ವೃತ್ತಿ ನಿವೃತ್ತಿ ಎಂದರೆ ಏನು? ವ್ಯಕ್ತಿಯು ಜೀವನದಲ್ಲಿ ಬಹಳಷ್ಟು ದುಡಿದ ಬಳಿಕ ವೃದ್ಧಾಪ್ಯದಲ್ಲಿ ಲಭಿಸುವ ನಿವೃತ್ತಿ. ಹೌದು… ಮುಂದಿನ ಜೀವನವನ್ನು ಸ್ವತಂತ್ರವಾಗಿ ಕಳೆಯಲು, ಮನೆಯಲ್ಲಿ ಕುಟುಂಬಕ್ಕೆಂದು ಸಮಯವನ್ನು ಮೀಸಲಿಡಲು, ಅದರೊಂದಿಗೆ ವಿಶ್ರಾಂತಿ ಪಡೆಯಲು ವೃತ್ತಿ ಜೀವನಕ್ಕೆ ನೀಡುವ ವಿರಾಮ. ಆದರೆ ಆ ವಿರಾಮವೇ ವ್ಯಕ್ತಿಯ ಮನಶ್ಯಾಂತಿಯನ್ನು ಕೆಡಿಸಿದರೆ ಹೇಗೆ? ಚಿಂತೆ ದೂರವಾಗಲಿ ಎಂದು ನೀಡುವ ನಿವೃತ್ತಿಯೇ ದೊಡ್ಡ ತಲೆನೋವಾಗಿ ಪರಿಣಮಿಸಿದರೆ?… ಇದುವೇ ವ್ಯಕ್ತಿಯ ಖಿನ್ನತೆಗೆ ಕಾರಣವಾದರೆ?…
ಹಿಂದೆ ಒಂದು ಕಾಲ ಇತ್ತು. ಮನೆ ತುಂಬಾ ಮಕ್ಕಳು. ಮನ ತುಂಬಿದ ನಗು. ಮನೆಯ ಹಿರಿ ಜೀವಗಳ ಆಶ್ರಯದಲ್ಲಿ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು… ಹೀಗಿದ್ದಾಗ ಮನೆಯ ವಾತಾವರಣ ಬಿಕೋ ಎನ್ನುತ್ತಿರಲಿಲ್ಲ. ಅದಕ್ಕಾಗಿಯೇ ಹಿಂದೆ ಅಜ್ಜ ಅಜ್ಜಿ ತಮ್ಮ ಕೆಲಸಕ್ಕೆ ನಿವೃತ್ತಿ ಪಡೆದು, ಎಲ್ಲಾ ಕರ್ತವ್ಯವನ್ನು ತಮ್ಮ ಮಕ್ಕಳ ಹೆಗಲಿಗೆ ಏರಿಸಿ ತಾವು ಮನೆಯಲ್ಲಿ ಮಕ್ಕಳೊಂದಿಗೆ ತಮ್ಮ ವೃದ್ಧಾಪ್ಯವನ್ನು ಕಳೆಯುತ್ತಿದ್ದರು. ಅಲ್ಲಿ ಬೇಜಾರು ಎನ್ನುವ ಪ್ರಶ್ನೆಯೇ ಬರುತ್ತಿರಲಿಲ್ಲ.
ಹತ್ತಿರ ಹತ್ತಿರ ಮನೆ, ಹತ್ತಿರ ಹತ್ತಿರ ಜನ. ಒಂದು ಕೂಗು ಹಾಕಿದರೆ ಸಾಕು ಎಲ್ಲರೂ ಒಂದಾಗುತ್ತಿದ್ದರು. ಆದರೆ ಈಗ ಜನಜೀವನ ಬದಲಾದಂತೆ ಜನರ ಮನಸ್ಥಿತಿಯು ಬದಲಾಗಿದೆ. ಮನೆಗಳು ಹತ್ತಿರವಿದ್ದರೂ ಮನಸ್ಸುಗಳ ಅಂತರ ಬಹಳಷ್ಟಿದೆ. ದೊಡ್ಡ ಮನೆಯ ನಡುವೆ ದೊಡ್ಡದಾದ ಗೋಡೆಯೊಂದು ನಿಂತು ಮನೆಯ ಬಾಗಿಲನ್ನು ಇಬ್ಬಾಗವಾಗಿಸಿದೆ. ಹೀಗಿದ್ದಾಗ ಮಕ್ಕಳಿಗೆ ತಮ್ಮನ್ನು ಹೆತ್ತವರನ್ನು ಸಾಕಲಾಗದೆ ‘ನೀ ಸಾಕು ನೀ ಸಾಕು’ ಎಂದು ತಳ್ಳುವಂತಹ ಸ್ಥಿತಿ ಬಂದೊದಗಿದೆ. ಇಂತಹ ಸ್ಥಿತಿಯಲ್ಲಿ ತನ್ನ ವಯಸ್ಸಿನ ಕಾರಣಕ್ಕೆ ಕಾಯಕದ ನಿವೃತ್ತಿ ಹೊಂದಿದ ಹಿರಿಯರು ತಮ್ಮ ಮನೆಯಲ್ಲಿಯೇ ಮೂಲೆ ಗುಂಪಾಗುತ್ತಾರೆ. ಅದರಲ್ಲೂ ತನ್ನ ಸಂಗಾತಿಯನ್ನು ಕಳೆದುಕೊಂಡ ಮೇಲಂತೂ ತೀರಾ ಒಬ್ಬಂಟಿಯಾಗಿ ಬಿಡುತ್ತಾರೆ. ಮನೆಯಲ್ಲಿ ಮಗ ಸೊಸೆ ಕೆಲಸಕ್ಕೆಂದು ಹೋದರೆ ಮೊಮ್ಮಕ್ಕಳು ಶಾಲೆ, ಕಾಲೇಜು ಎಂದು ಮನೆ ಬಿಡುತ್ತಾರೆ. ಆಗ ಬೆಳಗ್ಗಿನಿಂದ ಸಂಜೆಯ ತನಕ ಮನೆಯಲ್ಲಿ ಒಬ್ಬಂಟಿಯಾಗಿ ಕಾಲ ಕಳೆಯುವ ಅವರಿಗೆ ಹೊರಗಿನ ಯಾರೊಂದಿಗೂ ಒಡನಾಟವಿರದೆ ಒಂಟಿತನ ಕಾಡುತ್ತದೆ. ಆ ಸಂದರ್ಭ ಅವರು ಖಿನ್ನತೆಗೆ ಒಳಗಾಗುತ್ತಾರೆ. ಇಲ್ಲಿ ಭಾವನೆಗಳನ್ನು ಹಂಚಿಕೊಳ್ಳಲು ತನ್ನ ಜೊತೆ ಯಾರು ಇಲ್ಲವೆಂದು ಖಿನ್ನತೆಗೆ ಒಳಗಾಗುತ್ತಾರೆ.
ಆದರೆ ಇನ್ನೂ ಕೆಲವರು ಬೇರೆ ವಿಷಯಗಳಿಂದಾಗಿಯೂ ಖಿನ್ನತೆಗೆ ಒಳಗಾಗುತ್ತಾರೆ. ಅದರಲ್ಲಿ ವೃತ್ತಿ ನಿವೃತ್ತಿಯೂ ಒಂದು. ಇತ್ತೀಚಿನ ದಿನಗಳಲ್ಲಿ ವೃತ್ತಿ ಜೀವನದಿಂದ ನಿವೃತ್ತಿ ಪಡೆದ ಬಳಿಕ ವ್ಯಕ್ಯಿಯು ಖಿನ್ನತೆಗೆ ಒಳಗಾಗುತ್ತಾರೆ. ಕಾರಣ ಆ ವ್ಯಕ್ತಿಯು ತನ್ನ ಜೀವನದ ಅರ್ದದಷ್ಟು ಭಾಗವನ್ನು ತನ್ನ ವೃತ್ತಿಯಲ್ಲಿಯೇ ಕಳೆದಿರುತ್ತಾರೆ. ಬೆಳಗ್ಗೆ ಎದ್ದು ತಯಾರಾಗಿ ಆಫೀಸಿಗೆ ಹೋಗುವ ರೂಢಿಯನ್ನು ಬೆಳೆಸಿಕೊಂಡಿರುತ್ತಾರೆ. ಅವರು ತನ್ನ ಸಮಯವನ್ನು ಆಫೀಸು, ವೃತ್ತಿ, ಹಾಗೂ ತನ್ನ ಸಹ ಕೆಲಸಗಾರರೊಂದಿಗೆ ಕಳೆದಿರುತ್ತಾರೆ. ಹೀಗೆ ದಿನವಿಡೀ ಕೆಲಸದಲ್ಲಿಯೇ ತೊಡಗಿಸಿಕೊಂಡ ವ್ಯಕ್ತಿಗೆ ಮನೆಯಲ್ಲಿ ಖಾಲಿ ಕೂರುವುದು ಹಿಂಸೆ ಎನಿಸಬಹುದು. ಹಾಗೆ ನಿವೃತ್ತಿ ಎನ್ನುವುದು ಆತನ ವೃತ್ತಿಗೆ ಮಾತ್ರವಲ್ಲದೆ, ಅವರ ಮನಶ್ಯಾಂತಿಗೆ, ನೆಮ್ಮದಿಗೆ ಕೂಡ ಲಭಿಸಿದಂತೆ ಭಾಸವಾಗಬಹುದು.
