Advertisement

ಸಫಾಯಿ ಕರ್ಮಚಾರಿಗಳ ಮರು ಸಮೀಕ್ಷೆ

12:29 PM Aug 03, 2017 | Team Udayavani |

ಮೈಸೂರು: ಸಫಾಯಿ ಕರ್ಮಚಾರಿಗಳ ಮರು ಸಮೀಕ್ಷೆ ನಡೆಸುವಂತೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗಕ್ಕೆ ಶಿಫಾರಸು ಮಾಡುವುದಾಗಿ ಜಿಲ್ಲಾಧಿಕಾರಿ ಡಿ.ರಂದೀಪ್‌ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಸಫಾಯಿ ಕರ್ಮಚಾರಿಗಳ ಮೇಲ್ವಿಚಾರಣಾ ಸಮಿತಿ ಸಭೆ ನಡೆಸಿದ ಅವರು, 2006ರಲ್ಲಿ ನಡೆದ ಸಮೀಕ್ಷೆ ಆಧಾರದ ಮೇಲೆ ಸರ್ಕಾರಿ ಸಲವತ್ತುಗಳನ್ನು ನೀಡಲಾಗುತ್ತಿದೆ. ಹೊಸದಾಗಿ ಸಮೀಕ್ಷೆ ಆಗದಿರುವುದರಿಂದ ಸಾಕಷ್ಟು ಜನರಿಗೆ ಸವಲತ್ತುಗಳು ಸಿಗುತ್ತಿಲ್ಲ ಎಂಬ ದೂರುಗಳಿದೆ.

Advertisement

ಈ ಹಿಂದೆ ಮೂರು ಬಾರಿ ಸಮೀಕ್ಷೆ ಮಾಡಲಾಗಿದ್ದು, ಮೈಸೂರು ಜಿಲ್ಲೆಯಲ್ಲಿ ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌ ಪದ್ಧತಿ ಜಾರಿಯಲ್ಲಿಲ್ಲ ಎಂದು ಹೇಳಲಾಗಿದೆ. ಆದರೆ, ಪೌರಕಾರ್ಮಿಕ ಸಂಘಟನೆಗಳು ಈ ಪದ್ಧತಿ ಇದೆ ಎಂದು ಹೇಳುತ್ತವೆ, ಹೀಗಾಗಿ ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌ ಹಾಗೂ ಸಫಾಯಿ ಕರ್ಮಚಾರಿ ಎಂಬ ಪದದ ವ್ಯಾಖ್ಯಾನ ಅರ್ಥಮಾಡಿಕೊಳ್ಳಬೇಕಿದೆ.

ಇತ್ತೀಚೆಗೆ ಮೈಸೂರು ತಾಲೂಕಿನ ಚಾಮುಂಡಿಬೆಟ್ಟ ಗ್ರಾಪಂ ಹಾಗೂ ಉದೂºರು ಗ್ರಾಮದಲ್ಲಿ  ಮ್ಯಾನ್‌ಹೋಲ್‌ಗೆ ಪೌರಕಾರ್ಮಿಕನನ್ನು ಬಲವಂತವಾಗಿ ಇಳಿಸಿ ಸ್ವತ್ಛಗೊಳಿಸಿದ ಪ್ರಕರಣ ಕಂಡುಬಂದಿದೆ. ಸಂಘಟನೆಗಳವರು ಇಂತಹ ಪ್ರಕರಣಗಳನ್ನು ಗಮನಕ್ಕೆ ತಂದರೆ ಪುನರ್ವಸತಿ ಪ್ಯಾಕೇಜ್‌ ಕಲ್ಪಿಸಲು ಅನುಕೂಲವಾಗಲಿದೆ ಎಂದರು.

2005ರಲ್ಲೇ ಸುಪ್ರೀಂಕೋರ್ಟ್‌ ಮಲಹೊರುವ ಪದ್ಧತಿ ನಿಷೇಧಿಸಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲೂ ಶೌಚಾಲಯದ ಗುಂಡಿಯನ್ನು ಸ್ವತ್ಛಗೊಳಿಸಲು ಮಾನವರನ್ನು ಬಳಸದೆ ಸಕ್ಕಿಂಗ್‌ ಯಂತ್ರವನ್ನು ಬಳಸಿ, ಪ್ರತಿ ಗ್ರಾಪಂಯೂ ಸಕ್ಕಿಂಗ್‌ ಯಂತ್ರ ಖರೀದಿಸುವುದು ಸಾಧ್ಯವಾಗದಿದ್ದಲ್ಲಿ ಕನಿಷ್ಠ ಹೋಬಳಿಗೊಂದು ಸಕ್ಕಿಂಗ್‌ ಯಂತ್ರ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ಹೇಳಿದರು.

