ಬೆಂಗಳೂರು: ಬೆಳ್ಳಂದೂರು ಕೆರೆ ಸ್ವತ್ಛತೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಹಾಗೂ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಆಯುಕ್ತ ರಾಕೇಶ್‌ಸಿಂಗ್ ನೇತೃತ್ವದಲ್ಲಿ ನಿರ್ವಹಣಾ ಸಮಿತಿ ಸಭೆ ನಡೆಸಿ, ಪರಿಷ್ಕೃತ ಕ್ರಿಯಾಯೋಜನೆ ಸಲ್ಲಿಸುವಂತೆ ಹೈಕೋರ್ಟ್ ಶುಕ್ರವಾರ ಸೂಚಿಸಿದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆಯುವ ನಿರ್ವಹಣಾ ಸಮಿತಿ ಸಭೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಜಲಮಂಡಳಿಯ ಪ್ರತಿನಿಧಿಗಳು ಸೇರಿದಂತೆ ಜಾಗತಿಕ ಮಟ್ಟದ ತಜ್ಞರೂ ಭಾಗಿಯಾಗುವಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು. ನಿರ್ವಹಣಾ ಸಭೆಯಲ್ಲಿ ತಜ್ಞರ ಸಲಹೆ ಸೂಚನೆಗಳನ್ನು ಪರಿಗಣಿಸಿ ಷರಿಷ್ಕೃತ ಕ್ರಿಯಾಯೋಜನೆ ಸಿದ್ಧಪಡಿಸಿ, ಅದನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದೂ ತಾಕೀತು ಮಾಡಿದೆ.
ಸಭೆಯಲ್ಲಿ ಎಲ್ಲರ ಸಲಹೆ ಹಾಗೂ ಸೂಚನೆಗಳನ್ನು ಪರಿಗಣಿಸಬೇಕು. ಕಾಲಹರಣವಾಗದಂತೆ ಎಚ್ಚರ ವಹಿಸಬೇಕು. ಕೆರೆ ಸ್ವತ್ಛತೆಯನ್ನು ಸಂಪೂರ್ಣ ಗುತ್ತಿಗೆ ಒಬ್ಬರಿಗೇ ನೀಡುವಂತೆ ನೋಡಿಕೊಳ್ಳಬೇಕು. ಹಲವಾರು ಮಂದಿಗೆ ಟೆಂಡರ್ ನೀಡುವುದು ಬೇಡ. ಇಲ್ಲವೇ ಒಂದು ಇಲಾಖೆ ಈ ಕಾರ್ಯವನ್ನು ನಿರ್ವಹಿಸಬೇಕು. ಹಾಗಂತ, ಸ್ವತ್ಛತೆಗೆ ಅನಗತ್ಯ ಹಣ ಖರ್ಚು ಮಾಡಬಾರದು.
ಹಣ ಪೋಲಾಗದಂತೆ ಎಚ್ಚರ ವಹಿಸಬೇಕು. ಅರ್ಜಿಯ ಮುಂದಿನ ವಿಚಾರಣೆ ದಿನದೊಳಗೆ ಕಾಮಗಾರಿ ಪ್ರಗತಿ ಕಂಡಿರಬೇಕು. ಸೆಪ್ಟೆಂಬರ್ 18ರಂದು ಪರಿಷ್ಕೃತ ಕ್ರಿಯಾಯೋಜನೆ ಹಾಗೂ ಕಾಮಗಾರಿ ಪ್ರಗತಿಯ ವರದಿಯನ್ನೂ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ನ್ಯಾಯಪೀಠ ನಿರ್ದೇಶಿಸಿದೆ.
ಉದ್ದೇಶಿತ ಈ ಕೆರೆ ಸ್ವತ್ಛತೆಗೆ ಸಂಬಂಧಿಸಿದಂತೆ ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಸಂಸದ ಡಿ. ಕುಪೇಂದ್ರ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ಮೊಹಮದ್ ನವಾಜ್ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿತು. ವಿಚಾರಣೆಗೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಹಾಗೂ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತ ರಾಕೇಶ್‌ಸಿಂಗ್ ಹಾಜರಾಗಿದ್ದರು.
ಕ್ಯಾಂಟೀನ್‌ಗೆ ತೋರುವ ಕಾಳಜಿ ಕೆರೆಗಳಿಗೂ ಇರಲಿ: ರಾಜ್ಯ ಸರ್ಕಾರಕ್ಕೆ ಇಂದಿರಾ ಕ್ಯಾಂಟೀನ್ ಮೇಲಿರುವಷ್ಟು ಕಾಳಜಿ, ಕೆರೆ ನಿರ್ವಹಣೆ ಹಾಗೂ ಸ್ವತ್ಛತೆ ಬಗ್ಗೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಬೆಳ್ಳಂದೂರು ಕೆರೆಯ ಸ್ವತ್ಛತೆ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಕೆರೆಗಳ ನಿರ್ವಹಣೆ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ. ಬೆಂಗಳೂರಿನಲ್ಲಿ ಐಐಟಿಯಂತಹ ಸಂಸ್ಥೆಗಳಿವೆ ಹಾಗೂ ಸಾಕಷ್ಟು ತಜ್ಞರು ಇದ್ದಾರೆ. ಅವರನ್ನು ಬಳಸಿಕೊಂಡು ಕೆರೆ ಸ್ವತ್ಛತಾ ಕಾರ್ಯ ನಡೆಸಬೇಕು ಎಂದು ಸಲಹೆ ಮಾಡಿದರು.