Advertisement

ಪಡುಮಲೆಗೆ ಪರಿಷ್ಕೃತ ಯೋಜನೆ; ಕಾಮಗಾರಿಗೆ ನವೆಂಬರ್‌ನಲ್ಲಿ ಚಾಲನೆ

08:40 AM Sep 05, 2017 | Team Udayavani |

ನಗರ : ಪಡುಮಲೆ ಅಭಿವೃದ್ಧಿಗೆ ಈ ಮೊದಲು ರೂಪಿಸಿದ ಯೋಜನೆಗೆ ಕೆಲವೊಂದು ಬದಲಾವಣೆ ಮಾಡಲಾಗಿದೆ. ಪ್ರಸ್ತುತ ಸೇರಿಸಿರುವ ಕೆಲವೊಂದು ಬದಲವಣೆಯನ್ನು ಸಚಿವ ರಮಾನಾಥ ರೈ ಅವರ ಗಮನಕ್ಕೆ ತಂದು, ಬಳಿಕ ಜಾರಿಗೊಳಿಸಲಾಗುವುದು ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.

Advertisement

ಪುತ್ತೂರು ಸಹಾಯಕ ಆಯುಕ್ತ ಡಾ| ರಘುನಂದನ ಮೂರ್ತಿ ಮತ್ತು ಪಡುಮಲೆ ಯೋಜನೆಯ ಮೇಲ್ವಿಚಾರಕಿ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತೆ ಪ್ರಮೀಳಾ ಅವರ ಜತೆ ಸೋಮವಾರ ಸಭೆ ನಡೆಸಿ ಬಳಿಕ ಮಾಧ್ಯಮದ ಜತೆ ಮಾತನಾಡಿದರು.

ಹೊಸ ಯೋಜನೆ ಸಿದ್ಧ
ಅವಳಿ ವೀರರಾದ ಕೋಟಿ ಚೆನ್ನಯರ ಹುಟ್ಟೂರು ಪಡುಮಲೆ ಅಭಿವೃದ್ಧಿಗೆ ಸಂಬಂಧಿ ಸಿ ರಾಜ್ಯ ಸರಕಾರ ಬಿಡುಗಡೆ ಮಾಡಿರುವ 5 ಕೋಟಿ ರೂ. ಪ್ಯಾಕೇಜ್‌ನಲ್ಲಿ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಇದೀಗ ಕೆಲವು ಆಂಶಗಳು ಸೇರ್ಪಡೆಗೊಂಡಿದೆ. ಇದಕ್ಕೆ ಸಹಾಯಕ ಆಯುಕ್ತರ ಅಧ್ಯಕ್ಷತೆಯ ತಾಲೂಕು ಸಮಿತಿ ಪರಿಶೀಲನೆ ನಡೆಸಿದೆ. ಇದನ್ನು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮಿತಿ ಪರಿಶೀಲನೆ ನಡೆಸಿ, ಅಂತಿಮ ರೂಪ ನೀಡಲಿದೆ.

ಬಳಿಕ ಸರಕಾರದಿಂದ ಅನುಮತಿ ಪಡೆದುಕೊಂಡು, ನವೆಂಬರ್‌ ಹೊತ್ತಿಗೆ ಟೆಂಡರ್‌ ಪ್ರಕ್ರಿಯೆ ನಡೆಸಬೇಕೆಂಬ ಉದ್ದೇಶವಿದೆ ಎಂದರು. ಯೋಜನೆ ಜಾರಿ ವಿಳಂಬ ಕೋಟಿ ಚೆನ್ನಯರ ಹುಟ್ಟೂರಾದ ಪಡುಮಲೆ ಯಲ್ಲಿ ಕೋಟಿ- ಚೆನ್ನಯರ ಬದುಕಿಗೆ ಸಂಬಂಧಪಟ್ಟ ನಾನಾ ಕುರುಹುಗಳಿವೆ. ಅವೆಲ್ಲ ಖಾಸಗಿ ಒಡೆತನದಲ್ಲಿವೆ. ಈ ಜಾಗಗಳನ್ನು ಖಾಸಗಿಯವರು ಸರಕಾರಕ್ಕೆ ಬಿಟ್ಟುಕೊಟ್ಟಲ್ಲಿ ಅದೇ ಜಾಗದಲ್ಲಿ ಅವಶೇಷಗಳನ್ನು ಅಭಿವೃದ್ಧಿ ಮಾಡಿ ಪ್ರವಾಸೋದ್ಯಮ ತಾಣ ಮಾಡಬಹುದಿತ್ತು. ಖಾಸಗಿ ಜಮೀನುದಾರರು ಯಾರೂ ಜಾಗ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಖಾಸಗಿ ಜಾಗದಲ್ಲಿರುವ ಕುರುಹುಗಳ ಅಭಿವೃದ್ಧಿಗೆ ಸರಕಾರದ ಹಣ ಕೊಡುವ ಹಾಗಿಲ್ಲ. ಇದೇ ಕಾರಣದಿಂದ ಈ ಯೋಜನೆ ಜಾರಿ ವಿಳಂಬವಾಯಿತು ಎಂದರು.

