ಬೆಂಗಳೂರು : ನಗರದಲ್ಲಿ ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ನಗರಗಳಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಜೊತೆಗೆ ಈ ಹಿಂದೆ ಒತ್ತುವರಿ ಆಗಿರುವ ಪ್ರದೇಶವನ್ನು ಶೀಘ್ರ ಗುರುತಿಸಿ ಅವುಗಳನ್ನು ತೆರವುಗೊಳಿಸುವ ಕಾರ್ಯ ಮಾಡಬೇಕಿದೆ ಇದರಿಂದ ನಗರದಲ್ಲಿ ಪ್ರವಾಹ ತಡೆಯಲು ಸಾಧ್ಯವಾಗಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ನಗರದ ದತ್ತಾತ್ರೇಯ ಬಡಾವಣೆ ಹಾಗೂ ಕುಮಾರಸ್ವಾಮಿ ಬಡಾವಣೆಯ ಕುಟುಂಬಗಳಿಗೆ ತಲಾ 25,000ರೂ. ಮೊತ್ತದ ಪರಿಹಾರದ ಚೆಕ್ ವಿತರಣೆ ಮಾಡಿದರು.
ದತ್ತಾತ್ರೇಯ ಬಡಾವಣೆಯಲ್ಲಿ ಸುಮಾರು 304 ಕುಟುಂಬಕ್ಕೆ ಹಾಗೂ ಕುಮಾರಸ್ವಾಮಿ ಬಡಾವಣೆಯ ಸುಮಾರು 40 ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿದರು.
ಇತ್ತೀಚಿಗೆ ಸುರಿದ ಧಾರಾಕಾರ ಮಳೆಯಿಂದ ನಗರದ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅನಾಹುತ ಸಂಭವಿಸಿದ್ದು, ಅಂತಹ ಮನೆಗಳನ್ನು ಗುರುತಿಸಿ 25,000 ರೂ. ಮೊತ್ತದ ಚೆಕ್ ವಿತರಣೆ ಮಾಡಲಾಗುತ್ತಿದೆ. ಎನ್.ಡಿ.ಆರ್.ಎಫ್ ನಿಯಮದ ಪ್ರಕಾರ ಅನಾಹುತ ಪ್ರದೇಶಗಳಿಗೆ 3,000 ಮಾತ್ರ ಕೊಡಲು ಅನುಮತಿಯಿದೆ. ಆದರೆ, ಇಲ್ಲಿ ಹೆಚ್ಚು ಅನಾಹುತ ಆದ ಪರಿಣಾಮ ಸನ್ಮಾನ್ಯ ಮುಖ್ಯಮಂತ್ರಿಗಳ ನಿರ್ದೇಶನ ದಂತೆ ತಲಾ ಕುಟುಂಬಕ್ಕೆ 25,000 ರೂ. ವಿತರಣೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವರು ರವರು ತಿಳಿಸಿದರು.
ಈ ವೇಳೆ ವಿಶೇಷ ಆಯುಕ್ತರು(ಕಂದಾಯ) ಶ್ರೀ ಬಸವರಾಜು, ಜಂಟಿ ಆಯುಕ್ತರು ಶ್ರೀ ವೀರಭದ್ರ ಸ್ವಾಮಿ, ದಕ್ಷಿಣ ವಲಯ ಉಪ ಆಯುಕ್ತರು ಶ್ರೀ ಲಕ್ಷ್ಮೀದೇವಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.