Advertisement

ನಕಲಿ ಮತದಾರ ಚೀಟಿ ಪ್ರಕರಣಕ್ಕೆ ಮರುಜೀವ 

04:36 PM Feb 09, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಭಾರಿ ವಿವಾದ ಎಬ್ಬಿಸಿದ್ದ 2018ರ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಖಾಸಗಿ ಫ್ಲಾಟ್‌ನಲ್ಲಿ ಭಾರಿ ಪ್ರಮಾಣದ ನಕಲಿ ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಜರುಗಿಸದಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್‌ ಗುರುವಾರ ಪೊಲೀಸ್‌ ಇಲಾಖೆಗೆ ನೋಟಿಸ್‌ ಜಾರಿಗೊಳಿಸಿದೆ.

Advertisement

ಬಿಜೆಪಿ ಪರಾಜಿತ ಅಭ್ಯರ್ಥಿ ಪಿ.ಎಂ.ಮುನಿರಾಜುಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅರವಿಂದ್‌ ಕುಮಾರ್‌ ಅವರಿದ್ದ ಏಕಸದಸ್ಯಪೀಠ ಗೃಹ ಇಲಾಖೆ ಕಾರ್ಯದರ್ಶಿ, ಡಿಜಿಪಿ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 2018ರ ಮೇ 8ರಂದು ಜಾಲಹಳ್ಳಿ ಸಮೀಪದ ಫ್ಲಾಟ್‌ವೊಂದರಲ್ಲಿ ಕಾಂಗ್ರೆಸ್‌ ಶಾಸಕರಾಗಿದ್ದ ಮುನಿರತ್ನ ಅವರ ಕರಪತ್ರದ ಜೊತೆಗೆ, ಸುಮಾರು 10 ಸಾವಿರಕ್ಕೂ ಹೆಚ್ಚು ಮತದಾರರ ನಕಲಿ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಈ ಬಗ್ಗೆ ಚುನಾವಣಾಧಿಕಾರಿಗಳು ಹಾಗೂ ಜಾಲಹಳ್ಳಿ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ ಪೊಲೀಸರು ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ನ್ಯಾಯಪೀಠಕ್ಕೆ ತಿಳಿಸಿದರು.

ಪ್ರಕರಣದಲ್ಲಿ ಹಾಲಿ ಶಾಸಕ ಮುನಿರತ್ನ ಆರೋಪಿಯಾಗಿದ್ದಾರೆ. ಆದರೆ, ಅವರು ನಾಪತ್ತೆಯಾಗಿದ್ದಾರೆಂದು ಪೊಲೀಸರು ಅಧೀನ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅವರು ಖುದ್ದು ಎಲ್ಲ ಸಚಿವರ ಜೊತೆ ಓಡಾಡಿಕೊಂಡಿದ್ದಾರೆ. ಸಭೆ, ಸಮಾರಂಭಗಳಲ್ಲಿ, ಈಗ ಅಧಿವೇಶನದಲ್ಲೂ ಭಾಗಿಯಾಗುತ್ತಿದ್ದಾರೆ. ಆದರೆ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ.

ಕೂಡಲೇ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶ ನೀಡಬೇಕೆಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರತಿವಾದಿಗಳಿಗೆ ಮೊದಲು ನೋಟಿಸ್‌ ಜಾರಿಗೊಳಿಸೋಣ ಅವರ ಉತ್ತರ ಬಂದ ನಂತರ ಮುಂದಿನ ಆದೇಶ ಮಾಡೋಣ ಎಂದು ಹೇಳಿ ವಿಚಾರಣೆಯನ್ನು ಮಾರ್ಚ್‌ ತಿಂಗಳಿಗೆ ಮುಂದೂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next