ಬೆಳ್ತಂಗಡಿ: ವಾಹನದ ಅರ್ಹತಾ ಪತ್ರ (Fitness Certificate) ನೀಡುವ ಸಂದರ್ಭಗಳಲ್ಲಿ ವಾಹನಗಳಿಗೆ ರೆಟ್ರೋ ರಿಪ್ಲೆಕ್ಟಿವ್ ಟೇಪ್ ಮತ್ತು ರೆಯರ್ ಮಾರ್ಕಿಂಗ್ ಪ್ಲೆಟ್ (Retro reflective tape &rear marking plate) ಹಾಕುವ ಸ್ಟಿಕ್ಕರಿಗೆ ದುಬಾರಿ ಹಣ ವಸೂಲಿಗಿಳಿದ ಘಟನೆ ಮತ್ತೆ ಮುಂದುವರೆದಿದೆ.
ಈ ವಿಚಾರವಾಗಿ ಕಳೆದ ಬುಧವಾರವಷ್ಟೆ ವಾಹನ ಮಾಲಕರು ಪ್ರತಿಭಟಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿತ್ತು. ಈ ವಿಚಾರವಾಗಿ ಶಾಸಕ ಹರೀಶ್ ಪೂಂಜ, ಮಾಜಿ ಶಾಸಕರ ಗಮನಕ್ಕೆ ಬಂದು ಮೇಲಧಿಕಾರಿಗಳಲ್ಲಿ ಚರ್ಚಿಸಿ ಸ್ಟಿಕ್ಕರ್ ಅಳವಡಿಸುವ ಪ್ರಕ್ರಿಯೆ ತಡೆಯಲಾಗಿತ್ತು. ಆದರೆ ಅ.19 ರಂದು ಬಂಟ್ವಾಳ ಸಾರಿಗೆ ವಿಭಾಗಕ್ಕೆ ಒಳಪಟ್ಟ ಬೆಳ್ತಂಗಡಿ ವ್ಯಾಪ್ತಿಯ ಅದಾಲತ್ ನಲ್ಲಿ ಸ್ಟಿಕ್ಕರ್ ಅಳವಡಿಕೆಯಲ್ಲಿ ಮತ್ತೆ ದಬ್ಬಾಳಿಕೆ ಮುಂದುವರೆದಿದೆ.
ಬೆಳ್ತಂಗಡಿಯಲ್ಲಿ ಲಾರಿ, ಬಸ್ಸು ಸೇರಿದಂತೆ ಎಫ್.ಸಿ. ಮಾಡಲು ಬೆಳ್ತಂಗಡಿ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿ ಬುಧವಾರ ಸಾರಿಗೆ ಪ್ರಾಧಿಕಾರ ನಿಗದಿ ಪಡಿಸಿದ ಸಂಸ್ಥೆಯವರು ಹಾಕುವ ರಿಪ್ಲೆಕ್ಟರ್ ಸ್ಟಿಕರ್ ಅಳವಡಿಸಿದ ನಂತರ ಎಫ್.ಸಿ. ಮಾಡುವ ಬಗ್ಗೆ ಆದೇಶವಾಗಿದೆ.
ಇದನ್ನೂ ಓದಿ : ನ್ಯೂಜೆರ್ಸಿಗೆ ತೆರಳುತ್ತಿದ್ದ ವಿಮಾನದೊಳಗೆ ಬುಸ್ ಬುಸ್… ಕಕ್ಕಾಬಿಕ್ಕಿಯಾದ ಪ್ರಯಾಣಿಕರು
ಈ ಸ್ಟಿಕರ್ ದರ 1 ಮೀಟರ್ ಗೆ 160 ರೂ. ಆಗಿದ್ದು ಒಂದು ಪಿಕಪ್ ವಾಹನದ ಸ್ಟಿಕರ್ ಗೆ ಸುಮಾರು 1400 ಲಾರಿ, ಬಸ್ ಗೆ ಅಂದಾಜು 5 ಸಾವಿರ ರೂಪಾಯಿ ನೀಡಬೇಕಾಗಿದೆ. ಈ ಹಿಂದೆ ಇದೇ ಸ್ಟಿಕ್ಕರ್ 200 ರೂ. ನಲ್ಲಿ ಪೂರ್ಣ ವಾಹನಕ್ಕೆ ಲಭ್ಯವಾಗುತ್ತಿತ್ತು ಎಂದು ವಾಹನ ಮಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಬಂಟ್ವಾಳ, ಪುತ್ತೂರು ಆರ್. ಟಿ.ಒ ವ್ಯಾಪ್ತಿಯಲ್ಲಿ ಮಾತ್ರ ಈ ರೀತಿ ಆಗಿದ್ದು ಮಾಹಿತಿ ನೀಡದೇ ಈ ರೀತಿ ಮಾಡುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಬಾರಿ ಶಾಸಕ ಹರೀಶ್ ಪೂಂಜ ಹಾಗೂ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರು ವಾಹನ ಮಾಲೀಕರ ಪರ ಅಧಿಕಾರಿಗಳ ಬಳಿ ಚರ್ಚಿಸಿದ್ದರಿಂದ ಕೇವಲ ಒಂದು ದಿನಕ್ಕಷ್ಟೆ ಸ್ಥಗಿತಗೊಳಿಸಲಾಗಿತ್ತು. ಆದರೆ ಮತ್ತೆ ಅದೇ ದಂದೆ ಆರಂಭಿಸಿದ್ದಾರೆ. ಗುತ್ತಿಗೆ ಪಡೆದವರಿಂದಲೇ ಸ್ಟಿಕ್ಕರ್ ಅಳವಡಿಸಬೇಕು ಇಲ್ಲದಿದ್ದರೆ ಎಫ್.ಸಿ. ಮಾಡಲು ಬಿಡುವುದಿಲ್ಲ ಎಂಬ ದಬ್ಬಾಳಿಕೆ ನಡೆಯುತ್ತಿದೆ ಎಂದು ವಾಹನ ಮಾಲಕರು ಆರೋಪಿಸಿದ್ದಾರೆ.
ಈ ಕುರಿತು ಸರಕಾರ ಎಷ್ಟು ಮೊತ್ತ ನಿಗದಿ ಪಡಿಸಿದೆ ಎಂಬ ಬಗ್ಗೆ ಗುತ್ತಿಗೆ ಪಡೆದವರ ಬಳಿ ಯಾವುದೇ ಮಾಹಿತಿಯಿಲ್ಲ. ಸ್ಟಿಕ್ಕರ್ ಅಳವಡಿಸುವವರು ಹಾಕಿದ ಮೊತ್ತವನ್ನು ವಾಹನ ಸವಾರರು ನೀಡಿ ಎಫ್.ಸಿ. ಮಾಡುವ ಪರಿಸ್ಥಿತಿ ವಾಹನ ಸವಾರರದ್ದಾಗಿದೆ.