Advertisement

ಕಣ್ಣೀರಿನ ಪ್ರತಿ ಹನಿಗೂ ಪ್ರತೀಕಾರ

12:30 AM Feb 17, 2019 | |

ಹೊಸದಿಲ್ಲಿ/ಧುಲೆ: “ನಮ್ಮ ಯೋಧರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಪ್ರತಿ ಹನಿ ಕಣ್ಣೀರಿಗೂ ಪ್ರತೀಕಾರ ತೀರಿಸಿಯೇ ತೀರುತ್ತೇವೆ.’  ಪುಲ್ವಾಮಾ ದಾಳಿಯಲ್ಲಿ 44 ಮಂದಿ ಯೋಧರನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ನೀಡಿರುವ ವಾಗ್ಧಾನವಿದು. ಶನಿವಾರ ಮಹಾರಾಷ್ಟ್ರದ ಧುಲೆ ಮತ್ತು ಯವತ್ಮಾಲ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಮತ್ತೂಮ್ಮೆ ದಾಳಿಯ ಬಗ್ಗೆ ಪ್ರಸ್ತಾಪಿಸಿ ಆಕ್ರೋಶಭರಿತರಾದ ಮೋದಿ ಅವರು ದೇಶದ ಜನರಿಗೆ ಇಂತಹುದೊಂದು ಆಶ್ವಾಸನೆಯನ್ನು ನೀಡಿದ್ದಾರೆ.

Advertisement

ಮಹಾರಾಷ್ಟ್ರದಲ್ಲಿ ಹಲವು ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡಿದ ಅವರು, “ಇದು ನವಭಾರತ. ನಮ್ಮ ವಿಧಾನಗಳು ಹಾಗೂ ನೀತಿಗಳು ಬದಲಾಗಿವೆ. ಇದನ್ನು ಇಡೀ ಜಗತ್ತೇ ಈಗ ನೋಡುತ್ತಿದೆ. ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಲು ಗನ್‌ಗಳು, ಬಾಂಬ್‌ಗಳನ್ನು ಪೂರೈಕೆ ಮಾಡುವವರನ್ನು ಇಂದಿನ ಭಾರತ ಸಹಿಸುವುದಿಲ್ಲ. ಅವರು ಶಾಂತಿಯಿಂದ ನಿದ್ದೆ ಮಾಡಲು ನಾವು ಬಿಡುವುದಿಲ್ಲ. ಪುಲ್ವಾಮಾದಲ್ಲಿ ನಡೆದಿರುವ ದಾಳಿಯು ದೇಶದ ಪ್ರತಿಯೊಬ್ಬರ ಕಣ್ಣುಗಳನ್ನೂ ಹನಿಗೂಡಿಸಿದೆ. ಅವರ ಕಣ್ಣೀರಿನ ಪ್ರತಿ ಹನಿಗೂ ಪ್ರತೀಕಾರ ತೀರಿಸದೇ ಬಿಡುವುದಿಲ್ಲ’ ಎಂದು ಘೋಷಿಸಿದರು. ಸರಕಾರ ಮಾತ್ರವಲ್ಲ, ಈ ದೇಶದ ನಾಗರಿಕರಾಗಿ ನಾವುಗಳು ದೇಶಕ್ಕಾಗಿ ಬಲಿದಾನ ಮಾಡಿದ ವೀರರ ಕುಟುಂಬಗಳ ಜತೆ ನಿಲ್ಲಬೇಕು. ಇದು ಶೋಕ ವ್ಯಕ್ತಪಡಿಸಬೇಕಾದ ಸಮಯ. ನಾವೆಲ್ಲರೂ ಅತ್ಯಂತ ಸೂಕ್ಷ್ಮವಾಗಿ ವರ್ತಿಸಬೇಕು.

