದ್ರ ಮೋದಿ ಅವರು ಈ ನಾಟಕ ಹೆಣೆದಿದ್ದಾರೆ. ಕಾರಣ ಸಿಬಿಐ ಈಗ ಅವರ ನಿಯಂತ್ರಣದಲ್ಲಿದೆ. ಇದು ಅವರ ರಾಜಕೀಯ ಕುತಂತ್ರ.
-ಲಾಲೂ ಪ್ರಸಾದ್‌ ಯಾದವ್‌, ಆರ್‌ಜೆಡಿ ಮುಖ್ಯಸ್ಥ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವೇ ನನ್ನ ಜೀವನದ ಕನಸು. ರಾಮ ಮಂದಿರ ನಿರ್ಮಾಣಕ್ಕಾಗಿ ಏನನ್ನೂ ತ್ಯಜಿಸಲು ಸಿದ್ಧ, ಏನನ್ನೂ ಅನುಭವಿಸಲು ಸಿದ್ಧನಿದ್ದೇನೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಲೇಬೇಕು.
– ಉಮಾ ಭಾರತಿ, ಕೇಂದ್ರ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next