Advertisement

ಪರಿಷ್ಕೃತ ಯಂತ್ರ ಸಜ್ಜು: ಅಡಿಕೆ ಮರ ಏರುವುದು ಸಲೀಸು

09:24 PM Jun 11, 2019 | mahesh |

ಬಂಟ್ವಾಳ: ಮಳೆಗಾಲದಲ್ಲಿ ಅಡಿಕೆ ಮರ ಜಾರುವಂತಹ ಸಂದರ್ಭದಲ್ಲಿಯೂ ಸಲೀಸಾಗಿ ಮರ ಏರುವ ಯಂತ್ರವನ್ನು ಹಲವಾರು ಬದಲಾವಣೆಗಳ ಬಳಿಕ ಸಜೀಪಮುನ್ನೂರು ಕೋಮಾಲಿನ ಪ್ರಗತಿಪರ ಕೃಷಿಕ ಗಣಪತಿ ಭಟ್‌ ಅದನ್ನು ಸಾರ್ವತ್ರಿಕ ಬಳಕೆ ಬಗ್ಗೆ ಸಜ್ಜಾಗಿದ್ದಾರೆ.

Advertisement

ಅವರು ತಯಾರಿಸಿದ ಮರ ಏರುವ ಯಂತ್ರ ಅತ್ಯಂತ ಸರಳವೂ ಸುಧಾರಿತ ತಂತ್ರಜ್ಞಾನದ್ದೂ ಆಗಿದೆ. ದ್ವಿಚಕ್ರ ವಾಹನದಂತೆ ಸಲೀಸು, ಸೇಫ್ಟಿ ಬೆಲ್ಟ್ ಕಟ್ಟಿಕೊಂಡು ಸ್ವಿಚ್‌ ಒತ್ತಿದರೆ 30 ಸೆಕೆಂಡ್‌ಗಳ ಅಂತರದಲ್ಲಿ ಅಡಿಕೆ ಮರದ ನಿರ್ದಿಷ್ಟ ಭಾಗಕ್ಕೆ ಏರಬಹುದು. ಕೆಳಗೆ ಇಳಿಯುವುದೂ ಇದೇ ಮಾದರಿಯಲ್ಲಿ ಸಲೀಸಾಗಿ ಜಾರಿಕೊಂಡು ಬರಲು ಸಾಧ್ಯವಿದೆ. ಎಲ್ಲಿ ಬೇಕಾದಲ್ಲಿ ನಿಲ್ಲಿಸುವುದಕ್ಕೆ ಸಾಧ್ಯವಾಗುವಂತಿದೆ. ಅಡಿಕೆ ಕೊçಲು ಮಾಡುವ ನಿಷ್ಣಾತರ ಕೊರತೆ ಇರುವ ಈ ಕಾಲದಲ್ಲಿ ಮರ ಏರುವ ಯಂತ್ರವನ್ನು ಹೈಟೆಕ್‌ ಮಾದರಿಯಲ್ಲಿ ನಿರ್ಮಿಸಿ ಸ್ವಂತ ಬಳಕೆ ಜತೆ ರೈತರಿಗೆ ಅನುಕೂಲ ಕಲ್ಪಿಸುವ ಅವರ ಯೋಜನೆ ಎಲ್ಲರಿಂದಲೂ ಶ್ಲಾಘನೆಗ ಪಾತ್ರವಾಗಿದೆ. ಸದ್ಯಕ್ಕೆ ಅಡಿಕೆ ಮರ ಹತ್ತಲು ಉಪಯೋಗವಾಗುತ್ತಿರುವ ಈ ಯಂತ್ರವನ್ನು ಪರಿಷ್ಕರಿಸಿ, ತೆಂಗಿನ ಮರ ಹತ್ತುವಂತೆ ಮಾಡುವ ಯೋಜನೆಯೂ ಭಟ್ಟರಿಗಿದೆ.