ಪಾಕ್‌ನ ಎರಡನೇ ಹೆಸರೇ ಭಯೋತ್ಪಾದನೆ: ದೇಶ ವಿಭಜನೆಯ ಬಳಿಕ ಅಸ್ತಿತ್ವಕ್ಕೆ ಬಂದ ದೇಶವೊಂದು, ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಾ ಬಂದಿದೆ. ದಿವಾಳಿಯ ಅಂಚಿನಲ್ಲಿರುವ ಆ ದೇಶದ ಎರಡನೇ ಹೆಸರೇ ಭಯೋತ್ಪಾದನೆ ಎಂದು ಪಾಕಿಸ್ಥಾನವನ್ನು ಪರೋಕ್ಷವಾಗಿ ಉಲ್ಲೇಖೀಸಿ ಪ್ರಧಾನಿ ಮೋದಿ ತಿವಿದಿದ್ದಾರೆ. ನಮಗೆ ಎಲ್ಲರ ಆಕ್ರೋಶ ಅರ್ಥವಾಗುತ್ತದೆ. ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಲು ಸೇನೆಗೆ ಪರಮಾಧಿಕಾರವನ್ನು ನೀಡಿದ್ದೇವೆ. ಭದ್ರತಾ ಪಡೆಯ ಮೇಲೆ ನಂಬಿಕೆಯಿಡಿ ಎಂದೂ ಮೋದಿ ಕರೆ ನೀಡಿದ್ದಾರೆ. ಯವತ್ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 2 ನಿಮಿಷಗಳ ಕಾಲ ಮೌನ ವಹಿಸಿ ಅಗಲಿದ ಯೋಧರಿಗೆ ಗೌರವ ಸಲ್ಲಿಸಲಾಯಿತು. ಕೇಂದ್ರ ಸಚಿವರಾದ ಗಡ್ಕರಿ, ಹನ್ಸರಾಜ್‌ ಅಹಿರ್‌, ಮಹಾರಾಷ್ಟ್ರ ಸಿಎಂ ಫ‌ಡ್ನವೀಸ್‌ ಮತ್ತಿತರರು ಪಾಲ್ಗೊಂಡಿದ್ದರು.

ಪೋಖ್ರಾನ್‌ನಲ್ಲಿ ಬೃಹತ್‌ ಕವಾಯತು
ಪುಲ್ವಾಮಾ ದಾಳಿಯು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ನಡುವೆಯೇ, ಭಾರತದ ವಾಯುಪಡೆ ರಾಜಸ್ಥಾನದ ಪೋಖ್ರಾನ್‌ನಲ್ಲಿ ಬೃಹತ್‌ ಕವಾಯತು ನಡೆಸಿದೆ. ಶನಿವಾರ ನಡೆದ ಈ ಕವಾಯತಿನಲ್ಲಿ ಎಲ್ಲ ವಿಧದ ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳನ್ನೂ ಬಳಸಿಕೊಳ್ಳಲಾಗಿತ್ತು. ಒಟ್ಟು 137 ವಿವಿಧ ಯುದ್ಧ ವಿಮಾನಗಳು ಭಾಗಿಯಾಗಿದ್ದವು. ಇದನ್ನು ವಾಯು ಶಕ್ತಿ ಪ್ರಯೋಗ ಎಂದು ಕರೆಯಲಾಗಿದ್ದು, ತೇಜಸ್‌, ಸುಧಾರಿತ ಹಗುರ ಹೆಲಿಕಾಪ್ಟರ್‌ ಮತ್ತು ಆಕಾಶ್‌ ಹಾಗೂ ಅಸ್ತ್ರ ಕ್ಷಿಪಣಿಯ ಶಕ್ತಿ ಪ್ರದರ್ಶನ ನಡೆಸಲಾಗಿದೆ. ಇದೇ ಮೊದಲ ಬಾರಿಗೆ ಆಕಾಶ್‌ ಮತ್ತು ಸುಧಾರಿತ ಹಗುರ ಹೆಲಿಕಾಪ್ಟರ್‌ಗಳನ್ನು ಈ ಕವಾಯತಿನಲ್ಲಿ ಬಳಸಿಕೊಳ್ಳಲಾಗಿತ್ತು. ಹಗಲು ಹಾಗೂ ರಾತ್ರಿಯಲ್ಲೂ ಕ್ಷಿಪಣಿಗಳ ಪರೀಕ್ಷೆ ನಡೆಸಲಾಗಿದ್ದು, ಹೊಸ ಸಂಚಲನ ಮೂಡಿಸಿದೆ.

