Advertisement

Revised proposal; ಪರಿಸರ ಸೂಕ್ಷ್ಮ ವಲಯ: ಸಮಗ್ರ ಪರಾಮರ್ಶೆ ಅಗತ್ಯ

11:55 PM Feb 23, 2024 | Team Udayavani |

ರಾಜ್ಯದ ಪ್ರಮುಖ ಆರು ವನ್ಯಜೀವಿ ಧಾಮಗಳ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿ ಪ್ರದೇಶವನ್ನು ಪರಿಷ್ಕರಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸದ್ಯ ಈ ವನ್ಯಜೀವಿ ಧಾಮಗಳ ಸುತ್ತಮುತ್ತಲಿನ 10 ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿ ಎಲ್ಲ ತೆರನಾದ ಮಾನವ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಈಗ ರಾಜ್ಯ ಸರಕಾರ ಈ ವನ್ಯಜೀವಿ ಧಾಮಗಳ ಸುತ್ತಮುತ್ತಲಿನ ಒಂದು ಕಿ.ಮೀ. ವ್ಯಾಪ್ತಿಯನ್ನು ಮಾತ್ರವೇ ಪರಿಸರ ಸೂಕ್ಷ್ಮ ವಲಯವೆಂದು ಪರಿಗಣಿಸಲು ತೀರ್ಮಾನಿಸಿದೆ. ಪರಿಷ್ಕೃತ ಪ್ರಸ್ತಾವನೆಗೆ ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಒಪ್ಪಿಗೆ ಲಭಿಸಿದ ಬಳಿಕವಷ್ಟೆ ಇದು ಜಾರಿಗೆ ಬರಲಿದೆ.

Advertisement

ರಾಜ್ಯ ಸರಕಾರದ ಈ ಹೊಸ ಪ್ರಸ್ತಾವನೆ ಅರಣ್ಯದಂಚಿನಲ್ಲಿರುವ ರೈತರು ಮತ್ತು ಆದಿವಾಸಿಗಳಿಗೆ ತಮ್ಮ ದೈನಂದಿನ ಚಟುವಟಿಕೆಗಳನ್ನು ನಡೆಸಲು ಅನುವು ಮಾಡಿಕೊಡಲಿದೆ. ಅಷ್ಟು ಮಾತ್ರವಲ್ಲದೆ ಈ ವನ್ಯಜೀವಿ ಧಾಮದ ಸುತ್ತಮುತ್ತ 10 ಕಿ.ಮೀ. ವ್ಯಾಪ್ತಿಯಲ್ಲಿನ ನಿವಾಸಿಗಳು ಒಕ್ಕಲೇಳಲೇ ಬೇಕಾದ ಅನಿವಾರ್ಯತೆಯೂ ತಪ್ಪಿದಂತಾಗಿದೆ. ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಬಫ‌ರ್‌ ಝೋನ್‌ಗಳಲ್ಲಿ ಯಾವುದೇ ಚಟುವಟಿಕೆ ನಡೆಸುವುದಕ್ಕೆ ನಿರ್ಬಂಧವಿರುವುದರಿಂದ ರಾಜ್ಯ ಸರಕಾರದ ಈ ಪ್ರಸ್ತಾವನೆಯಿಂದಾಗಿ ಸ್ಥಳೀಯ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದ್ದು ಅತಂತ್ರತೆಯ ಭೀತಿಯಿಂದ ಪಾರಾಗಿದ್ದಾರೆ.