ಪೌರಕಾರ್ಮಿಕ ಸಂಘದ ಅಧ್ಯಕ್ಷ ಎಂ.ವಿ.ವೆಂಕಟೇಶ್‌ ಮಾತನಾಡಿ, 2005ರಲ್ಲೇ ಸುಪ್ರೀಂಕೋರ್ಟ್‌ ಮಲಹೊರುವ ಪದ್ಧತಿ ನಿಷೇಧಿಸಿರುವುದರಿಂದ ಎಲ್ಲರನ್ನೂ ಸಫಾಯಿ ಕರ್ಮಚಾರಿಗಳೆಂದು ಪರಿಗಣಿಸಿದಾಗ ಮಾತ್ರ ಎಲ್ಲರಿಗೂ ಸರ್ಕಾರಿ ಸೌಲಭ್ಯ ದೊರೆಯಲಿದೆ ಎಂದು ಮನವಿ ಮಾಡಿದರು. ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಡುವ ಮೂಲಕ ಬಯಲು ಶೌಚಮುಕ್ತ ಗ್ರಾಮಗಳನ್ನಾಗಿಸಲು ಹೊರಟಿದೆ.

Advertisement

ಆದರೆ, ಈ ಶೌಚಾಲಯಗಳ ಗುಂಡಿ ತುಂಬಿದಾಗ ಸ್ವತ್ಛಗೊಳಿಸುವವರ್ಯಾರು ಎಂದು ಪ್ರಶ್ನಿಸಿದರು. ಮೈಸೂರು ತಾಲೂಕಿನ ಆಲನಹಳ್ಳಿ ಗ್ರಾಪಂಯಲ್ಲಿ ಕೆಲಸ ಮಾಡುತ್ತಿರುವ 17 ಜನ ಪೌರಕಾರ್ಮಿಕರಿಗೆ ಸರ್ಕಾರದ ಆದೇಶದಂತೆ 14,200 ರೂ. ಮಾಸಿಕ ವೇತನ ನೀಡುವ ಬದಲಿಗೆ ಕೇವಲ 6 ಸಾವಿರ ರೂ. ನೀಡಿ ದುಡಿಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.

ಸಮಾಜ ಕಲ್ಯಾಣ ಇಲಾಖೆಯ ನೇರ ಸಾಲಸೌಲಭ್ಯ ಯೋಜನೆಯಡಿ ಸಾಲಕೋರಿ ಅರ್ಜಿ ಸಲ್ಲಿಕೆಯಾದ 700 ಅರ್ಜಿಗಳನ್ನು ಕೇಂದ್ರ ಕಚೇರಿಗೆ ಕಳುಹಿಸಿದ್ದು, ಈ ಪೈಕಿ 280 ಜನರಿಗೆ ಸಾಲ ಮಂಜೂರಾಗಿದ್ದು, 138 ಜನರಿಗೆ ಹಣ ಬಿಡುಗಡೆಯಾಗಿದೆ. ಬಾಕಿ ಇರುವ 142 ಜನರಿಗೆ ಆದ್ಯತೆ ಮೇಲೆ ಹಣ ಬಿಡುಗಡೆ ಮಾಡಲಾಗುವುದು. ಈ ವರ್ಷ 34 ಜನರಿಗೆ ವಾಹನ ಸಾಲ ನೀಡಲು ಅವಕಾಶವಿದ್ದು, ಚಾಲನಾ ಪರವಾನಗಿ ಹೊಂದಿರುವವರಿಂದ ಅರ್ಜಿ ಹಾಕಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭಾರತಿ ತಿಳಿಸಿದರು.

ಪೌರಕಾರ್ಮಿಕ ಮಕ್ಕಳ ಶಿಕ್ಷಣಕ್ಕಾಗಿ 1 ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ 1800 ರೂ. ವಿದ್ಯಾರ್ಥಿವೇತನ ನೀಡಲಾಗುತ್ತದೆ. ಆದರೆ ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಲು ತೊಂದರೆಯಾಗಿದ್ದು, ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ ಪದ ತೆಗೆದು ಪೌರ ಕಾರ್ಮಿಕ ಅಥವಾ ಸಫಾಯಿ ಕರ್ಮಚಾರಿ ಎಂಬ ಪದ ಸೇರಿಸಿದರೆ ಎಲ್ಲರೂ ಅರ್ಜಿ ಹಾಕಲು ಅನುಕೂಲವಾಗುತ್ತದೆ ಎಂದು ಸಿ.ಆರ್‌.ರಾಚಯ್ಯ ಮನವಿ ಮಾಡಿದರು.

ಮೈಸೂರು ಮಹಾ ನಗರಪಾಲಿಕೆ ಹೆಚ್ಚುವರಿ ಆಯುಕ್ತ ಎನ್‌.ರಾಜು, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಪ್ರಭ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸೋಮಶೇಖರ್‌, ಪೌರಕಾರ್ಮಿಕ ಮುಖಂಡ ಪರಶುರಾಮ ಸೇರಿದಂತೆ ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next