Advertisement

ಎರಡು ದಶಕದ ಬಳಿಕ ‘ದೀಕ್ಷಾ  ವಿಧಿ’ಗೆ ಧರ್ಮಪ್ರಾಂತ ಸಾಕ್ಷಿ

10:09 AM Sep 15, 2018 | Team Udayavani |

ಮಹಾನಗರ: ನೂತನ ಬಿಷಪ್‌ ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ಮಂಗಳೂರು ಧರ್ಮಪ್ರಾಂತ್ಯದ ಕಿರೆಂ ಚರ್ಚ್‌ಗೆ ಸೇರಿದವರು. ಕಿರೆಂ ನಿವಾಸಿ ಲಾಜರಸ್‌ ಸಲ್ಡಾನ್ಹಾ ಮತ್ತು ಎಲಿಜಾ ಮಿನೇಜಸ್‌ ಅವರ 9 ಮಂದಿ ಮಕ್ಕಳಲ್ಲಿ ನಾಲ್ಕನೆಯವರಾಗಿ 1964 ಎಪ್ರಿಲ್‌ 27ರಂದು ಜನಿಸಿದ್ದ ಅವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರ್ತಿಗೊಳಿಸಿದ್ದರು. ಮಂಗಳೂರಿನ ಜಪ್ಪು ಸೈಂಟ್‌ ಜೋಸೆಫ್‌ ಸೆಮಿನರಿಯಲ್ಲಿ ಧರ್ಮಗುರು ತರಬೇತಿಗಾಗಿ ಸೇರ್ಪಡೆ ಗೊಂಡು ಫಿಲಾಸಫಿ ಮತ್ತು ಥಿಯಾಲಜಿ ಶಿಕ್ಷಣವನ್ನು ಪೂರ್ತಿಗೊಳಿಸಿದ ಅವರು 1991 ಮೇ 6ರಂದು ಧರ್ಮಗುರುವಾಗಿ ದಿವಂಗತ ಬಿಷಪ್‌ ಬಾಸಿಲ್‌ ಎಸ್‌. ಡಿ’ಸೋಜಾ ಅವರಿಂದ ದೀಕ್ಷೆ ಸ್ವೀಕರಿಸಿದ್ದರು.

Advertisement

ಗುರುದೀಕ್ಷೆಯ ಬಳಿಕ 1991-92ರಲ್ಲಿ ಮೂಡುಬೆಳ್ಳೆ (ಈಗ ಉಡುಪಿ ಧರ್ಮಪ್ರಾಂತ) ಚರ್ಚ್‌ನಲ್ಲಿ ಸಹಾಯಕ ಗುರುಗಳಾಗಿ ಸೇವೆ ಸಲ್ಲಿಸಿದ್ದರು. 1992-94 ಅವಧಿಯಲ್ಲಿ ಮಂಗಳೂರಿನ ಮಿಲಾಗ್ರಿಸ್‌ ಚರ್ಚ್‌ನಲ್ಲಿ ಹಾಗೂ
1994-96 ಅವಧಿಯಲ್ಲಿ ವಿಟ್ಲ ಶೋಕ ಮಾತಾ ಚರ್ಚ್‌ನಲ್ಲಿ ಸಹಾಯಕ ಗುರುಗಳಾಗಿದ್ದರು. ಈ ಮಧ್ಯೆ 1994ರಲ್ಲಿ ಅವರು ಬೆಂಗಳೂರಿನ ತರಬೇತುದಾರರ ಶಿಕ್ಷಣ ಸಂಸ್ಥೆಯಿಂದ ಮನಶ್ಯಾಸ್ತ್ರ ಮತ್ತು ತರಬೇತಿ ವಿಷಯದಲ್ಲಿ ಡಿಪ್ಲೊಮಾ ಪಡೆದಿದ್ದರು. 1996-99 ಅವಧಿಯಲ್ಲಿ ಜಪ್ಪು ಸೆಮಿನರಿಯಲ್ಲಿ ಪ್ರಾಧ್ಯಾಪಕರಾಗಿ ಮತ್ತು ತರಬೇತುದಾರರಾಗಿದ್ದರು.

