ನವದೆಹಲಿ: ಕೊರೊನಾ ಸೋಂಕಿನ ವ್ಯಾಪಿಸುವಿಕೆಗೆ ಕಡಿವಾಣ ಹಾಕಬೇಕೆಂದರೆ “ಟೆಸ್ಟ್, ಟ್ರ್ಯಾಕ್, ಟ್ರೀಟ್’ ಎಂಬ ಮಂತ್ರವನ್ನು ಪಾಲಿಸಿ ಎಂದು 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಶನಿವಾರ ಸೂಚಿಸಿದೆ.
ಹರ್ಯಾಣ, ಆಂಧ್ರ, ಒಡಿಶಾ, ಗೋವಾ, ಹಿಮಾಚಲ, ಉತ್ತರಾಖಂಡ, ದೆಹಲಿ ಮತ್ತು ಚಂಡಿಗಡದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಪರೀಕ್ಷೆ ನಡೆಸಿ, ಲಸಿಕೆ ನೀಡಿಕೆ ಪ್ರಮಾಣವನ್ನೂ ಹೆಚ್ಚಿಸುವಂತೆ ಸೂಚಿಸಲಾಗಿದೆ. ಇದೇ ವೇಳೆ, ಮಹಾರಾಷ್ಟ್ರ ಮತ್ತು ಪಂಜಾಬ್ ಗೆ ಕೇಂದ್ರ ಸರ್ಕಾರವು ಉನ್ನತ ಮಟ್ಟದ ತಜ್ಞರ ತಂಡವನ್ನು ರವಾನಿಸಿದೆ.
ಇದೇ ವೇಳೆ, ಶುಕ್ರವಾರದಿಂದ ಶನಿವಾರಕ್ಕೆ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 18,327 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ 108 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ವೃದ್ಧಿಯಾಗುತ್ತಿರುವ ಲಕ್ಷಣ ಗೋಚರಿಸಿದೆ.
ಇನ್ನು, ಶುಕ್ರವಾರ ಒಟ್ಟಾರೆ 15 ಲಕ್ಷ ಮಂದಿಗೆ ಲಸಿಕೆ ವಿತರಣೆ ಮಾಡಲಾಗಿದ್ದು, ದೇಶಾದ್ಯಂತ ಲಸಿಕೆ ಪಡೆದವರ ಸಂಖ್ಯೆ ಈವರೆಗೆ 1.94 ಕೋಟಿಗೇರಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ನಡುವೆ, ಗುಜರಾತ್‌ನಲ್ಲಿ ಎರಡನೇ ಡೋಸ್ ಲಸಿಕೆ ಪಡೆದ ಕೆಲವೇ ದಿನಗಳಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢ ಪಟ್ಟ ಘಟನೆ ನಡೆದಿದೆ.
ಇದನ್ನೂ ಓದಿ:ಮುತ್ತೂಟ್ ಫೈನಾನ್ಸ್‌ನ ಮುಖ್ಯಸ್ಥ ಮಥಾಯ್.ಜಿ. ಜಾರ್ಜ್ ನಿಧನ
ದಲೈ ಲಾಮಾ ಲಸಿಕೆ ಸ್ವೀಕಾರ:
ಟಿಬೆಟಿಯನ್ ಧರ್ಮಗುರು ದಲೈ ಲಾಮಾ, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಪತ್ನಿ, ನಟಿ ಹೇಮಮಾಲಿನಿ ಸೇರಿದಂತೆ ಹಲವರು ಶನಿವಾರ ಲಸಿಕೆಯ ಮೊದಲ ಡೋಸ್ ಪಡೆ ದಿ ದ್ದಾರೆ.