ಉಡುಪಿ: ತಿಂಗಳ ಕೊನೆಯ ಶನಿವಾರ ಕೂಡ ಸರಕಾರಿ ರಜೆ ಘೋಷಣೆ ಬಳಿಕ ಜೂ. 22ರಂದು ಇದರ ಮೊದಲ ರಜೆ ಹಲವರಿಗೆ ಕಿರಿಕಿರಿಯಾಯಿತು.
ತಿಂಗಳ ಹಿಂದೆ ಸುದ್ದಿಯಾಗಿದ್ದರೂ ಜನರಿಗೆ ಮಾಹಿತಿ ಕೊರತೆಯಿಂದಾಗಿ ಕೆಲವು ಮಂದಿ ಸಾಮಾನ್ಯ ದಿನವೆಂಬಂತೆ ಉಡುಪಿ ತಾಲೂಕು ಕಚೇರಿಗೆ ಆಗಮಿಸಿದ್ದರು. ಕಚೇರಿಯಲ್ಲಿ ‘ಈ ದಿನ ರಜೆ’ ಎಂಬ ಫಲಕವನ್ನು ಕಂಡು ವಾಪಸಾದರು.
ಪಡಿತರ ಚೀಟಿ ಪಡೆದುಕೊಳ್ಳಲು ಸಾರ್ವಜನಿಕರಿಗೆ ನಿರ್ದಿಷ್ಟ ದಿನಾಂಕ ನಿಗದಿ ಮಾಡಿ ಅಂದು ಬರಲು ಸೂಚಿಸಲಾಗಿರುತ್ತದೆ. ಅದರಂತೆ ಕೆಲವು ಮಂದಿಗೆ ಜೂ.22ರಂದು ಬರಲು ತಿಳಿಸಲಾಗಿತ್ತು. ಈ ರೀತಿ ದಿನಾಂಕವನ್ನು ನಾಲ್ಕನೇ ಶನಿವಾರದ ರಜೆ ಘೋಷಣೆಯ ಮೊದಲೇ ನೀಡಲಾಗಿತ್ತು. ಶನಿವಾರ ಬೆಳಗ್ಗೆ 7-8 ಮಂದಿ ಪಡಿತರ ಚೀಟಿ ಪಡೆದುಕೊಳ್ಳಲು ಆಗಮಿಸಿದ್ದರು. ಆದರೆ ರಜೆಯ ಮಾಹಿತಿ ತಿಳಿದು ಅನಂತರ ಅಲ್ಲಿಂದ ವಾಪಸಾದರು.
ಉಳಿದಂತೆ ತಾಲೂಕು ಕಚೇರಿಯ ಇತರೆ ಕೆಲಸಗಳಿಗಾಗಿ ಬೆಳಗ್ಗೆ 4-5 ಮಂದಿ ಬಂದಿದ್ದರು. ಮಧ್ಯಾಹ್ನ ಬಳಿಕ ಸಾರ್ವಜನಿಕರೂ ಕಚೇರಿಯತ್ತ ಸುಳಿಯಲಿಲ್ಲ.
ಇದೇ ರೀತಿ ಗ್ರಾಮಕರಣಿಕರು, ಗ್ರಾ.ಪಂ., ತಾಲೂಕಿನ ವಿವಿಧ ಇಲಾಖೆಗಳ ಕಚೇರಿಗಳಿಗೆ ಜನರು ಬಂದು ವಾಪಸಾದರು.