ಈ ಸಂದರ್ಭದಲ್ಲಿ 1997-99ರಲ್ಲಿ ಅವರು ಸೆಮಿನರಿಯ ಸಹಾಯಕ ರೆಕ್ಟರ್‌ ಆಗಿಯೂ ಸೇವೆ ಸಲ್ಲಿಸಿದ್ದರು. 1999ರಲ್ಲಿ ಥಿಯಾಲಜಿಯಲ್ಲಿ ಉನ್ನತ ಶಿಕ್ಷಣಕ್ಕಾಗಿ ರೋಮ್‌ಗೆ ತೆರಳಿದ್ದರು. ರೋಮ್‌ನ ಪೊಂತಿಫಿಕಲ್‌ ಅರ್ಬನ್‌ ವಿಶ್ವವಿದ್ಯಾನಿಲಯದಲ್ಲಿ ಥಿಯಾಲಜಿಯಲ್ಲಿ ಉನ್ನತ ವ್ಯಾಸಂಗವನ್ನು 2005ರಲ್ಲಿ ಮುಗಿಸಿ ಡಾಕ್ಟರೇಟ್‌ ಪದವಿ ಪಡೆದು ಅವರು ಬಳಿಕ 2005-10 ಅವಧಿಯಲ್ಲಿ ಜಪ್ಪು ಸೆಮಿನರಿಯಲ್ಲಿ ಪ್ರಾಧ್ಯಾಪಕರಾಗಿದ್ದರು. ಈ ಸಂದರ್ಭದಲ್ಲಿ 2008ರಿಂದ 2010ರತನಕ ಸೆಮಿನರಿಯ ಸಹಾಯಕ ರೆಕ್ಟರ್‌ ಆಗಿದ್ದರು.

2010ರಲ್ಲಿ ರೋಮ್‌ಗೆ ಪೊಂತಿಫಿಕಲ್‌ ಅರ್ಬನ್‌ ವಿಶ್ವವಿದ್ಯಾನಿಲಯದಲ್ಲಿ ಥಿಯಾಲಜಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಲು ತೆರಳಿದ್ದ ಅವರು 2015ರಿಂದ ಅಲ್ಲಿ ಅಸೋಸಿಯೇಟ್‌ ಪ್ರೊಫೆಸರ್‌ ಆಗಿದ್ದರು. 2011- 2015ರ ಅವಧಿಯಲ್ಲಿ ಅವರು ಪೊಂತಿಫಿಕಲ್‌ ಅರ್ಬನ್‌ ಕಾಲೇಜಿನಲ್ಲಿ ಸಹಾಯಕ ಆಧ್ಯಾತ್ಮಿಕ ನಿರ್ದೇಶಕರಾಗಿಯೂ ಸೇವೆ
ಒದಗಿಸಿದ್ದಾರೆ. 2015 ಮಾರ್ಚ್‌ನಲ್ಲಿ ಅವರನ್ನು ಧರ್ಮಾಧ್ಯಕ್ಷರುಗಳ ಸಿನೋಡ್‌ನ‌ ಮಹಾ ಕಾರ್ಯ ವಿಭಾಗದ ಸಲಹೆಗಾರರನ್ನಾಗಿ ಪೋಪ್‌ ಅವರು ನೇಮಿಸಿದ್ದರು.