ಅಷ್ಟೇ ಅಲ್ಲ, ಕವಾಯತಿನಲ್ಲಿ ಸುಧಾರಿತ ಮಿಗ್‌ 29, ಸು 300, ಮಿರೇಜ್‌ 2000, ಜಾಗ್ವಾರ್‌, ಮಿಗ್‌ 21, ಮಿಗ್‌ 27, ಮಿಗ್‌ 29, ಹಕ್ಯುಲಸ್‌, ಎಎನ್‌32 ಯುದ್ದವಿಮಾನಗಳೂ ಇದ್ದವು. ಸೇನಾಮುಖ್ಯಸ್ಥ ಬಿಪಿನ್‌ ರಾವತ್‌, ವಿವಿಧ ದೇಶಗಳ ರಕ್ಷಣಾ ಅಧಿಕಾರಿಗಳು ಮತ್ತು ಭಾರತೀಯ ರಕ್ಷಣಾ ಸಚಿವಾಲಯದ ಉನ್ನತ ಅಧಿಕಾರಿಗಳು ಹಾಜರಿದ್ದರು. ಅಲ್ಲದೆ ವಾಯುಪಡೆ ಗೌರವಯುತ ಗ್ರೂಪ್‌ ಕ್ಯಾಪ್ಟನ್‌ ಆಗಿರುವ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಕೂಡ ಈ ವೇಳೆ ಹಾಜರಿದ್ದುದು ವಿಶೇಷವಾಗಿತ್ತು.

Advertisement

ರೈಲು ತಡೆ, ಕಲ್ಲು ತೂರಾಟ
ಪುಲ್ವಾಮಾ ದಾಳಿ ಖಂಡಿಸಿ ಮಹಾರಾಷ್ಟ್ರದಲ್ಲಿ ರೈಲು ತಡೆದು ಪ್ರಯಾಣಿಕರೇ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ. ನಲಸೋಪಾರಾ ಸ್ಟೇಷನ್‌ನಲ್ಲಿ ಬೆಳಗ್ಗೆ 8.20ರ ವೇಳೆಗೆ ರೈಲು ಹಳಿಗಳ ಮೇಲೆ ನಿಂತು, ಪಾಕ್‌ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಲ್ಲುತೂರಾಟದಂಥ ಘಟನೆಗಳೂ ನಡೆದಿವೆ. ಇದೇ ವೇಳೆ, ದೇಶದ ಹಲವೆಡೆ  ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚುವ ಮೂಲಕ ದಾಳಿಗೆ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಎರಡನೇ ದಿನವೂ ಕರ್ಫ್ಯೂ
ಹಿಂಸಾತ್ಮಕ ಪ್ರತಿಭಟನೆ ಹಿನ್ನೆಲೆಯಲ್ಲಿ ಜಮ್ಮುವಿನಲ್ಲಿ ಹೇರಲಾಗಿದ್ದ ಕರ್ಫ್ಯೂ ಶನಿವಾರವೂ ಮುಂದುವರಿ ದಿದೆ. ಭದ್ರತೆಗಾಗಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸ ಲಾಗಿದ್ದು, ಸೇನೆಯು ಶನಿವಾರ ಕೂಡ ಧ್ವಜ ಪಥಸಂಚ ಲನ ನಡೆಸಿದೆ. ಮೊಬೈಲ್‌ ಇಂಟರ್ನೆಟ್‌ ಸಂಪರ್ಕವೂ ಸ್ಥಗಿತಗೊಂಡಿದೆ. ಜಮ್ಮು ವಿವಿಯು ಶನಿವಾರ ನಡೆಯಬೇಕಿದ್ದ ಎಲ್ಲ ಪರೀಕ್ಷೆಗಳನ್ನೂ ಮುಂದೂಡಿದೆ. ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.

ಪಾಠ ಕಲಿಸಿಯೇ ಸಿದ್ಧ
ಇಡೀ ದೇಶವೇ ಶೋಕದಲ್ಲಿ ಮುಳುಗಿದೆ. ನಮ್ಮ ವೀರ ಯೋಧರು ಮತ್ತು ಅವರಿಗೆ ಜನ್ಮ ನೀಡಿದ ತಾಯಂದಿರಿಗೆ ಸೆಲ್ಯೂಟ್‌ ಮಾಡುತ್ತೇನೆ. ಹುತಾತ್ಮರ ಕುಟುಂಬ ಸದಸ್ಯರು ಮತ್ತು ದೇಶದ ಜನತೆಯ ನೋವು, ಎದೆಯಲ್ಲಿ ಕುದಿಯುತ್ತಿರುವ ಆಕ್ರೋಶದ ಬೆಂಕಿ ನಮಗೆ ಅರ್ಥವಾಗುತ್ತದೆ.

