ಹರೆಯ, ಮಧ್ಯಮ ಪ್ರಾಯ ಮತ್ತು ವೃದ್ಧಾಪ್ಯ ಹೀಗೆ… ಒಂದೊಂದು ವಯೋಮಾನದವರಿಗೆ ಬದುಕು ಒಂದೊಂದು ರೀತಿಯಲ್ಲಿ ಗೋಚರಿಸುತ್ತದೆ. ಪ್ರತಿಯೊಬ್ಬರ ಬದುಕಿನ ಪ್ರಯಾಣದಲ್ಲೂ ಹತ್ತಾರು ಸಮಸ್ಯೆಗಳು, ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಆದರೆ ಅವುಗಳನ್ನು ಹೇಗೆ ಸ್ವೀಕರಿಸಿ ಬದುಕು ಕಟ್ಟಿಕೊಳ್ಳುತ್ತೇವೆ ಎನ್ನುವುದರ ಮೇಲೆ, ಬದುಕು ಎಷ್ಟು ಸುಂದರವಾಗಿದೆ ಎಂಬುದು ನಿರ್ಧಾರವಾಗುತ್ತದೆ. ಇದೇ ವಿಷಯವನ್ನು ಇಟ್ಟುಕೊಂಡು, ಅದನ್ನು ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ತೆರೆಮೇಲೆ ಹೇಳಿರುವ ಚಿತ್ರ “ತ್ರಿಕೋನ’
ಸಿನಿಮಾದ ಹೆಸರೇ ಹೇಳುವಂತೆ “ತ್ರಿಕೋನ’ ಹರೆಯ, ಮಧ್ಯಮ ಪ್ರಾಯ ಮತ್ತು ವೃದ್ಧಾಪ್ಯ ಎಂಬ ಮೂರು ವಯೋಮಾನದವರ ಬದುಕಿನ ದೃಷ್ಟಿಕೋನ ತೆರೆದಿಡುವಂಥ ಸಿನಿಮಾ. ಗಂಭೀರ ಚಿಂತನೆಗೆ ಇಳಿಸುವಂತ ಕೆಲವು ವಿಷಯಗಳನ್ನು ಇಟ್ಟು ಕೊಂಡು ಅದಕ್ಕೆ ಒಂದಷ್ಟು ಸಸ್ಪೆನ್ಸ್-ಥ್ರಿಲ್ಲರ್, ಕಾಮಿಡಿ ಟಚ್ ಕೊಟ್ಟು ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಚಂದ್ರಕಾಂತ್.
ಇದನ್ನೂ ಓದಿ:ಬಾಲಿವುಡ್ ಕ್ಯೂಟ್ ಜೋಡಿ ರಣಬೀರ್ ಕಪೂರ್- ಆಲಿಯಾ ಭಟ್ ಮದುವೆ ದಿನಾಂಕ ಫಿಕ್ಸ್
ಹಾಗಂತ ಇಡೀ ಸಿನಿಮಾ ಗಂಭೀರವಾಗಿ ಸಾಗುತ್ತದೆ ಎಂದು ಹೇಳುವಂತಿಲ್ಲ. ಗಂಭೀರ ವಿಷಯದ ಜೊತೆಗೆ ಸಿನಿಮಾದಲ್ಲಿ ಪ್ರೇಕ್ಷಕರನ್ನು ಮನರಂಜಿಸುವಂಥ ಒಂದಷ್ಟು ಅಂಶಗಳನ್ನು ಚಿತ್ರಕಥೆಯಲ್ಲಿ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಕಥಾಹಂದರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಳುವ ಸಾಧ್ಯತೆಗಳಿದ್ದರೂ, ಕಾಲ (ಸಮಯ) ಹೇಗೆ ಬೇರೇ ಬೇರೆ ಮನಸ್ಥಿತಿಯ ಮನುಷ್ಯರ ಕಾಲೆಳೆಯುತ್ತದೆ? ಕಾಲದ ಆಟ ಮತ್ತು ಓಟದಲ್ಲಿ ಗೆಲ್ಲೋರು ಯಾರು ಅನ್ನೋದನ್ನು ಸಿನಿಮ್ಯಾಟಿಕ್ ಹಾಗಿ ಹೇಳುವ ಪ್ರಯತ್ನ ಪ್ರಶಂಸನಾರ್ಹ.
ಇನ್ನು ಕಲಾವಿದರಾದ ಸುರೇಶ್ ಹೆಬ್ಳೀಕರ್, ಲಕ್ಷೀ, ಅಚ್ಯುತ್ ರಾವ್, ಸುಧಾರಾಣಿ ಪಾತ್ರಗಳು ನೋಡುಗರಿಗೆ ಆಪ್ತವೆನಿಸುತ್ತದೆ. ನವ ಪ್ರತಿಭೆಗಳಾದ ರಾಜ್ ವೀರ್, ಮಾರುತೇಶ್ ಸ್ಟಂಟ್‌ಗಳು ಆ್ಯಕ್ಷನ್ ಪ್ರಿಯರಿಗೆ ಇಷ್ಟವಾಗುವಂತಿದೆ. ಸಾಧುಕೋಕಿಲ ಕಾಮಿಡಿ ಕಚಗುಳಿ ನೋಡುಗರಿಗೆ ಅಲ್ಲಲ್ಲಿ ಖುಷಿಕೊಡುತ್ತದೆ
ಜಿ.ಎಸ್.ಕಾರ್ತಿಕ ಸುಧನ್