ಸೇವೆ ಮತ್ತು ನಾಯಕತ್ವ
ಯೇಸು ಕ್ರಿಸ್ತರು ತಮ್ಮ ಶಿಷ್ಯಂದಿರಲ್ಲಿ 12 ಮಂದಿಯನ್ನು ಆಯ್ಕೆ ಮಾಡಿ ಅವರಿಗೆ ಕೆಲವೊಂದು ಜವಾಬ್ದಾರಿಗಳನ್ನು ವಹಿಸಿ ಅವುಗಳನ್ನು ನಿರ್ವಹಿಸಲು ಅಧಿಕಾರವನ್ನು ನೀಡಿದ್ದರು ಎನ್ನುವುದು ಬೈಬಲ್‌ ಆಧಾರಿತವಾದ ಉಲ್ಲೇಖ. ಅದರಂತೆ ಯೇಸುಕ್ರಿಸ್ತರ ಮರಣ ಹಾಗೂ ಪುನರುತ್ಥಾನದ ಬಳಿಕ ಈ 12 ಮಂದಿ ಶಿಷ್ಯಂದಿರು ತಮ್ಮ ಮಹತ್ವದ ಜವಾಬ್ದಾರಿಯಲ್ಲಿ ಮಗ್ನರಾಗಿದ್ದರು. ಇಂದು ಈ ಶಿಷ್ಯಂದಿರ ಸ್ಥಾನದಲ್ಲಿ ಧರ್ಮಾಧ್ಯಕ್ಷರಿದ್ದಾರೆ.

Advertisement

12 ಮಂದಿ ಶಿಷ್ಯಂದಿರ ಪೈಕಿ ಪೇತ್ರನಿಗೆ (ಈಗ ಸೈಂಟ್‌ ಪೀಟರ್‌) ವಿಶಿಷ್ಟ ಸ್ಥಾನವಿದ್ದು, ನಾಯಕತ್ವ ವಹಿಸಿದ್ದರು. ಇಂದು ಈ ಪೇತ್ರನ ಸ್ಥಾನದಲ್ಲಿ ಜಗದ್ಗುರು ಪೋಪ್‌ ಅವರಿದ್ದಾರೆ ಹಾಗೂ ಉಳಿದ ಶಿಷ್ಯಂದಿರ ಸ್ಥಾನದಲ್ಲಿ ಎಲ್ಲ ಧರ್ಮಾಧ್ಯಕ್ಷರಿದ್ದಾರೆ. ಅವರು ಕ್ರೈಸ್ತರಿಗೆ ವಿವಿಧ ಸೇವೆಗಳನ್ನು ಒದಗಿಸುವಲ್ಲಿ ನೇತೃತ್ವ ವಹಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಧರ್ಮಪ್ರಾಂತವನ್ನು ತಳಮಟ್ಟದ ಕ್ರೈಸ್ತಸಭೆ ಎನ್ನಲಾಗುತ್ತಿದೆ. ಜಗತ್ತಿನಾದ್ಯಂತ ವ್ಯಾಪಿಸಿರುವ ಕ್ರೈಸ್ತ ಸಭೆಯು ತಳಮಟ್ಟದ ಕ್ರೈಸ್ತಸಭೆಯಲ್ಲಿ ಧರ್ಮಾಧ್ಯಕ್ಷರ ನಾಯಕತ್ವದಲ್ಲಿ ವಿಶ್ವಾಸ ಮತ್ತು ನೈತಿಕತೆಯ ಬದುಕನ್ನು ನಡೆಸುತ್ತದೆ. 

