Advertisement

ಸಾಲ ವಸೂಲಿ ಒಟಿಎಸ್‌ ಮಾನದಂಡಗಳನ್ನು ಮರುಪರಿಶೀಲಿಸಿ: ಆರ್‌ಬಿಐಗೆ ಹೈಕೋರ್ಟ್‌ ಸಲಹೆ

10:30 PM Mar 02, 2021 | Team Udayavani |

ಬೆಂಗಳೂರು: ಸಾಲ ವಸೂಲಿ ಅಥವಾ ಮರು ಪಾವತಿ ಸಂದರ್ಭದಲ್ಲಿ ಬ್ಯಾಂಕ್‌ಗಳು ನೀಡುವ “ಒನ್‌ ಟೈಮ್‌ ಸೆಟ್ಲ್ ಮೆಂಟ್‌ ಸ್ಕೀಮ್‌’ (ಒಟಿಎಸ್‌) ಮಾನದಂಡಗಳನ್ನು ಮರುಪರಿಶೀಲಿಸುವಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಹೈಕೋರ್ಟ್‌ ಸಲಹೆ ನೀಡಿದೆ.

Advertisement

ಜೊತೆಗೆ, ಸಾಲ ಮರು ಪಾವತಿಗೆ ರಿಯಾಯಿತಿ ಕೋರಿದ ಅರ್ಜಿದಾರರಿಗೆ ಹೈಕೋರ್ಟ್‌ 2 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ಕಂಪನಿ ಪಡೆದುಕೊಂಡಿರುವ ಸಾಲವನ್ನು ಓಟಿಎಸ್‌ ಅಡಿ ಬ್ಯಾಂಕ್‌ ನಿರ್ಧರಿಸಿರುವ ಮೊತ್ತದ ಬದಲಿಗೆ ತಾವು ನಿರ್ಧರಿಸಿರುವ ಮೊತ್ತಕ್ಕೆ ಮರುಪಾವತಿಸಲು ಸಿದ್ದರಿದ್ದು ಅದನ್ನು ಪರಿಗಣಿಸುವಂತೆ ಬ್ಯಾಂಕ್‌ಗೆ ನಿರ್ದೇಶಿಸಬೇಕು ಎಂದು ಕೋರಿ ಸಾಲಕ್ಕೆ ಜಾಮೀನುದಾರರಾದ ರಾಜಾಜಿನಗರ ನಿವಾಸಿ ಬಾಲಕಿಶನ್‌ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ, ಪಿ.ಎಸ್‌ ದಿನೇಶ್‌ ಕುರ್ಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಸಾಲಗಾರನಿಗೆ ನೀಡಿರುವ ಸಾಲಕ್ಕೆ ಸೂಕ್ತ ಭದ್ರತೆ ಇದೆ ಎಂಬುದು ಸ್ಪಷ್ಟವಾಗಿ ತಿಳಿದ ನಂತರವೂ ಬ್ಯಾಂಕ್‌ಗಳು ಒಟಿಎಸ್‌ ಮೂಲಕ ಶೇ.70 ರಷ್ಟನ್ನು ಮಾತ್ರ ಮರುಪಾವತಿಸಲು ಯಾಕೆ ಅವಕಾಶ ನೀಡುತ್ತವೆ ಎಂಬುದು ಅರ್ಥವಾಗುತ್ತಿಲ್ಲ. ಬ್ಯಾಂಕುಗಳ ಇಂತಹ ಲೆಕ್ಕಾಚಾರ ದೇಶದ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಒಟಿಎಸ್‌ ಸೇರಿದಂತೆ ಯಾವುದೇ ವಿಧಾನದ ಮೂಲಕವೂ ಅನಗತ್ಯವಾಗಿ ಸಾಲ ಮನ್ನಾ ಮಾಡುವುದು ನೇರವಾಗಿ ಹಣದುಬ್ಬರಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ :ಮಂಗಳೂರು ಜೈಲು ಮೇಲ್ದರ್ಜೆಗೇರಿಸಲಾಗುವುದು; ಡಿಜಿಪಿ ಅಲೋಕ್ ಕುಮಾರ್

