ಮಹಾನಗರ: ಬಂಟ್ಸ್ ಹಾಸ್ಟೆಲ್ ವೃತ್ತದ ಬಳಿ ಕಾಂಕ್ರೀಟ್ ರಸ್ತೆಯಲ್ಲಿ ಅಪಾಯದ ಸ್ಥಿತಿಯಲ್ಲಿದ್ದ ಕಬ್ಬಿಣದ ಪಟ್ಟಿಯನ್ನು ಸರಿಪಡಿಸುವ ಮೂಲಕ ಮಾದರಿ ಎನಿಸಿಕೊಂಡಿದ್ದ ಟ್ರಾಫಿಕ್ ಪೊಲೀಸ್ ರೇವಣ ಸಿದ್ದಪ್ಪ ಅವರಿಗೆ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದ ಕೊನೆಯಲ್ಲಿ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಅವರು 5,000 ರೂ. ನಗದು ನೀಡಿ ಗೌರವಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್, ತನ್ನ ಕರ್ತವ್ಯದ ಜತೆಗೆ ಸಾಮಾಜಿಕ ಕಳಕಳಿಯನ್ನು ಮೆರೆದ ಟ್ರಾಫಿಕ್ ಪೊಲೀಸ್ ರೇವಣ ಸಿದ್ದಪ್ಪ ಅವರ ಕಾರ್ಯ ಮೆಚ್ಚುವಂತಹದ್ದು. ಪೊಲೀಸ್ ಇಲಾಖೆಯಲ್ಲಿ ಇಂತಹ ಸಾಮಾಜಿಕ ಕಳಕಳಿಯ ಕೆಲಸ ಮಾಡುವವರು ಕಾಣಸಿಗುವುದು ತೀರಾ ಅಪರೂಪ ಎಂದು ಹೇಳಿದರು.
ರೇವಣ ಸಿದ್ದಪ್ಪನವರು ರಸ್ತೆ ಮಧ್ಯೆ ಕುಳಿತು ಕಬ್ಬಿಣದ ಪಟ್ಟಿ ಮರುಜೋಡಣೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿಯೂ ವೈರಲ್ ಆಗಿದೆ. ವಾಹನದ ಒತ್ತಡದಿಂದಾಗಿ ಬಂಟ್ಸ್ ಹಾಸ್ಟೆಲ್ ಸರ್ಕಲ್‌ನಿಂದ ಮಲ್ಲಿಕಟ್ಟೆ ಕಡೆಗೆ ತೆರಳುವ ಕಾಂಕ್ರೀಟ್ ಮಾರ್ಗದಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ಪಟ್ಟಿ ಕಳೆದ ಕೆಲವು ದಿನಗಳ ಹಿಂದೆಯೇ ಸವೆದ ಪರಿಣಾಮ ಮೇಲೆ ಬಂದಿತ್ತು.
ಸವಾರರು ಇದನ್ನು ಗಮನಿಸದೇ ವಾಹನ ಚಲಾಯಿಸುತ್ತಿದ್ದರು. ಒಂದುವೇಳೆ ಈ ಕಬ್ಬಿಣದ ಪಟ್ಟಿ ಬೈಕ್ ಅಥವಾ ಕಾರುಗಳ ಚಕ್ರಕ್ಕೆ ಸಿಲುಕಿಕೊಂಡರೆ ಅಪಾಯ ಎದುರಾಗುತ್ತಿತ್ತು. ಇದನ್ನು ಸಾರ್ವಜನಿಕರು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿರಲಿಲ್ಲ.
ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್, ಎಸಿಪಿಗಳಾದ ಮಂಜುನಾಥ ಶೆಟ್ಟಿ, ವೆಲೆಂಟೈನ್ ಡಿ’ಸೋಜಾ, ಇನ್‌ಸ್ಪೆಕ್ಟರ್‌ಗಳಾದ ಶಿವ ಪ್ರಕಾಶ್, ಅಮಾನುಲ್ಲಾ, ಮಂಜುನಾಥ್, ಎಎಸ್‌ಐ ಯೂಸುಫ್, ಹೆಡ್‌ಕಾನ್ಸ್‌ಟೆಬಲ್
ಪುರುಷೋತ್ತಮ ಉಪಸ್ಥಿತರಿದ್ದರು.