ಸದ್ಯ ಶಂಖಪಾಲ ಬೆಟ್ಟದಲ್ಲಿ ಮಾತ್ರ ಸರಕಾರದ ನಿವೇಶನವಿದೆ. ಹೀಗಾಗಿ ಸರಕಾರದ ಐದು ಕೋಟಿ ಅನುದಾನದಲ್ಲಿ ಶಂಖಪಾಲ ಬೆಟ್ಟದಲ್ಲಿ ಮಾತ್ರ ಥೀಂ ಪಾರ್ಕ್‌ ಮಾದರಿಯಲ್ಲಿ ಪ್ರವಾಸೋದ್ಯಮ ತಾಣ ಮಾಡಿ ಕೋಟಿ-ಚೆನ್ನಯರ ಹುಟ್ಟೂರಿಗೆ ಬರುವ ಜನರಿಗೆ ಒಂದು ಅದ್ಭುತ ಕೇಂದ್ರವನ್ನು ನಿರ್ಮಿಸಲು ಯೋಜಿಸಲಾಗಿದೆ.

Advertisement

ಪಾರ್ಕಿಂಗ್‌ ವ್ಯವಸ್ಥೆ
ಶಂಖಪಾಲ ಬೆಟ್ಟದ ತಪ್ಪಲಿನಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇರಲಿದೆ. ಅಲ್ಲಿಂದ ವಿಶಾಲವಾದ ಮೆಟ್ಟಿಲುಗಳು ಮೇಲಕ್ಕೇರಿ ಅರ್ಧದಿಂದ ಅದು ಎರಡು ಕವಲಾಗಿ, ಬೆಟ್ಟದ ತುದಿ ತಲುಪಲಿವೆ. ಮಧ್ಯದಲ್ಲಿ ಬಯಲು ರಂಗಮಂದಿರ ಇರಲಿದೆ. ಮೇಲ್ಭಾಗದಲ್ಲಿ ದೇಯಿ ಬೈದ್ಯೆತಿ ಮತ್ತು ಕೋಟಿ-ಚೆನ್ನಯರ ಪ್ರತಿಮೆ ಇರಲಿದೆ. ಇದಲ್ಲದೆ ಮ್ಯೂಸಿಯಂ, ಲೈಬ್ರೆರಿ, ಕಾನ್ಫ ರೆನ್ಸ್‌ ಹಾಲ್‌, ಶೌಚಾಲಯ, ಪಾರ್ಕ್‌ ಇತ್ಯಾದಿ ನಿರ್ಮಾಣಗೊಳ್ಳಲಿವೆ ಎಂದರು.

ಕಾಮಗಾರಿಯನ್ನು ಸರಕಾರದ ನಿರ್ದಿಷ್ಟ ಇಲಾಖೆಗೆ ವಹಿಸಿಕೊಡುವ ಆಲೋಚನೆ ಇದೆ. ಐದು ಕೋಟಿ ರೂ. ಮೊತ್ತದಲ್ಲಿ ಈಗಾಗಲೇ ಅರ್ಧದಷ್ಟು ಹಣ ಜಿಲ್ಲಾ ಧಿಕಾರಿಯವರ ಖಾತೆಯಲ್ಲಿದೆ. ಉಳಿದ ಹಣ ಕಾಮಗಾರಿ ಮುಗಿದಂತೆ ಬಿಡುಗಡೆಯಾಗಲಿದೆ. ಈಗ ಸಿದ್ಧಪಡಿಸಿರುವ ಯೋಜನೆಗೆ ಐದು ಕೋಟಿ ರೂಪಾಯಿ ಸಾಲದು ಎಂದು ಅಭಿಪ್ರಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next