ಬಂಗಾರಪೇಟೆ: ಇತ್ತೀಚೆಗೆ ತಾಲೂಕು ಕಂದಾಯ ಇಲಾಖೆ ವಿರುದ್ಧವೇ ಹೆಚ್ಚು ದೂರುಗಳು ಬರುತ್ತಿರುವುದರಿಂದ ತಾಲೂಕು ಆಡಳಿತ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ ಎಂದು ಲೋಕಾಯುಕ್ತ ಡಿವೈಎಸ್‌ಪಿ ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸಿ ಮಾತನಾಡಿದ ಅವರು, ಬಂಗಾರಪೇಟೆ ತಹಶೀಲ್ದಾರ್ ವ್ಯಾಪ್ತಿಯಲ್ಲಿ 8 ದೂರುಗಳು ಬಂದಿದ್ದು, ಈ ಎಲ್ಲವೂ ಕಂದಾಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯ ನಿರ್ಲಕ್ಷ್ಯದ ಬಗ್ಗೆಯೇ ಹೆಚ್ಚಿವೆ ಎಂದು ಹೇಳಿದರು.
ಕೊಟ್ಟಿರುವ ಅರ್ಜಿಗಳ ಪರಿಶೀಲನೆ: ಇಂದಿನ ಕುಂದುಕೊರತೆ ಸಭೆಯಲ್ಲಿ ಒಟ್ಟು 8 ಅರ್ಜಿಗಳು ಬಂದಿದ್ದು, ಎಲ್ಲಾ ಅರ್ಜಿಗಳು ಕಂದಾಯ ಇಲಾಖೆಗೆ ಸೇರಿವೆ. ಇವುಗಳನ್ನು ತಹಶೀಲ್ದಾರ್‌ಗೆ ಕಳುಹಿಸಲಾಗುವುದು. ಅರ್ಜಿಗಳ ಸ್ಥಿತಿಗತಿ ಬಗ್ಗೆ ಪ್ರತಿ 15 ದಿನಗಳಿಗೊಮ್ಮೆ ವಿಚಾರಣೆ ಮಾಡಲಾಗುವುದು. ಸಂಬಂಧಪಟ್ಟ ಇಲಾಖೆಯು ಕ್ರಮಕೈಗೊಂಡು ಅರ್ಜಿ ವಿಲೇವಾರಿ ಮಾಡಿರುವ ಬಗ್ಗೆ ಸಮಗ್ರ ವರದಿ ನೀಡಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅರ್ಜಿದಾರರಿಗೂ ಮಾಹಿತಿ ಒದಗಿಸಲಾಗುವುದು ಎಂದು ವಿವರಿಸಿದರು.
ದೂರು ನೀಡಿದ್ರೂ ಕ್ರಮವಿಲ್ಲ: ತಾಲೂಕಿನ ಬಂಗಾರಪೇಟೆ ಸರ್ವೆ ನಂ.138ರಲ್ಲಿನ 2.2 ಎಕರೆ ಖರಾಬು ಜಮೀನಿನಲ್ಲಿ 40ಕ್ಕೆ 60 ಅಡಿಗಳ ಜಾಗವನ್ನು ಅಕ್ರಮ ಸಕ್ರಮ ಯೋಜನೆಯಲ್ಲಿ ಸಕ್ರಮ ಮಾಡಿಕೊಡಬೇಕೆಂದು ಪಟ್ಟಣದ ಟಿಪ್ಪುನಗರದ ವಾಸಿ ಟಿ.ವೆಂಕಟಸ್ವಾಮಿ ಬಿನ್ ತಮ್ಮಣ್ಣ ಎಂಬುವವರು ತಾಲೂಕು ಕಚೇರಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಕ್ರಮಕೈಗೊಂಡಿಲ್ಲ ಎಂದು ದೂರು ನೀಡಿದರು.
ಕಚೇರಿಗೆ ಅಲೆದಾಡಿಸುತ್ತಿದ್ದಾರೆ: ತಾಲೂಕಿನ ಜಯಮಂಗಲ ಗ್ರಾಮದ ಸರ್ವೆ ನಂ. 130 ಪಿ7, ಪಿ8ರಲ್ಲಿ ಒಟ್ಟು 4 ಎಕರೆ ಜಮೀನಿದ್ದು, ಈ ಜಮೀನಿನ ಅಕ್ಕಪಕ್ಕದವರಾದ ಗಣೇಶಪ್ಪ, ಶಿಮ್ಲಮ್ಮ, ಚಲಪತಿ, ವಿಶ್ವನಾಥ್, ಶ್ರೀನಿವಾಸ್, ಸುಬ್ರಮಣಿ ಎಂಬುವವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಿ, ನಮ್ಮ ಜಮೀನು ಗುರುತು ಮಾಡಿಕೊಡುವಂತೆ ತಹಶೀಲ್ದಾರ್‌ಗೆ ದೂರು ನೀಡಿದರೂ ಇದುವರೆಗೂ ಯಾವುದೇ ಕ್ರಮಕೈಗೊಳ್ಳದೆ ಪ್ರತಿ ದಿನ ತಾಲೂಕು ಕಚೇರಿಗೆ ತಿರುಗಾಡಿಸುತ್ತಿದ್ದಾರೆ ಎಂದು ಪುಷ್ಪರಾಜ್ ದೂರು ನೀಡಿದ್ದಾರೆ.
ಅಂಬೇಡ್ಕರ್ ನವರಕ್ಷಣಾ ವೇದಿಕೆ, ಕರ್ನಾಟಕ ದಲಿತ ರೈತ ಸೇನೆ, ಸಿಂಗರಹಳ್ಳಿ ಎಂ.ಮಂಜುನಾಥ್ ಸೇರಿ 8 ಅರ್ಜಿದಾರರು ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಜಮೀನು ಸಮಸ್ಯೆಗಳ ಬಗ್ಗೆ ದೂರು ನೀಡಿದ್ದಾರೆ. ತಾಪಂ ಇಒ ಎನ್.ವೆಂಕಟೇಶಪ್ಪ, ಲೋಕಾಯುಕ್ತ ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ರವಿಕುಮಾರ್, ಪವನ್‌ಕುಮಾರ್, ಪಂಚಾಯತ್ ರಾಜ್ ಎಇಇ ಎಚ್.ಡಿ.ಶೇಷಾದ್ರಿ, ಲೋಕಾಯುಕ್ತ ಸಿಬ್ಬಂದಿ ಕೃಷ್ಣೇಗೌಡ, ದೇವಪ್ಪ ಇದ್ದರು.