ಅಲ್ಲದೇ, ಬ್ಯಾಂಕುಗಳು ವಹಿವಾಟು ನಡೆಸುವ ಹಣ ಠೇವಣಿದಾರರಿಗೆ ಸೇರಿದ್ದಾಗಿರುತ್ತದೆ. ಹಾಗಿದ್ದೂ ಬ್ಯಾಂಕ್‌ಗಳು ಸಾಲ ವಸೂಲಿ ವೇಳೆ ಒಟಿಎಸ್‌ ಅಡಿ ಸಾಲಗಾರರಿಗೆ ರಿಯಾಯಿತಿ ನೀಡುವುದು ಅಸಮಂಜಸವಾಗಿ ಕಾಣುತ್ತದೆ. ಸಾಲ ವಸೂಲಿಗೆ ಸಂಬಂಧಿಸಿದ ನಿಯಮಗಳು ನೀತಿ ನಿರ್ಣಯ ವಿಷಯವಾಗಿದ್ದರೂ, ದೇಶದ ಆರ್ಥಿಕ ಸುರಕ್ಷತೆ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಹಾಗೂ ಆರ್‌ಬಿಐ ಒಟಿಎಸ್‌ ಮಾನದಂಡಗಳನ್ನು ಮರುಪರಿಶೀಲಿಸಬೇಕಿದೆ ಎಂದು ಸಲಹೆ ನೀಡಿದೆ.

Advertisement

ಪ್ರಕರಣದ ಹಿನ್ನೆಲೆ:
ಭಗವಾನ್‌ ಕಾಟನ್‌ ಗಿನ್ನರ್ಸ್‌ ಪ್ರೈ. ಲಿ. ಸಂಸ್ಥೆಗಾಗಿ ಬ್ಯಾಂಕ್‌ ಆಫ್ ಮಹಾರಾಷ್ಟ್ರದಲ್ಲಿ 2014 ರ ಆ.30ರಂದು 1.87 ಕೋಟಿ ಹಾಗೂ ಸೆ.30ರಂದು 8 ಕೋಟಿ ರೂಪಾಯಿ ಸಾಲ ಪಡೆಯಲಾಗಿತ್ತು. ಈ ಸಾಲಕ್ಕೆ ಭದ್ರತೆಯಾಗಿ ರಾಯಚೂರಿನ ಕೈಗಾರಿಕಾ ಪ್ರದೇಶದಲ್ಲಿರುವ 2.9 ಎಕರೆ ಭೂಮಿ ಅಡಮಾನ ಮಾಡಲಾಗಿತ್ತು. ಸಾಲ ಮರುವಾಪತಿಯಾಗದ ಹಿನ್ನೆಲೆಯಲ್ಲಿ 2016ರ ಡಿ. 21ರಂದು ಎರಡೂ ಸಾಲದ ಖಾತೆಗಳನ್ನು ಒಗ್ಗೂಡಿಸಿ ಎನ್‌ಪಿಎ ಎಂದು ಘೋಷಿಸಿದ್ದ ಬ್ಯಾಂಕ್‌ ವಸೂಲಿ ಪ್ರಕ್ರಿಯೆ ಆರಂಭಿಸಿತ್ತು. ಅಡಮಾನ ಮಾಡಿದ್ದ ಆಸ್ತಿ ವಶಕ್ಕೆ ತೆಗೆದುಕೊಳ್ಳುವ ಬ್ಯಾಂಕ್‌ ನಿರ್ಧಾರ ಪ್ರಶ್ನಿಸಿದ್ದ ಕಂಪನಿಯ ಅರ್ಜಿಯನ್ನು 2019ರ ನ.18ರಂದು ಸಾಲ ವಸೂಲಾತಿ ಮಂಡಳಿ ವಜಾ ಮಾಡಿತ್ತು. ಒಟಿಎಸ್‌ ವಿಸ್ತರಿಸುವಂತೆ ಮಾಡಿದ್ದ ಮನವಿಯನ್ನು ಬ್ಯಾಂಕ್‌ ತಿರಸ್ಕರಿಸಿತ್ತು. ಹೀಗಾಗಿ, ಈ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next