ರಾಮನಗರ: ನಗರದ ಕಂದಾಯ ಭವನ ಇನ್ನು ಮುಂದೆ ಶಾಶ್ವತವಾಗಿ ಜಿಲ್ಲಾಸ್ಪತ್ರೆ ವಿಸ್ತರಿತ ಆಸ್ಪತ್ರೆಯಾಗಿ ಪರಿವರ್ತನೆಯಾಗಲಿದೆಯೆ? ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಿಂತನೆ ಹಾಗೂ ಜಿಲ್ಲಾಡಳಿತಕ್ಕೆ ನೀಡಿರುವ ಸಲಹೆ, ಸೂಚನೆಗಳು ಅದಕ್ಕೆ ಪೂರಕವಾಗಿದೆ.
ನಗರದ ಬೆಂಗಳೂರು-ಮೈಸೂರು ಹೆದ್ದಾರಿ ಪಿಡಬ್ಲ್ಯೂಡಿ ವೃತ್ತದ ಕಂದಾಯ ಭವನ ತಾತ್ಕಾಲಿಕವಾಗಿ ಕೋವಿಡ್-19 ರೆಫರಲ್ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕಟ್ಟಡದ ಪಕ್ಕದಲ್ಲೇ ಜಿಲ್ಲಾಸ್ಪತ್ರೆ ನೂತನ ಕಟ್ಟಡ ನಿರ್ಮಾಣ ಪೂರ್ಣ ಹಂತದಲ್ಲಿದೆ. ಜಿಲ್ಲಾಸ್ಪತ್ರೆಯ ವಿಸ್ತೃತ ಕಟ್ಟಡವಾಗಿ ಕಂದಾಯ ಭವನ ಅಭಿವೃದ್ಧಿ ಪಡಿಸುವ ಇಂಗಿತ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತದೊಂದಿಗೆ ಚರ್ಚೆ: ಗುರುವಾರ ಡಿಸಿಎಂ ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ನಡೆದ ವೀಡಿಯೋ ಸಂವಾದದಲ್ಲಿ ಕಂದಾಯ ಭವನವನ್ನು ಜಿಲ್ಲಾಸ್ಪತ್ರೆ ವಿಸ್ತೃತ ಕಟ್ಟಡವನ್ನಾಗಿ ಬಳಸಿಕೊಳ್ಳಲು ಚರ್ಚೆಗಳು ನಡೆದಿದೆ. ಕಂದಾಯ ಭವನವನ್ನು 300 ಹಾಸಿಗೆಗಳ ಸುಸಜ್ಜಿತ ವಿಸ್ತರಿತ ಆಸ್ಪತ್ರೆಯಾಗಿ ಮಾರ್ಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಅವರು ಸೂಚನೆ ಕೊಟ್ಟಿದ್ದಾರೆ. ತುರ್ತು ನಿರ್ವಹಣೆ ಕೇಂದ್ರ, ಅಪಘಾತ ಚಿಕಿತ್ಸೆ ವಿಭಾಗ, ಟ್ರಾಮಾ ಕೇರ್, ಕ್ಯಾನ್ಸರ್ ಆಸ್ಪತ್ರೆ ಸೇರಿದಂತೆ ಸೂಪರ್ ಸ್ಪೆಷಾಲಿಟಿ ವ್ಯವಸ್ಥೆ ಕಲ್ಪಿಸುವುದು ಅವರ ಚಿಂತನೆ. ಪಕ್ಕದಲ್ಲೇ ಜಿಲ್ಲಾಸ್ಪತ್ರೆಯೂ ಇರಲಿದ್ದು, ಜಿಲ್ಲೆಯ ರೋಗಿಗಳಿಗೆ ಒಂದೇ ಕಡೆ ಉತ್ತಮ ವೈದ್ಯಕೀಯ ಸೇವೆ ಲಭ್ಯವಾಗಿಸುವ ಈ ಚಿಂತನೆ ಎಷ್ಟು ಸಾಕಾರವಾಗಲಿದೆ ಎಂಬುದನ್ನು ಕಾದು ನೋಡಬೇಕು.
