Advertisement
ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ ದೇಶ. ಪ್ರಜಾಪ್ರಭುತ್ವದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಹೆಚ್ಚಿನ ಮಹತ್ವವಿದೆ. ಪಂಚಾಯತ್ ರಾಜ್ ವ್ಯವಸ್ಥೆ ಯನ್ನು ಪ್ರಜಾಪ್ರಭುತ್ವದ ಬುನಾದಿ ಎಂದು ಕರೆಯುತ್ತಾರೆ. ಪಂಚಾಯತ್ ರಾಜ್ ವ್ಯವಸ್ಥೆ ಸಂವಿಧಾನದ 73ನೇ ತಿದ್ದು ಪಡಿಗಿಂತಲೂ ಮುಂಚಿತವಾಗಿ ದೇಶದಲ್ಲಿ ಬೇರು ಬಿಟ್ಟಿರುವುದು ನಮಗೆಲ್ಲ ತಿಳಿದ ವಿಷಯವಾಗಿದೆ. ಸಂವಿಧಾನದ 73ನೇ ತಿದ್ದುಪಡಿಯ ಅನಂತರ ದೇಶಾದ್ಯಂತ 3 ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ.
Related Articles
Advertisement
ಇಷ್ಟು ಜವಾಬ್ದಾರಿ ಮತ್ತು ಕರ್ತವ್ಯ ಇರುವ ಪ್ರತಿನಿಧಿಗಳ ಈಗಿರುವ ಕನಿಷ್ಠ ಗೌರವಧನ ಕಳೆದ 6 ವರ್ಷಗಳಿಂದ ಪರಿಷ್ಕರಣೆ ಆಗಿರುವುದಿಲ್ಲ. ಜವಾಬ್ದಾರಿ ಇರುವ ಪ್ರತಿನಿಧಿ ತನ್ನ ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸಲು, ಸಮಸ್ಯೆಗೆ ಪರಿಹಾರ ನೀಡಲು, ಸಂಬಂಧಪಟ್ಟ ಅರ್ಜಿಯ ಕುರಿತು ಮಾಹಿತಿ ನೀಡಲು ಅದಕ್ಕಿಂತ ಹೆಚ್ಚಾಗಿ ಪಂಚಾಯತ್ ಅಧಿಕಾರಿಗಳು ಮತ್ತು ಜನರ ಮಧ್ಯೆ ಸಂವಹನ ಮಾಧ್ಯಮವಾಗಿ ಸಹಕರಿಸಲು ಪ್ರತೀ ದಿನ ಅವನ ಎಲ್ಲ ಕಾರ್ಯವನ್ನು ಬದಿಗೊತ್ತಿ ಪಂಚಾಯತ್‌ಗೆ ಭೇಟಿ ನೀಡಬೇಕಾಗುತ್ತದೆ. ಅಲ್ಲದೇ ಪ್ರತೀ ಪ್ರತಿನಿಧಿಯೂ ತಿಂಗಳಿಗೆ 6 ರಿಂದ 8 ಬಾರಿಯಾದರೂ ಒಂದಲ್ಲ ಒಂದು ಸಭೆಗೋ ತರಬೇತಿಗೋ ಹಾಜರಾಗಬೇಕಾಗುತ್ತದೆ. ಈ ಕಾರ್ಯವನ್ನು ಪ್ರತೀ ಪ್ರತಿನಿಧಿಯೂ ಕಾಯಾ-ವಾಚಾ-ಮನಸಾ ರೂಪದಲ್ಲಿ ಮಾಡುತ್ತಿದ್ದಾನೆ.
ಪಂಚಾಯತ್ ಪ್ರತಿನಿಧಿ ಗಳು ಶೇ. 100ರಷ್ಟು ಗ್ರಾಮೀಣ ಪ್ರದೇಶದ ವರಾಗಿದ್ದು ಹೆಚ್ಚಿನವರಿಗೆ ಯಾವುದೇ ಇತರ ಮೂಲ ಆದಾಯ ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಆಡಳಿತ ಚುನಾವಣೆಗೆ ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರು ಮತ್ತು ಮೀಸಲಾತಿ ಕ್ಷೇತ್ರ ಗಳಿಂದ ಆಯ್ಕೆ ಆಗಿದ್ದು ಅವರ ದೈನಂದಿನ ಚಟುವಟಿಕೆಗಳಿಗೆ ಕೂಲಿ ಕೆಲಸ ಮತ್ತು ಸ್ವಂತ ಕೆಲಸವನ್ನು ನಂಬಿರುತ್ತಾರೆ. ಅವರಿಂದ ಗ್ರಾಮೀಣ ಪಂಚಾಯತ್ ಮಟ್ಟದಲ್ಲಿ ಈಗಿರುವ ಪರಿಸ್ಥಿತಿಯಲ್ಲಿ ಉತ್ತಮ ಆಡಳಿತ ನಿರೀಕ್ಷಿಸುವುದು ತಪ್ಪಾದರೂ ಅವರ ಕರ್ತವ್ಯವನ್ನು ಬಲು ಕಷ್ಟದಿಂದ ಮಾಡುತ್ತಿದ್ದು ಶ್ಲಾಘನೀಯವಾಗಿದೆ. ಆದರೆ ಯಾವುದೇ ಸರಕಾರ ಬಂದರೂ ಗೌರವಧನ ಹೆಚ್ಚಿಸುವ ಯೋಚನೆ ಮತ್ತು ಯೋಜನೆ ಕಾರ್ಯರೂಪಕ್ಕೆ ತಾರದೆ ರಾಜ್ಯ ಪ್ರತಿನಿಧಿಗಳ ಗೌರವಧನವನ್ನು ದುಪ್ಪಟ್ಟುಗೊಳಿಸುವಲ್ಲಿ ಪಕ್ಷಾತೀತವಾಗಿ ಒಕ್ಕೊರಲಿನಿಂದ ಮಸೂದೆಗೆ ಅಂಗೀಕಾರ ನೀಡಿರುವುದು ವಿಪರ್ಯಾಸ ಮತ್ತು ಪ್ರತೀ 5 ವರ್ಷಗಳಿಗೊಮ್ಮೆ ಶಾಸಕರ, ಸಚಿವರ ವೇತನ ಭತ್ತೆ ಪರಿಷ್ಕರಣೆಯಾಗಬೇಕು ಎಂದು ಮಸೂದೆಯಲ್ಲಿ ಸೇರಿಸಿರುವುದು ಕುತೂಹಲಕಾರಿಯಾದ ಅಂಶವಾಗಿದೆ.