14ನೇ ಧರ್ಮಾಧ್ಯಕ್ಷರು
ಫಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ಮಂಗಳೂರು ಧರ್ಮಪ್ರಾಂತದ 14ನೇ ಧರ್ಮಾಧ್ಯಕ್ಷರು. 124 ಚರ್ಚ್‌ಗಳು ಮತ್ತು 2,48,860 ಕೆಥೋಲಿಕ್‌ ಕ್ರೈಸ್ತರಿರುವ ಮಂಗಳೂರು ಧರ್ಮಪ್ರಾಂತವು ಸ್ವತಂತ್ರ ಧರ್ಮಪ್ರಾಂತವಾಗಿ 130 ವರ್ಷಗಳು ಕಳೆದಿವೆ. ಆಧ್ಯಾತ್ಮಿಕ ಮತ್ತು ಸಾಮಾಜಿಕ ನೆಲೆಯಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ಹಲವಾರು ಮಂದಿ ಯುವಕರು ಧಾರ್ಮಿಕ ಸೇವೆಯ ಬಗ್ಗೆ ಒಲವು ತೋರಿ ಗುರುದೀಕ್ಷೆ ಪಡೆದು ಧರ್ಮಗುರುಗಳಾಗಿ ದೇಶ ವಿದೇಶಗಳಲ್ಲಿ ಗುರುಗಳಾಗಿ ಮತ್ತು ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿರುವುದು ಗಮನಾರ್ಹ ಸಂಗತಿ.
ಧಾರ್ಮಿಕ ಮತ್ತು ಸಾಮಾಜಿಕ ಸಂಘಸಂಸ್ಥೆಗಳು ಸಾಕಷ್ಟು ಹುಟ್ಟಿಕೊಂಡಿವೆ. ವಿಶ್ವಾಸಿಗಳ ನಾಯಕತ್ವವು ಕ್ರೈಸ್ತ ಸಭೆಯಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗಮನ ಸೆಳೆಯುವಷ್ಟರ ಪ್ರಮಾಣದಲ್ಲಿ ಇದೆ. ಇಂತಹ ಉತ್ತಮ ವಾತಾವರಣದ ಸಂದರ್ಭದಲ್ಲಿ ಹೊಸ ಧರ್ಮಾಧ್ಯಕ್ಷರಾದ ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾªನ್ಹಾ ಅವರು ಸೆ. 15ರಂದು ಧರ್ಮಪ್ರಾಂತದ ಆಡಳಿತ ಚುಕ್ಕಾಣಿಯನ್ನು ಹಿಡಿಯುತ್ತಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಧರ್ಮಪ್ರಾಂತವು ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಧರ್ಮಪ್ರಾಂತದ ವಿಶ್ವಾಸಿಗಳು ಮತ್ತು ಸುಮನಸ್ಕರು ಆಶಿಸಿದ್ದಾರೆ. 

ಬಿಷಪ್‌ ಅಲೋಶಿಯಸ್‌ ಸೇವೆ
ನಿರ್ಗಮನ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್ಲ್  ಡಿ’ಸೋಜಾ ಅವರು 22 ವರ್ಷಗಳ ಅವಧಿಯಲ್ಲಿ ಧರ್ಮಪ್ರಾಂತಕ್ಕೆ
ಸಮರ್ಥ ನಾಯಕತ್ವ ನೀಡಿ ಅಸಾಧಾರಣ ಮತ್ತು ಯಶಸ್ವೀ ಸೇವೆಯನ್ನು ಸಲ್ಲಿಸಿದ್ದಾರೆ. ರೆ| ಡಾ| ಅಲೋಶಿಯಸ್‌
ಪಾವ್ಲ್ ಡಿ’ಸೋಜಾ ಅವರು ಬಂಟ್ವಾಳ ತಾಲೂಕು ಫರ್ಲಾ ನಿವಾಸಿಯಾಗಿರುವ ಅವರು ಜಪ್ಪು ಸೆಮಿನರಿಯಲ್ಲಿ ಕಲಿತು 1966 ಡಿಸೆಂಬರ್‌ 3ರಂದು ಗುರುದೀಕ್ಷೆ ಪಡೆದಿದ್ದರು. ವಿವಿಧೆಡೆ ಸೇವೆ ಸಲ್ಲಿಸಿದ ಅವರನ್ನು 1996ರಲ್ಲಿ ಅವರನ್ನು ಪೋಪ್‌ ಜಾನ್‌ ಪಾವ್ಲ್ ದ್ವಿತೀಯ ಅವರು ದಿ| ಬಿಷಪ್‌ ಬಾಸಿಲ್‌ ಎಸ್‌. ಡಿ’ಸೋಜಾ ಅವರ ಸಹಾಯಕ ಬಿಷಪರಾಗಿ ನೇಮಕ ಮಾಡಿದ್ದರು. ಅದೇ ವರ್ಷ ಮೇ 15ರಂದು ಅವರು ಬಿಷಪ್‌ ದೀಕ್ಷೆ ಸ್ವೀಕರಿಸಿದ್ದರು. ಬಿಷಪ್‌ ಬಾಸಿಲ್‌ ಎಸ್‌. ಡಿ’ಸೋಜಾ ಅವರ ಮರಣಾನಂತರ 1996 ಡಿಸೆಂಬರ್‌ 18ರಂದು ಅವರನ್ನು ಮಂಗಳೂರು ಧರ್ಮಪ್ರಾಂತದ ಬಿಷಪ್‌ ಆಗಿ ನೇಮಕ ಮಾಡಲಾಗಿತ್ತು. 2018 ಜುಲೈ 3ರ ತನಕ ಧರ್ಮಾಧ್ಯಕ್ಷರಾಗಿದ್ದ ಅವರು ಆ ಬಳಿಕ ಸೆಪ್ಟಂಬರ್‌ 15ರತನಕ ಧರ್ಮಪ್ರಾಂತದ ಆಡಳಿತಾಧಿಕಾರಿಯಾಗಿದ್ದರು.