ಆದರೆ ರಾಜ್ಯ ಸರಕಾರದ ಈ ತೀರ್ಮಾನ ವನ್ಯಜೀವಿ ಮತ್ತು ಮಾನವ ಸಂಘರ್ಷವನ್ನು ಇನ್ನಷ್ಟು ಹೆಚ್ಚುವಂತೆ ಮಾಡುವ ಸಾಧ್ಯತೆಗಳಿವೆ. ಸಂರಕ್ಷಿತ ಅರಣ್ಯ ಪ್ರದೇಶದ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ವನ್ಯಜೀವಿಗಳ ಓಡಾಟ ಸಹಜವೇ ಆಗಿದೆ. ಈಗ ಸರಕಾರ ನಿರ್ಬಂಧಿತ ವಲಯವನ್ನು ಕೇವಲ ಒಂದು ಕಿ.ಮೀ. ವ್ಯಾಪ್ತಿಗೆ ಸೀಮಿತಗೊಳಿಸಿರುವುದರಿಂದ ಮುಂದಿನ ದಿನಗಳಲ್ಲಿ ಅರಣ್ಯ ತಪ್ಪಲಿನ ಪ್ರದೇಶದಲ್ಲಿ ಮಾನವ ಚಟುವಟಿಕೆ ಹೆಚ್ಚಲಿದೆ. ಇನ್ನು ಮುಂದೆ ಸರಕಾರ ವನ್ಯಜೀವಿ ಧಾಮಗಳ ಒಳಗೆ ವನ್ಯಜೀವಿಗಳ ಸುರಕ್ಷೆಗೆ ಹೆಚ್ಚಿನ ಒತ್ತು ನೀಡಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿರುವರಾದರೂ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯನ್ನು ಕಡಿತ ಮಾಡಲಾಗಿರುವ ಪರಿಣಾಮ ಈ ಪ್ರದೇಶದಲ್ಲಿ ಮಾನವ ಚಟುವಟಿಕೆಗಳಿಂದಾಗಿ ವನ್ಯಜೀವಿಗಳ ಸಹಜ ಓಡಾಟಕ್ಕೆ ಅಡಚಣೆಯುಂಟಾಗುವ ಸಾಧ್ಯತೆಗಳಿಲ್ಲದಿಲ್ಲ. ಇದರಿಂದಾಗಿ ವನ್ಯಜೀವಿಗಳು ದಾಳಿ ನಡೆಸುವ ಸಾಧ್ಯತೆಗಳು ಅಧಿಕವಾಗಿವೆ.

ಒಂದೆಡೆಯಿಂದ ವನ್ಯಜೀವಿಗಳ ರಕ್ಷಣೆಗಾಗಿ ಸಂರಕ್ಷಿತ ಅರಣ್ಯ ಎಂದು ಘೋಷಿಸಿ, ಮಾನವ ಚಟುವಟಿಕೆಗಳನ್ನು ನಿರ್ಬಂಧಿಸಲಾಗುತ್ತಿದ್ದರೆ ಮತ್ತೂಂದೆಡೆಯಿಂದ ಸರಕಾರ ಅರಣ್ಯ ತಪ್ಪಲಿನ ಪ್ರದೇಶದಲ್ಲಿ ಮಾನವ ಚಟುವಟಿಕೆಗಳಿಗೆ ಅನುವು ಮಾಡಿಕೊಡುವುದು ವಿಪರ್ಯಾಸವೇ ಸರಿ. ಅರಣ್ಯ ತಪ್ಪಲಿನ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡುವುದರ ಜತೆಯಲ್ಲಿ ಅವರ ಬದುಕಿಗೆ ಸಂಚಕಾರ ಬಾರದಂತೆ ಸರಕಾರ ಜಾಣ್ಮೆಯ ನಡೆಯನ್ನು ತನ್ನದಾಗಿಸಿಕೊಳ್ಳಬೇಕು. ಇದರ ಬದಲಾಗಿ ಏಕಾಏಕಿ ಈ ವನ್ಯಜೀವಿಧಾಮ ಪ್ರದೇಶದ ಪರಿಸರ ಸೂಕ್ಷ್ಮ ವಲಯಗಳ ವ್ಯಾಪ್ತಿಯನ್ನು ಕಡಿತಗೊಳಿಸುವುದರಿಂದ ವನ್ಯಜೀವಿಗಳ ಸಂರಕ್ಷಣೆಯ ಸರಕಾರದ ನೈಜ ಉದ್ದೇಶಕ್ಕೆ ಭಾರೀ ತೊಡಕಾಗಿ ಪರಿಣಮಿಸಲಿದೆ. ಕನಿಷ್ಠ 5 ಕಿ.ಮೀ. ವ್ಯಾಪ್ತಿಯನ್ನಾದರೂ ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಬೇಕಿದೆ. ಹೊಸ ನಿಯಮಾವಳಿ ಜಾರಿಗೂ ಮುನ್ನ ಅದರ ಸಾಧಕ-ಬಾಧಕಗಳ ಬಗೆಗೆ ಇನ್ನೊಮ್ಮೆ ಪರಾಮರ್ಶೆ ನಡೆಸಿ, ಪರಿಸರ ಮತ್ತು ವನ್ಯಜೀವಿ ತಜ್ಞರು ಹಾಗೂ ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ದಿಸೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next