ಪಂಚಾಯತ್ ಪ್ರತಿನಿಧಿಗಳಿಗೆ ಯಾವ ರೀತಿಯ ಆರ್ಥಿಕ ಸಮಸ್ಯೆ ಎನ್ನುವ ಪ್ರಶ್ನೆ ಕೆಲವರಲ್ಲಿ ಮೂಡಬಹುದು. ತನ್ನ ಸ್ವಂತ ಕಾರ್ಯವನ್ನು ಬಿಟ್ಟು ಸಂಪಾದನೆ ಮಾಡಲು ಸಮಯ ಸಿಗದ ಸ್ಥಿತಿ ಒಂದೆಡೆಯಾದರೆ ಅತೀ ಬಡವರ ಕೆಲವೊಂದು ಪಂಚಾಯತ್ ಕಾರ್ಯ ಮಾಡಿಕೊಡಲು ತನ್ನ ಸ್ವಂತ ಹಣವನ್ನು ಅನಿವಾರ್ಯವಾಗಿ ಉಪಯೋಗಿಸಬೇಕಾಗಿರುತ್ತದೆ. ಅಲ್ಲದೇ ಪ್ರಾಕೃತಿಕ ವಿಕೋಪ, ಆತ್ಮಹತ್ಯೆ, ಅಸ್ವಾಭಾವಿಕ ಮರಣದ ಸಂದರ್ಭದಲ್ಲಿ ಸ್ವಾಭಿಮಾನದ ಪ್ರತಿಷ್ಠೆಗಾಗಿ ತನ್ನ ಜೇಬಿಗೆ ಕೈ ಹಾಕುವ ಸ್ಥಿತಿ ಎದುರಾಗುತ್ತದೆ. ಅದರಲ್ಲಿಯೂ ಜನರು ನಮ್ಮ ಮೇಲೆ ಇಟ್ಟ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಗೆ ಒಳಗಾಗಿ ಕೆಲವೊಂದು ಕಾರ್ಯಕ್ರಮಗಳಿಗೆ ವಂತಿಗೆ ನೀಡುವ ಸಂಪ್ರದಾಯವು ಪಂಚಾಯತ್ ಪ್ರತಿನಿಧಿಗೆ “ಸಾಲಮಾಡಿ ತುಪ್ಪ ತಿನ್ನುವ” ಸ್ಥಿತಿಯಂತಾಗಿದೆ.
ಮುಂದಿನ ದಿನಗಳಲ್ಲಿ ಸರಕಾರ ಪಂಚಾಯತ್ ಪ್ರತಿನಿಧಿಗಳ ಗೌರವಧನ ಹೆಚ್ಚಳ ಮಾಡದಿದ್ದರೆ ಪಂಚಾಯತ್ ರಾಜ್ ವ್ಯವಸ್ಥೆಯ ಅಭಿವೃದ್ಧಿಗೆ ಹೊಡೆತ ಬೀಳುವ ಸಂದರ್ಭ ಬಂದರೂ ಬರಬಹುದು. ಸ್ವಾಭಿಮಾನಿಗಳಾದ ಪಂಚಾಯತ್ ಪ್ರತಿನಿಧಿಗಳು ಸರಕಾರದಿಂದ ಇಂತಿಷ್ಟು ನೀಡಿ ಎಂದು ಕೈ ಚಾಚುವಷ್ಟು ಸಣ್ಣವರಲ್ಲ. ಸರಕಾರದ ಪ್ರತಿನಿಧಿಗಳು ಇದರ ಕುರಿತು ಚಿಂತನೆ ನಡೆಸಿ ಪ್ರಜಾಪ್ರಭುತ್ವದ ತಾಯಿ ಬೇರಿಗೆ ನೀರೆರೆದರೆ ಉತ್ತಮ ಫಲ ನೀಡಿ ಗ್ರಾಮ ಸ್ವ-ರಾಜ್ಯದ ಕನಸು ನನಸಾಗಬಹುದೇನೋ.
– ಕನ್ನಾರು ಕಮಲಾಕ್ಷ ಹೆಬ್ಟಾರ್ ಚೇರ್ಕಾಡಿ