ವಿಜಯಪುರ: ವಿಜಯಪುರ-ಸೊಲ್ಲಾಪುರ ಮಾರ್ಗವನ್ನು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಮೇಲ್ದರ್ಜೆಗೇರಿಸುವ 1576.79 ಕೋಟಿ ರೂ. ವೆಚ್ಚದ ಕಾಮಗಾರಿಗಳು ಭರದಿಂದ ಸಾಗಿವೆ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ರಮೇಶ ಜಿಗಜಿಣಗಿ ಹೇಳಿದರು.
ಸೋಮವಾರ ಸೊಲ್ಲಾಪುರ-ವಿಜಯಪುರ ಚತುಷ್ಪಥ ಹೆದ್ದಾರಿ ಕಾಮಗಾರಿ ವೀಕ್ಷಿಸಿದ ಸಚಿವರು, ಈಗಾಗಲೇ ಕಾಮಗಾರಿ ಸಮರೋಪಾದಿಯಲ್ಲಿ ಸಾಗಿದ್ದು, 110 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ನಿರ್ಮಾಣದಿಂದ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಜನರಿಗೆ ಹಾಗೂ ಸರಕು-ಸಾಗಾಣಿಕೆಗೆ ಹೆಚ್ಚಿನ ಸಹಕಾರಿಯಾಗಲಿದೆ ಎಂದರು.
110 ಕಿ.ಮೀ ಉದ್ದದ ಚತುಷ್ಪಥ ಕಾಮಗಾರಿ ವ್ಯಾಪ್ತಿಗೆ ಒಂದು ಬೃಹತ್ ಪ್ರಮಾಣದ ಸೇತುವೆ ಹಾಗೂ 45 ಚಿಕ್ಕ ಸೇತುವೆಗಳು ಬರಲಿವೆ. 2 ಫ್ಲೈ ಓವರ್, ಓವರ್ ಬ್ರಿಡ್ಜ್, 4 ವಾಹನ ಅಂಡರ್‌ಪಾಸ್ ಪಾದಚಾರಿಗಳಿಗಾಗಿ 8 ರಸ್ತೆ ಒಳಗೊಂಡಿದೆ. ಈ ಕಾಮಗಾರಿಯಯನ್ನು 30 ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಿದ್ದು, ಅದರನ್ವಯ ಗುತ್ತಿಗೆದಾರರು ಕೂಡ 24 ತಿಂಗಳಲ್ಲಿ ಈ ರಸ್ತೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಮಖನಾಪುರ ಬಳಿ 1 ಟೋಲ್ ನಾಕಾ ನಿರ್ಮಿಸಲಾಗುತ್ತಿದೆ. ಇದು 21 ಸರ್ವಿಸ್ ರಸ್ತೆ ಒಳಗೊಂಡಿದೆ. ಸುಮಾರು 20 ವರ್ಷಗಳವರೆಗೆ ಈ ರಸ್ತೆ ಉಸ್ತುವಾರಿಯನ್ನು ಐಜೆಎಂ ಕಂಪನಿಗೆ ವಹಿಸಲಾಗಿದೆ. ಈ ರಸ್ತೆ ಕಾಮಗಾರಿ ವ್ಯಾಪ್ತಿಗೆ ಬರುವ ಎಲ್ಲ ರೀತಿಯ ಪರಿಹಾರಗಳನ್ನು ಒದಗಿಸಲಾಗಿದೆ. ಸುಮಾರು 13 ಕೋಟಿ ರೂ. ಮಾತ್ರ ಬೇರೆ ಬೇರೆ ವೈಯಕ್ತಿಕ ಪ್ರಕರಣಗಳಿಂದ ಬಾಕಿ ಉಳಿದಿದೆ. ಇದರ ಜೊತೆಗೆ ವಿಜಯಪುರ-ಸಂಕೇಶ್ವರ ಮಾರ್ಗದ ರಸ್ತೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಹೊನವಾಡ ಗ್ರಾಮದವರೆಗೆ 40 ಕೋಟಿ ರೂ. ಮಂಜೂರಾಗಿ ಟೆಂಡರ್ ಕರೆಯಲಾಗಿದೆ ಎಂದು ವಿವರಿಸಿದರು.
ಶಿರಾಡೋಣ-ಲಿಂಗಸಗೂರ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ಮಂಜೂರಾತಿ ದೊರೆತಿದೆ. ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ವಿಮಾನ ನಿಲ್ದಾಣಕ್ಕಾಗಿ ಶ್ರಮಿಸುತ್ತಿದ್ದು, ಯಾವುದೇ ಕಾರಣಕ್ಕೂ ಈ ವಿಮಾನ ನಿಲ್ದಾಣ ಕೈ ಬಿಡಲಾಗುವುದಿಲ್ಲ. ಇದಕ್ಕೆ ರಾಜ್ಯ ಸರ್ಕಾರದ ಸಹಕಾರ ಬೇಕಾಗಿದೆ ಎಂದು ಹೇಳಿದರು. ರೈಲ್ವೆ ದ್ವಿಪಥ ಹಾಗೂ ವಿದ್ಯುತ್ ಕಾಮಗಾರಿಗಳು ಪ್ರಗತಿಯಲ್ಲಿದ್ದು ಕಾಮಗಾರಿ ಪೂರ್ಣಗೊಂಡ ನಂತರ ವಿಜಯಪುರದಿಂದ ದೇಶದ ನಾನಾ ಭಾಗಗಳಿಗೆ ರೈಲ್ವೆಯಲ್ಲಿ ಪ್ರಯಾಣಿಸುವುದು ಇನ್ನೂ ಸುಲಭ ಹಾಗೂ ಸರಳವಾಗಲಿದೆ. ಇಲ್ಲಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಸುಮಾರು 1 ಗಂಟೆ ಸಮಯ ಉಳಿತಾಯವಾಗಲಿದೆ ಎಂದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಎಸ್.ಎಸ್. ಕದಂ ಇದ್ದರು.