ಸುರಕ್ಷಿತ ಯಂತ್ರ
ಟೂ ಸ್ಟ್ರೋಕ್‌ ಎಂಜಿನ್‌ (ಹಳೆ ಚೇತಕ್‌ ಸ್ಕೂಟರ್‌ನಲ್ಲಿರುವಂತೆ) ಆಗಿರುವ ಕಾರಣ, ಪೆಟ್ರೋಲ್‌ ಮತ್ತು ಆಯಿಲ್‌ ಸೂಚಿತ ಪ್ರಮಾಣದಲ್ಲಿ ಹಾಕಿ ಸುಸ್ಥಿತಿಯಲ್ಲಿ ಯಂತ್ರವನ್ನಿಡಬೇಕು. ಬಳಿಕ ತಾವೇರುವ ಅಡಿಕೆ ಮರದ ಬುಡಕ್ಕೆ ಜೋಡಿಸಿ ನೇರವಾಗಿ ಮರಕ್ಕೆ ಏರುವುದಕ್ಕೆ ಸುರಕ್ಷಿತ ಯಂತ್ರವಾಗಿದೆ. ಇದರ ವಿನ್ಯಾಸ ಹೇಗಿದೆ ಎಂದರೆ ಯಂತ್ರವನ್ನು ಬಿಡಿಸಿ, ಅಡಿಕೆ ಮರಕ್ಕೆ ತಾಗಿಸಿದರೆ, ಅದನ್ನು ಕಚ್ಚಿಕೊಂಡು ಕುಳಿತುಕೊಳ್ಳುತ್ತದೆ. ಆದಾದ ಬಳಿಕ ಸೇಫ್ಟಿ ಬೆಲ್ಟ್ ಕಟ್ಟಿಕೊಂಡು ಯಂತ್ರದ ಆಸನದಲ್ಲಿ ಕುಳಿತು, ಸ್ವಿಚ್‌ ಆದುಮಿದರೆ, ಮೇಲಕ್ಕೇರುತ್ತದೆ.

ಅರ್ಧದಲ್ಲಿ ನಿಲ್ಲಿಸಬಹುದು, ಒಮ್ಮೆ ಕೆಳಕ್ಕೆ ಬಂದು ಮತ್ತೆ ಮೇಲಕ್ಕೆ ಹೋಗಲೂಬಹುದು. ಸಾಮಾನ್ಯವಾಗಿ 30 ಸೆಕೆಂಡ್‌ಗಳಲ್ಲಿ ಒಂದು ಅಡಿಕೆ ಮರ ಹತ್ತಬಹುದು. ಕೆಲಸ ಮುಗಿಸಿದ ಬಳಿಕ ಯಂತ್ರದ ಬ್ರೇಕ್‌ ಸಹಾಯದಿಂದ ಹಾಗೆಯೇ ಕೆಳಕ್ಕಿಳಿಯಬಹುದು. ಈ ಸಂದರ್ಭ ಎಂಜಿನ್‌ ಆಫ್‌ ಆದರೂ ಇಳಿಯುವುದಕ್ಕೆ ಸಮಸ್ಯೆ ಇರುವುದಿಲ್ಲ. ತನ್ನ ಸ್ವಂತ ಉಪಯೋಗಕ್ಕಾಗಿ ಮಾಡಿದ ಈ ಪ್ರಯೋಗದ ವಿಡಿಯೋ ವ್ಯಾಪಕವಾಗಿ ಪ್ರಚಾರಗೊಂಡು ನೋಡಲು ದೂರದೂರುಗಳಿಂದ ಕೃಷಿಕರು ಬರುತ್ತಿದ್ದಾರೆ. ಜತೆಗೆ ತಮಗೊಂಡು ಯಂತ್ರ ನಿರ್ಮಿಸಿಕೊಡಿ ಎಂಬ ಬೇಡಿಕೆಯೂ ಬರುತ್ತಿದೆ.

ಮಹಿಳೆಯರಿಗೂ ಸುಲಭ
ಭಟ್ಟರ ಪುತ್ರಿ ಸುಪ್ರಿಯಾ ಮರವೇರುವ ಯಂತ್ರದಲ್ಲಿ ಕುಳಿತು ಸ್ವಿಚ್‌ ಆದುಮಿ ಮೇಲಕ್ಕೆರುವ ದೃಶ್ಯ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕೃಷಿ ನಡೆಸುವವರು ಸ್ವತಃ ದುಡಿಯುವುದಿದ್ದರೆ, ಯಾರ ಸಹಾಯವೂ ಇಲ್ಲದೆ, ತಾವೇ ಮರವೇರಬಹುದು. ಮಹಿಳೆಯರು, ಮಕ್ಕಳಿಗೂ ಇದು ಸೇಫ್‌ ಎನ್ನುವುದು ಪ್ರಾಯೋಗಿಕವಾಗಿ ಸಾಬೀತಾಗಿದೆ ಎನ್ನುತ್ತಾರೆ.