ದಾಳಿಗೆ ಪ್ರತೀಕಾರ ತೀರಿಸಲು ಸೇನೆಗೆ ಪರಮಾಧಿಕಾರ ನೀಡಿದ್ದೇವೆ. ಸೇನೆಯ ಮೇಲೆ ನಂಬಿಕೆಯಿಡಿ.ಯೋಧರ ಬಲಿದಾನವು ವ್ಯರ್ಥವಾಗಲು ಬಿಡುವುದಿಲ್ಲ ಉಗ್ರರು ಎಲ್ಲೇ ಅಡಗಿದ್ದರೂ, ಅವರನ್ನು ಹುಡುಕಿ ತಕ್ಕ ಪಾಠ ಕಲಿಸುತ್ತೇವೆ ಆರೋಪ ಮಾಡುವುದು ಸುಲಭ. ಪುಲ್ವಾಮಾ ದಾಳಿಯ ಹೆಸರಲ್ಲಿ ಪಾಕಿಸ್ಥಾನವನ್ನು ಮಣಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ನಮಗೆ ಗೊತ್ತು. ಭಾರತವೇನಾದರೂ ಪುರಾವೆಗಳನ್ನು ಕೊಟ್ಟರೆ ಸಹಕರಿಸಲು ನಾವು ಸಿದ್ಧ.
ಶಾ ಮಹೂದ್‌ ಖುರೇಷಿ, ಪಾಕ್‌ ವಿದೇಶಾಂಗ ಸಚಿವ

ಲೋಕಸಭೆ ಚುನಾವಣೆ ಮುಂದೂಡಿದರೂ ಪರವಾಗಿಲ್ಲ. ಪಾಕಿಸ್ಥಾನದ ವಿರುದ್ಧ ಪ್ರತೀಕಾರ ತೀರಿಸಲೇಬೇಕು. ಚುನಾವಣೆಗೆ ಮುನ್ನವೇ ಪಾಕಿಸ್ಥಾನದಲ್ಲಿ ಸಂತಾಪ ಸೂಚಕ ಸಭೆ ನಡೆಯುವಂತೆ ನಾವು ಮಾಡಬೇಕು.
ಗಣಪತ್‌ಸಿನ್ಹ ವಸಾವ, ಗುಜರಾತ್‌ ಸಚಿವ

ಕೋಲ್ಕತ್ತಾದಲ್ಲಿ ತಮ್ಮ ತೋಳಿಗೆ ಕಪ್ಪು ಪಟ್ಟಿ ಧರಿಸಿ ಶೌರ್ಯ ಪ್ರಶಸ್ತಿ ಸ್ವೀಕರಿಸಿದ ಯೋಧರು. 
ಭಾರತ-ಪಾಕ್‌ ಬಸ್‌ ಸೇವೆ ರದ್ದು ಮಾಡುವಂತೆ ಒತ್ತಾಯಿಸಿ ಶಿವಸೇನೆ ನೇತೃತ್ವದಲ್ಲಿ ಲಾಹೋರ್‌ಗೆ ಹೊರಟಿದ್ದ ಬಸ್‌ ಮುಂದೆ ಪ್ರತಿಭಟನೆ. 
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ನೀಡುವುದಾಗಿ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಘೋಷಣೆ.
ಪಾಕ್‌ ಐಎಸ್‌ಐ ಜತೆ ನಂಟು ಹೊಂದಿರುವ ಪ್ರತ್ಯೇಕತಾವಾದಿಗಳಿಗೆ ನೀಡಲಾಗಿರುವ ಭದ್ರತೆ ವಾಪಸ್‌ ಪಡೆಯಲು ಕೇಂದ್ರ ಸರಕಾರ ಚಿಂತನೆ. 
ಆತ್ಮರಕ್ಷಣೆ ಭಾರತದ ಹಕ್ಕಾಗಿದ್ದು, ಅದಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದು ಎನ್‌ಎಸ್‌ಎ ಅಜಿತ್‌ ದೋವಲ್‌ಗೆ ಅಮೆರಿಕ ವಾಗ್ಧಾನ.

Advertisement

Udayavani is now on Telegram. Click here to join our channel and stay updated with the latest news.

Next