ಕಂದಾಯ ಭವನ: ಎಚ್‌ಡಿಕೆ ಕನಸು: ರಾಮನಗರ ಶಾಸಕರಾಗಿ, 2006ರಲ್ಲಿ ಪ್ರಥಮ ಬಾರಿಗೆ ಸಿಎಂ ಗಾದಿಗೇರಿದ ಎಚ್. ಡಿ.ಕುಮಾರಸ್ವಾಮಿ, ತಮ್ಮ ಆಡಳಿತಾವಧಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ರಾಮನಗರ, ಚನ್ನಪಟ್ಟಣ, ಮಾಗಡಿ ಮತ್ತು ಕನಕಪುರ ತಾಲೂಕು ಬೇರ್ಪಡಿಸಿ ರಾಮನಗರ ಜಿಲ್ಲೆ ನಿರ್ಮಿಸಿದರು. ಸುಗಮ ಮತ್ತು ಪರಿಣಾಮಕಾರಿ ಆಡಳಿತ ನೀಡುವುದು ಅವರ ಉದ್ದೇಶವಾಗಿತ್ತು. ಅದಕ್ಕೆ ಪೂರಕವಾಗಿ ಕಂದಾಯ ಭವನ, ಪೊಲೀಸ್ ಭವನ ಮತ್ತು ಜಿಪಂ ಬೃಹತ್ ಭವನ ನಿರ್ಮಿಸಿದರು. ಕಾರ್ಪೋರೇಟ್ ಸಂಸ್ಥೆಗಳ ಕಟ್ಟಡಗಳಂತೆ ಈ ಕಟ್ಟಡಗಳು ನಿರ್ಮಾಣವಾಗಿವೆ. ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳೆಲ್ಲ, ಒಂದೇ ಕಡೆ ನಾಗರಿಕರಿಗೆ ಸಿಗಬೇಕು ಎಂಬ ಉದ್ದೇಶಕ್ಕೆ ಗೌಸೀಯಾ ಕಾಲೇಜಿನ ಎದುರು ವಿಧಾನಸೌಧ ಮಾದರಿಯಲ್ಲೇ ಮತ್ತೂಂದು ಕಟ್ಟಡ ನಿರ್ಮಾಣವಾಗಿದೆ. ಕಂದಾಯ ಭವನದಲ್ಲಿದ್ದ ಡೀಸಿ ಕಚೇರಿ ಸೇರಿದಂತೆ ಎಲ್ಲಾ ಕಚೇರಿಗಳು ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕಿರ್ಣಕ್ಕೆ ಸ್ಥಳಾಂತರವಾಗಿದೆ. ಕಂದಾಯ ಭವನವನ್ನು ರಾಜೀವ್ ಗಾಂಧಿ ಆರೋಗ್ಯ ವಿವಿಗೆ ನೀಡಲಾಗಿತ್ತು. ಆದರೆ ವಿವಿ ಕಚೇರಿ ಇಲ್ಲಿಗೆ ಬರಲಿಲ್ಲ. ಕೋವಿಡ್-19 ರೆಫರಲ್ ಆಸ್ಪತ್ರೆಯಾಗಿ ಕಂದಯ ಭವನ ಪರಿವರ್ತನೆಯಾಗಿದೆ. ಇದೀಗ ಡಿಸಿಎಂ ಅವರ ಚಿಂತನೆ ಸಾಕಾರವಾದರೆ ಕಂದಾಯ ಭವನ ಇನ್ನು ಮುಂದೆ ಶಾಶ್ವತವಾಗಿ ಜಿಲ್ಲಾಸ್ಪತ್ರೆಯ ವಿಸ್ತರಿತ ಕಟ್ಟಡವಾಗಲಿದೆ.