Advertisement

ಸಪ್ತ ಸಂಗಮ ದಾಟಿದ ಸಂಭ್ರಮ

10:21 AM Dec 08, 2019 | Suhan S |

ಸದಭಿರುಚಿ ಸಿನಿಮಾ ಮಾಡೋದಕ್ಕೆ ಒಂದು ಒಳ್ಳೆಯ ಕಥೆಯನ್ನು ಹುಡುಕಿ, ಆಯ್ಕೆ ಮಾಡಿಕೊಳ್ಳುವುದು, ಅದನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ತೆರೆಮೇಲೆ ಕಟ್ಟಿಕೊಡೋದೇ ನಿರ್ದೇಶಕನಿಗೆ, ಚಿತ್ರತಂಡಕ್ಕೆ ಸವಾಲಿನ ಕೆಲಸ. ಅಂಥದ್ದರಲ್ಲಿ ಒಂದೇ ಸಿನಿಮಾದಲ್ಲಿ ಏಳು ವಿಭಿನ್ನ ಕಥೆಯನ್ನ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಕಟ್ಟಿಕೊಡುವ ಪ್ರಯತ್ನ ಮಾಡೋದು ಅಂದ್ರೆ ಅದು ಇನ್ನೂ ದೊಡ್ಡ ಸವಾಲಿನ ಕೆಲಸ. ಈ ವಾರ ತೆರೆಗೆ ಬಂದಿರುವ ಕಥಾ ಸಂಗಮ‘, ಇಂಥ ಪ್ರಯತ್ನದ ಮೂಲಕ ಗಮನ ಸೆಳೆದಿದ್ದ ಚಿತ್ರ.

Advertisement

ಕೌಟುಂಬಿಕ ಬಂಧನ, ಕೆಲಸದಲ್ಲಿ ಕಳೆದು ಹೋದ ವ್ಯಕ್ತಿತ್ವ, ಪ್ರೀತಿಯೆಂಬ ಮಾಯೆಯಲ್ಲಿ ಹೊಯ್ದಾಟ, ವೃತ್ತಿ ನಿಷ್ಠೆ, ತರ್ಕಕ್ಕೆ ನಿಲುಕದ ಒಳಹೊರ ನೋಟ, ಪ್ರಶ್ನಾರ್ಥಕವಾಗಿ ಉಳಿಯುವ ಗುಣರೂಪಗಳ ತಲ್ಲಣ, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಜೀವನ ಈ ಎಲ್ಲದರ ಸಂಗಮವನ್ನು ಕಥಾ ಸಂಗಮದಲ್ಲಿಕಾಣಬಹುದು. ಪ್ರತಿಯೊಂದು ಕಥೆಯು, ಒಂದೊಂದು ಸಂಚಿಕೆಯಂತೆ ತೆರೆಮೇಲೆ ತೆರೆದುಕೊಳ್ಳುವುದರಿಂದ, ಪ್ರೇಕ್ಷಕರು ಕೂಡ ಒಂದೇ ಸಿನಿಮಾದಲ್ಲಿ ಲವ್‌, ಎಮೋಶನ್‌, ಸಸ್ಪೆನ್ಸ್‌, ಥ್ರಿಲ್ಲರ್‌, ಸೆಂಟಿಮೆಂಟ್‌ ಹೀಗೆ ಎಲ್ಲ ಶೈಲಿಯ ಕಥೆಗಳನ್ನು ಕಣ್ತುಂಬಿಕೊಳ್ಳಬಹುದು. ಹಾಗಾದರೆ, ಈ ಏಳು ಕಥೆಗಳ ಕಥಾ ಸಂಗಮತೆರೆಮೇಲೆ ಹೇಗೆ ಮೂಡಿಬಂದಿದೆ ಎಂಬ ಕುತೂಹಲವಿದ್ದರೆ ಸಿನಿಮಾ ನೋಡಬಹುದು.

ಇನ್ನು ಏಳು ಕಥೆಗಳಲ್ಲೂ ಏಳು ನಿರ್ದೇಶಕರು, ಏಳು ಛಾಯಾಗ್ರಹಕರು, ಏಳು ಸಂಕಲನಕಾರರು, ಏಳು ಸಂಗೀತ ನಿರ್ದೇಶಕರು ಏಳು ತಂಡವಾಗಿ ಕೆಲಸ ಮಾಡಿರುವುದರಿಂದ, ಒಂದೊಂದು ಕಥೆಯಲ್ಲೂ ಒಂದೊಂದು ಹೈಲೈಟ್ಸ್‌ ಅಂಶಗಳನ್ನು ಕಾಣಬಹುದು. ಕೆಲ ಸಂಚಿಕೆಯಲ್ಲಿ ಕಥೆಯಲ್ಲಿ ತೂಕವಿಲ್ಲದಿದ್ದರೂ, ನಿರೂಪಣೆ, ಸಂಭಾಷಣೆ, ಮೇಕಿಂಗ್‌ ಪ್ರೇಕ್ಷಕರನ್ನು ಮುಂದಿನ ಸಂಚಿಕೆಗೆ ಸಲೀಸಾಗಿ ಕರೆದುಕೊಂಡು ಹೋಗುತ್ತದೆ.

