Advertisement

ಮುಂದಿನ ಅಧಿವೇಶನದಲ್ಲಿ ಭೂ ಸುಧಾರಣೆ ಕಾಯ್ದೆ ವಾಪಸ್‌: ಸಿಎಂ ಸಿದ್ದರಾಮಯ್ಯ

10:53 PM Jul 17, 2023 | Team Udayavani |

ಬೆಂಗಳೂರು: ವಿವಾದಿತ ಭೂ ಸುಧಾರಣೆ ಕಾಯ್ದೆಯನ್ನು ಹಿಂಪಡೆಯುವ ಬಗ್ಗೆ ಮುಂದಿನ ಅಧಿವೇಶನದಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಶಾಸಕರಾದ ಬಿ.ಆರ್‌. ಪಾಟೀಲ್‌ ಹಾಗೂ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸೋಮವಾರ ತಮ್ಮನ್ನು ಭೇಟಿಯಾದ ರೈತ ಮುಖಂಡರ ನಿಯೋಗಕ್ಕೆ ಮುಖ್ಯಮಂತ್ರಿ ಈ ಭರವಸೆ ನೀಡಿದರು.

Advertisement

ಸಭೆಯಲ್ಲಿ ಎಪಿಎಂಸಿ ಕಾಯ್ದೆಯಂತೆಯೇ ರೈತರ ವಿರೋಧಿಯಾದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನೂ ಹಿಂಪಡೆಯಬೇಕು ಎಂಬ ಒತ್ತಾಯ ಕೇಳಿಬಂತು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಬಿಜೆಪಿ ಸರಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಸರಕಾರ ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು. ಜತೆಗೆ ರೈತರ ಸಮಸ್ಯೆ ಬಗ್ಗೆ ವಿಸ್ತೃತ ಚರ್ಚೆ ಮಾಡಲು ಪ್ರತ್ಯೇಕ ಸಭೆ ನಡೆಸಲಾಗುವುದು ಎಂದರು.

ರೈತ ಮುಖಂಡರು ಮಾತನಾಡಿ, ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್‌ ಪಡೆಯಬೇಕು ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದು, ಆದಷ್ಟು ಬೇಗ ವಾಪಸ್‌ ಪಡೆಯಬೇಕು. ತಿದ್ದುಪಡಿ ಊಳುವವರ ಕೇಂದ್ರಿತವಾಗಿರಬೇಕು. ಜಾನುವಾರು ಹತ್ಯೆ ನಿಷೇಧ ಕೂಡ ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು. ಬಜೆಟ್‌ನಿಂದ ಹೊರಗುಳಿದಿರುವ ಕೆಲವು ವಿಚಾರಗಳ ಬಗ್ಗೆ ಚರ್ಚಿಸಬೇಕಿದ್ದು, ಸರ್ಕಾರ ಮಾರ್ಪಾಡು ಮಾಡಿರುವ ಎಪಿಎಂಸಿ ಕಾಯ್ದೆಯ ಬಗ್ಗೆಯೂ ಚರ್ಚಿಸಬೇಕಿದೆ ಎಂದು ಶಾಸಕ ಬಿ.ಆರ್‌. ಪಾಟೀಲ್‌ ತಿಳಿಸಿದರು.

ಈ ಹಿಂದೆ ಕೃಷಿ ಬೆಲೆ ಆಯೋಗವನ್ನು ಇದೇ ಕಾಂಗ್ರೆಸ್‌ ಸರ್ಕಾರ ಘೋಷಣೆ ಮಾಡಿತ್ತು. ಅದಕ್ಕೆ ಶಾಸನಾತ್ಮಕ ರೂಪಕೊಟ್ಟು, ಆವರ್ತ ನಿಧಿ ನೀಡಬೇಕು’ ಎಂದು ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ ಕಮ್ಮರಡಿ ಗಮನ ಸೆಳೆದರು. ಕೇಂದ್ರ ಸರ್ಕಾರ ಪಡಿತರ ವ್ಯವಸ್ಥೆಗೆ ಅಕ್ಕಿ ಕೊಡದೆ ರಾಜಕೀಯ ಮಾಡಿರುವುದನ್ನು ವಿರೋಧ ಇದೆ. ಪೌಷ್ಟಿಕ ಆಹಾರ ನೀಡಲು ಪಡಿತರ ವ್ಯವಸ್ಥೆಗೆ ರೈತರೆ ಆಹಾರಧಾನ್ಯ ಕೊಡುವ ವ್ಯವಸ್ಥೆ ಮಾಡಬಹುದು. ಆಗ ಸಮಸ್ಯೆಗಳು ಬಗೆಹರಿಯುತ್ತವೆ’ ಎಂದು ಕೆಲ ರೈತ ಮುಖಂಡರು ಸಲಹೆ ನೀಡಿದರು. ಕೃಷಿ ಸಚಿವ ಚಲುವರಾಯಸ್ವಾಮಿ, ತೋಟಗಾರಿಕಾ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹಾಗೂ ರೈತ ಮುಖಂಡರು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next