ಕೊಪ್ಪಳ: ಕೋಲಾರದಲ್ಲಿ ಮುಸ್ಲಿಂ ಹಾಗೂ ಕುರುಬ ಮತಗಳು ಹೆಚ್ಚಾಗಿದ್ದು ನಾನು ಗೆಲ್ಲಬಹುದು ಎನ್ನುವ ಲೆಕ್ಕಾಚಾರವನ್ನು ಸಿದ್ದರಾಮಯ್ಯ ಹಾಕಿದ್ದರು. ಆದರೆ ಈಗ ವರದಿ ಬಂದಿರುವುದನ್ನು ನೋಡಿದರೆ ಅವರ ಲೆಕ್ಕಾಚಾರ ತಲೆ ಕೆಳಗಾಗಿದೆ ಎಂದು ಸಂಗಣ್ಣ ಕರಡಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ವಿಚಾರ ಮಾಡಿ ಸಿದ್ದರಾಮಯ್ಯಗೆ ಸಲಹೆ ನೀಡಿದೆ. ಹಾಗಾಗಿಯೇ ಕೋಲಾರದಿಂದ ಸ್ಪರ್ಧಿಸಲು ಹಿಂದೆ ಸರಿದಿದ್ದಾರೆ. ಕೆ.ಎಚ್. ಮುನಿಯಪ್ಪ ಅವರನ್ನು ಪಾರ್ಲಿಮೆಂಟ್ ಚುನಾವಣೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಸೋಲಿಸಿದ್ದರು. ಹಾಗಾಗಿ ಸಿದ್ದರಾಮಯ್ಯ ಅವರಿಗೆ ಅದರ ಆತಂಕವಿದೆ. ಯಾರನ್ನು ನಾವು ಸೋಲಿಸುತ್ತೇವೆ. ಅವರು ನಮ್ಮನ್ನು ಸೋಲಿಸುವುದು ಸಹಜ ಸ್ವಭಾವವಾಗಿದೆ.
ಇದರಿಂದ ಸಿದ್ದುಗೆ ವರುಣಾ ಕ್ಷೇತ್ರ ಫಿಕ್ಸ್ ಎಂಬಂತೆ ಕಾಣುತ್ತಿದೆ ಎಂದರು.
ಕೊಪ್ಪಳ ಕ್ಷೇತ್ರದ ಟಿಕೆಟ್ ಕುರಿತು ಜನರು ಅಭಿಪ್ರಾಯ ಮಂಡಿಸುತ್ತಾರೆ. ಅದರ ಬಗ್ಗೆ ನಾನು ಏನೂ ಹೇಳುವುದಕ್ಕೆ ಆಗುವುದಿಲ್ಲ. ಅವರಿಗೆ ಅಭಿಪ್ರಾಯ ಮಂಡಿಸುವ ಸ್ವಾತಂತ್ರ್ಯ, ಹಕ್ಕಿದೆ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ. ಆ ರೀತಿ ನಡೆದುಕೊಳ್ಳಬೇಕು. ಮೋದಿ ನಾಯಕತ್ವದಲ್ಲಿ ಎರಡು ಬಾರಿ ಸಂಸದನಾಗಿರುವೆ. ನನಗೆ ತೃಪ್ತಿ ತಂದಿದೆ. ಅಭಿವೃದ್ಧಿ ಕೆಲಸ ಮಾಡಿರುವೆ ಎಂದರು.