ಮಂಗಳೂರು ಧರ್ಮ ಪ್ರಾಂತದ ಚುಕ್ಕಾಣಿ ಹಿಡಿದ ಧರ್ಮಾಧ್ಯಕ್ಷರು
1. ತೋಮಸ್‌ ಡಿ ಕ್ಯಾಸ್ಟ್ರೊ (1674-1684)
2. ಬೆರ್ನಾಡಿನ್‌ (1845- 1853)
3. ಮೈಕಲ್‌ ಆ್ಯಂಟನಿ (1853- 1870)
4. ಎಫ್ರೆಮ್‌ (1870- 1873)
5.ಅಬ್ಬೊಂಡಿಯೊ ಕವಾದಿನಿ (1895- 1910)
6. ಪಾವ್ಲೊ ಚಾರ್ಲ್ಸ್‌ ಪೆರಿನಿ (1910- 1923)
7. ಪಾವ್ಲೊ ಚಾರ್ಲ್ಸ್‌ ಪೆರಿನಿ (ಆಡಳಿತಾಧಿಕಾರಿ 1923- 1928)
8. ವಲೇರಿಯನ್‌ ಜೋಸೆಫ್‌ ಡಿ’ಸೋಜಾ (1928- 1930)
9. ವಿಕ್ಟರ್‌ ರೊಜಾರಿಯೊ ಫೆರ್ನಾಂಡಿಸ್‌ (1931- 1956)
10. ಬಾಸಿಲ್‌ ಸಾಲ್ವದೋರ್‌ ತಿಯೊಡೊರ್‌ ಪೆರಿಸ್‌ (1956- 1958)
11. ರೈಮಂಡ್‌ ಡಿ’ ಮೆಲ್ಲೊ (1959- 1964)
12. ಬಾಸಿಲ್‌ ಸಾಲ್ವದೋರ್‌ ಡಿ’ಸೋಜಾ (1965- 1996)
13. ಅಲೋಶಿಯಸ್‌ ಪಾವ್‌É ಡಿ’ಸೋಜಾ (1996- 2018)
14. ಪೀಟರ್‌ ಪಾವ್ಲ್ ಸಲ್ಡಾನ್ಹಾ (2018 ಸೆ. 15 ರಿಂದ)

Advertisement

Udayavani is now on Telegram. Click here to join our channel and stay updated with the latest news.

Next