ಇನ್ನು ಏಳು ವಿಭಿನ್ನ ಕಥೆಗಳಲ್ಲೂ ಬೇರೆ ಬೇರೆ ಕಲಾವಿದರು ಚಿತ್ರದ ಪಾತ್ರಗಳಿಗೆ ಬಣ್ಣ ಹಚ್ಚಿರುವುದರಿಂದ, ಪ್ರತಿ ಕಥೆಯಲ್ಲೂ ಕಲಾವಿದರು, ನಿರ್ದೇಶಕರು ಮತ್ತು ತಂತ್ರಜ್ಞರ ತಂಡ ಬದಲಾಗುತ್ತದೆ. ಹಾಗಾಗಿ ತೆರೆಮೇಲೆ ಕೂಡ ಕಲಾವಿದರ ದೊಡ್ಡ ದಂಡೇ ಕಾಣಬಹುದು. ಕಿಶೊರ್‌, ಯಜ್ಞಾ ಶೆಟ್ಟಿ, ರಾಜ್‌ ಬಿ. ಶೆಟ್ಟಿ, ರಿಷಭ್‌ ಶೆಟ್ಟಿ, ಹರಿಪ್ರಿಯಾ, ಅಮೃತ ನಾಯಕ್‌, ಬಾಲಾಜಿ ಮನೋಹರ್‌, ಪ್ರಕಾಶ್‌ ಬೆಳವಾಡಿ, ಸೌಮ್ಯ, ಜಗನ್‌ ಮೂರ್ತಿ, ಪ್ರಮೋದ್‌ ಶೆಟ್ಟಿ, ವಾಸು ದೀಕ್ಷಿತ್‌ ಮೊದಲಾದ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಬರುವ ಕೆಲ ಸಂಚಿಕೆಗಳಲ್ಲಿ ಅದರ ಕಥೆಗಿಂತಲೂ, ಕಲಾವಿದರೆ ತಮ್ಮ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ.

ಮೊದಲೇ ಹೇಳಿದಂತೆ, ಏಳು ಕಥೆಗಳ ಸಂಗಮವಾಗಿರುವ ಈ ಚಿತ್ರವನ್ನು ಏಳು ಜನ ನಿರ್ದೇಶಕರು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಏಳು ಸಂಗೀತ ನಿರ್ದೇಶಕರು, ಏಳು ಛಾಯಾಗ್ರಹಕರು ಸೇರಿದಂತೆ ಏಳು ತಂಡವಾಗಿ ಕೆಲಸ ಮಾಡಿದ್ದಾರೆ. ಆದರೆ ಕೆಲವು ಸಂಚಿಕೆಗಳಲ್ಲಿ ಚಿತ್ರದ ಛಾಯಾಗ್ರಹಣ, ಲೈಟಿಂಗ್‌, ಹಿನ್ನೆಲೆ ಸಂಗೀತ, ಶಬ್ದ ಗ್ರಹಣ ಮತ್ತಿತರ ತಾಂತ್ರಿಕ ಕಾರ್ಯಗಳಿಗೆ ಆ ಸಂಚಿಕೆಯ ನಿರ್ದೇಶಕರು ಇನ್ನಷ್ಟು ಗಮನ ಹರಿಸಬಹುದಿತ್ತು. ಕೆಲ ಸಂಚಿಕೆಗಳಲ್ಲಿ ಕಥೆ ಮತ್ತು ಕಲಾವಿದರ ಅಭಿನಯ ಹೈಲೈಟ್‌ ಆಗಿ ನೋಡುಗರ ಗಮನ ಸೆಳೆದರೆ, ಇನ್ನು ಕೆಲ ಸಂಚಿಕೆಗಳಲ್ಲಿ ತಾಂತ್ರಿಕ ಕಾರ್ಯಗಳು ಗಮನ ಸೆಳೆಯುತ್ತ ಕಥಾ ಸಂಗಮವನ್ನು ಬ್ಯಾಲೆನ್ಸ್‌ ಮಾಡುತ್ತದೆ. ಒಟ್ಟಾರೆ ಕೆಲವೊಂದು ಲೋಪದೋಷಗಳನ್ನು ತರ್ಕಕ್ಕೆ, ಚರ್ಚೆಗೆ ತೆಗೆದುಕೊಳ್ಳದೆ, ಬದಿಗುಟ್ಟು ನೋಡುವುದಾದರೆ, “ಕಥಾ ಸಂಗಮಇತ್ತೀಚೆಗೆ ಬಂದಿರುವ ಹೊಸ ಪ್ರಯೋಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದೇ ಚಿತ್ರದಲ್ಲಿ ಏಳು ನವ ನಿರ್ದೇಶಕರು ಸಿನಿಪ್ರಿಯರಲ್ಲಿ ಒಂದಷ್ಟು ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

 

ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next