Advertisement

ಪರಿಹಾರ ಮೊತ್ತ ಪರಿಷ್ಕರಿಸಿ: ಮಂಜುನಾಥ್‌ ಭಂಡಾರಿ

11:53 PM Sep 16, 2022 | Team Udayavani |

ಬೆಂಗಳೂರು: ಕರಾವಳಿಯಲ್ಲಿ ದೋಣಿಗಳ ಬಳಕೆ ಸಹಜ. ಆದರೆ, ಈ ವರ್ಷ ಬಸ್ಸು, ಕಾರುಗಳು ಓಡಾಡುವ ಮಾರ್ಗಗಳಲ್ಲೂ ದೋಣಿಗಳಲ್ಲಿ ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ. ನೆರೆಹಾನಿ ಕುರಿತ ಚರ್ಚೆಯಲ್ಲಿ ಕಾಂಗ್ರೆಸ್‌ನ ಮಂಜುನಾಥ್‌ ಭಂಡಾರಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ರೀತಿ ಇದು.

Advertisement

ಶುಕ್ರವಾರ ನಿಯಮ 68ರ ಅಡಿ ಮಳೆ ಹಾನಿ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಲುಸಂಕಗಳಲ್ಲಿ ಬಿದ್ದು ಜನ ಸಾಯುತ್ತಿದ್ದಾರೆ. ನೀವು ನೀಡುವ ಪರಿಹಾರ ಮತ್ತೂಂದು ಮಳೆಗಾಲ ಬಂದರೂ ತಲುಪುತ್ತಿಲ್ಲ. ಒಂದು ವೇಳೆ ಬೇಗ ತಲುಪಿದರೂ ಅದು ಆನೆಯಂತಹ ಅನಾಹುತಗಳಿಗೆ ಇರುವೆ ಗಾತ್ರದ ಪರಿಹಾರ ಆಗಿರುತ್ತದೆ. ಪ್ರತೀ ಎರಡು ವರ್ಷಗಳಿಗೊಮ್ಮೆ ಪರಿಹಾರದ ಮೊತ್ತ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದರು.

ದ.ಕ.-320, ಉಡುಪಿ-258 ಕೋ.ರೂ. ನಷ್ಟ
ಈ ವರ್ಷ ಮಳೆಯಿಂದಾಗಿ ದಕ್ಷಿಣ ಕನ್ನಡದಲ್ಲಿ 320 ಕೋಟಿ ರೂ. ಮತ್ತು ಉಡುಪಿಯಲ್ಲಿ 258 ಕೋಟಿ ರೂ. ನಷ್ಟವಾಗಿದೆ. ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಈ ಜಿಲ್ಲೆಗಳಿಗೆ ಕ್ರಮವಾಗಿ 30 ಕೋಟಿ ರೂ. ಮತ್ತು 25 ಕೋಟಿ ರೂ. ಮಾತ್ರ ಪರಿಹಾರ ಬಂದಿದೆ. ಇಂದಿಗೂ 2015ರ ಮಾದರಿಯಲ್ಲಿ ಎನ್‌ಡಿಆರ್‌ಎಫ್ ಪರಿಹಾರ ನೀಡಲಾಗುತ್ತಿದೆ. ಬದಲಾದ ವಿದ್ಯಮಾನಗಳಲ್ಲಿ ಪರಿಹಾರ ಮೊತ್ತವನ್ನು ಪರಿಷ್ಕರಿಸುವ ಅಗತ್ಯವಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಮೂರ್‍ನಾಲ್ಕು ದಿನಕ್ಕೆ ತಾತ್ಕಾಲಿಕ ಪರಿಹಾರ ನೀಡುತ್ತಿದ್ದೇವೆ ಎಂದರು.

564 ಕಾಲುಸಂಕಗಳಿಗೆ ಪ್ರಸ್ತಾವ: ಅಂಗಾರ
ಕರಾವಳಿಯ ಉಡುಪಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನರೇಗಾ ಅಡಿ ಕಾಲುಸಂಕಗಳ ನಿರ್ಮಾಣಕ್ಕೆ ಸರಕಾರ ಮುಂದಾಗಿದ್ದು, ಈ ಸಂಬಂಧ 564 ಪ್ರಸ್ತಾವನೆಗಳು ಬಂದಿವೆ ಎಂದು ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್‌. ಅಂಗಾರ ತಿಳಿಸಿದರು.

ಮಂಗಳೂರಿನ ಉಳ್ಳಾಲದಲ್ಲಿ ಅತೀಹೆಚ್ಚು ಕಡಲ್ಕೊರೆತ ಆಗಿರುವ ಭಾಗದಲ್ಲಿ ಸೀ ವಾಕರ್‌ ಅನುಷ್ಠಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಸಂಬಂಧ ಅಧ್ಯಯನ ನಡೆದಿದೆ. ಅದೇ ರೀತಿ, ಉಡುಪಿ ಜಿಲ್ಲೆಯ ಮರವಂತೆ ಕಡಲ ಕಿನಾರೆಗೆ ಡಕ್‌ಫ‌ುಟ್‌ ಯೋಜನೆ ಕಾರ್ಯಗತಗೊಳಿಸಿ, ಯಾವ ಯೋಜನೆ ಯಶಸ್ವಿಯಾಗುತ್ತದೆ ನೋಡಿಕೊಂಡು ಅದನ್ನು ಕಡಲ್ಕೊರೆತ ಸ್ಥಳಗಳಲ್ಲಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next