Advertisement

ಬೈಕ್‌ ಮಾದರಿಯ ಯಂತ್ರ
ಸುಮಾರು 28 ಕೆ.ಜಿ. ತೂಕವುಳ್ಳ ಪೆಟ್ರೋಲ್‌ ಚಾಲಿತ 2 ಸ್ಟೋಕ್‌ ಎಂಜಿನ್‌ ಇರುವ ಬೈಕ್‌ ಮಾದರಿಯ ಯಂತ್ರ. ಇದರಲ್ಲಿ ಹೈಡ್ರಾಲಿಕ್‌ ಡಿಸ್ಕ್ ಡ್ರಮ್‌ ಹೊಂದಿದ ಬ್ರೇಕ್‌ ಕೂಡ ಇದೆ. ಗೇರ್‌ ಬಾಕ್ಸ್‌ ಮತ್ತು ಡಬಲ್‌ ಚೈನ್‌ ಒಳಗೊಂಡಿರುವ ಯಂತ್ರದಲ್ಲಿ ಪುಟ್ಟ ಸೀಟ್‌, ಸೇಫ್ಟಿ ಬೆಲ್ಟ್ ವ್ಯವಸ್ಥೆಯಿದೆ. 70 ಕೆ.ಜಿ. ತೂಕವುಳ್ಳ ವ್ಯಕ್ತಿ ಸಲೀಸಾಗಿ ಕುಳಿತುಕೊಳ್ಳಬಹುದು. ಎರಡೂ ಕೈ ಹಿಡಿಯಲು ಹ್ಯಾಂಡಲ್‌ , ಬೈಕ್‌ನ ಹ್ಯಾಂಡ್‌ ಬ್ರೇಕ್‌ ಮಾದರಿಯಲ್ಲಿರುವ ನಿಯಂತ್ರಣ ವ್ಯವಸ್ಥೆಯೂ ಇಲ್ಲಿದೆ. 1 ಲೀ. ಪೆಟ್ರೋಲ್‌ಗೆ ಸರಿಸುಮಾರು 90 ಅಡಿಕೆ ಮರ ಏರಬಹುದು.

 75 ಸಾವಿರ ರೂ. ವೆಚ್ಚದಲ್ಲಿ ಪರಿಷ್ಕೃತ‌ ಮಾದರಿ
ಕರಾವಳಿ ಜಿಲ್ಲೆಯಲ್ಲಿ ಅಡಿಕೆ ಕೃಷಿ ಪ್ರಧಾನವಾಗಿದ್ದು, ಸಲೀಸಾಗಿ ಮರ ಏರುವುದು ಸಮಸ್ಯೆ. ಅದಕ್ಕಾಗಿ ರೊಬೋಟ್‌ ಟೆಕ್ನಾಲಜಿಯನ್ನು ಅಧ್ಯಯನ ಮಾಡುತ್ತಿದ್ದ ಸಂದರ್ಭ ಐದು ವರ್ಷಗಳ ಹಿಂದೆ ಈ ಯಂತ್ರ ನಿರ್ಮಿಸುವ ಆಲೋಚನೆ ಬಂತು. ಸತತ ಅಧ್ಯಯನ ಮತ್ತು ಪೂರಕ ಪರಿಕರಗಳನ್ನು ಜೋಡಿಸಿ, ಪ್ರಯೋಗ ನಡೆಸಿದ ಬಳಿಕ ಈಗಷ್ಟೆ ಯಶಸ್ವಿಯಾಗಿದೆ. ಪ್ರಾಯೋಗಿಕ ಹಂತದಲ್ಲಿ ಸುಮಾರು 4 ಲಕ್ಷ ರೂ. ವೆಚ್ಚ ಬಂದಿದೆ. ಆದರೆ 75 ಸಾವಿರ ರೂ. ವೆಚ್ಚದಲ್ಲಿ ಪರಿಷ್ಕೃತ‌ ಮಾದರಿಯನ್ನು ನಿರ್ಮಿಸಲು ಸಾಧ್ಯ.
– ಗಣಪತಿ ಭಟ್‌, ಪ್ರಗತಿಪರ ಕೃಷಿಕರು

Advertisement

Udayavani is now on Telegram. Click here to join our channel and stay updated with the latest news.

Next