ವೃತ್ತಿ ಜೀವನದಿಂದ ನಿವೃತ್ತಿ ಪಡೆದ ವ್ಯಕ್ತಿಯು ತನ್ನಿಂದ ಒಮ್ಮೆಲೆ ದೂರವಾದ ತನ್ನ ವೃತ್ತಿ ಸ್ಥಾನ, ತಪ್ಪಿದ ತನ್ನ ದಿನಚರಿ, ಕಡಿಮೆಯಾದ ಸಮಾಜದೊಂದಿಗಿನ ಒಡನಾಟ ಮುಂತಾದವುಗಳು ವ್ಯಕ್ತಿಗೆ ಕಾಡಬಹುದು. ಜೊತೆಗೆ ಹಣಕಾಸಿನ ಸಮಸ್ಯೆ, ಆರೋಗ್ಯ ಸಮಸ್ಯೆ, ಒಂಟಿತನ ಮುಂತಾದವುಗಳು ಆ ವುಕ್ತಿಯು ಖಿನ್ನತೆಗೆ ಒಳಗಾಗುವಂತೆ ಮಾಡುತ್ತದೆ.
ತನ್ನ ವೃದ್ಧಾಪ್ಯದಲ್ಲಿ ಸ್ವತಂತ್ರವಾಗಿದ್ದು ವಿಶ್ರಾಂತಿ ಮಾಡಲೆಂದು ಲಭಿಸಿದ ವೃತ್ತಿ ನಿವೃತ್ತಿಯು ಕೆಲವರಿಗೆ ಉಸಿರು ಕಟ್ಟಿಸಿದಂತೆ ಆಗಬಹುದು. ತನ್ನ ಹಿಂದಿನ ದಿನಗಳನ್ನು ನೆನೆಯುತ್ತಾ, ಮುಂದೆ ಯಾವುದೇ ಗುರಿಯಿಲ್ಲದೆ ಮನೆಯಲ್ಲಿಯೇ ಕುಳಿತು ದಿನವನ್ನು ಹೇಗೆ ಮುಂದೂಡುವುದು ಎಂಬ ಚಿಂತೆಯು ಅವರನ್ನು ಕಾಡಬಹುದು.
ತಜ್ಞರು ನೀಡುವ ವರದಿಯ ಪ್ರಕಾರ ಭಾರತದಲ್ಲಿ ವೃತ್ತಿ ನಿವೃತ್ತಿಯ ಬಳಿಕ ಖಿನ್ನತೆಗೆ ಒಳಾಗಾಗುತ್ತಿರುವ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿದೆ. ಕುಟುಂಬದ ಆಕಾರ ಬದಲಾವಣೆಯು ವೃದ್ಧರಲ್ಲಿ ಖಿನ್ನತೆಯನ್ನುಂಟು ಮಾಡುತ್ತದೆ. ಜೊತೆಗೆ ವೃತ್ತಿ ಜೀವನದೊಂದಿಗೆ ಯಾವುದೇ ರೀತಿಯ ಹವ್ಯಾಸಗಳನ್ನು ಬೆಳೆಸಿಕೊಳ್ಳದೇ ಇರುವುದು ಒಂದು ಕಾರಣ.
ಈ ನಿವೃತ್ತಿ ಖಿನ್ನತೆಯು ವ್ಯಕ್ತಿಯ ಮೇಲೆ ತೀವ್ರಗತಿಯ ಪರಿಣಾಮವನ್ನು ಬೀರಬಹುದು. ಅವುಗಳಲ್ಲಿ ಕೆಲವು,
-ಒತ್ತಡಕ್ಕೆ ಒಳಗಾಗುವ ವ್ಯಕ್ತಿಗೆ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಂತಹ ದೀರ್ಘ ಕಾಲದ ದೈಹಿಕ ಸಮಸ್ಯೆಗಳು ಕಾಡಬಹುದು.
-ಯೋಚನಾ ಶಕ್ತಿ, ಸಮಸ್ಯೆಯನ್ನು ಬಗೆಹರಿಸುವ ಶಕ್ತಿ, ನೆನಪಿನ ಶಕ್ತಿ, ವಿಷಯವನ್ನು ಅರ್ಥೈಸುವಿಕೆಯಂತಹ ಅರಿವಿನ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುತ್ತದೆ.
-ಸಮಾಜದೊಂದಿಗೆ, ಕುಟುಂಬದೊಂದಿಗಿನ ಸಂಬಂಧಗಳಿಂದ ಹಿಂದೆ ಸರಿಯುವುದರೊಂದಿಗೆ, ಏಕಾಂಗಿಯಾಗಿ ಇರಲು ಬಯಸುತ್ತಾರೆ.
-ಖಿನ್ನತೆಗೆ ಒಳಗಾದ ವ್ಯಕ್ತಿಯು ಮಾದಕ ವಸ್ತುಗಳ ಸೇವನೆ ಗೀಳಿಗೆ ಬೀಳಬಹುದು, ಹಾಗೆಯೇ ಸ್ವಯಂ ಹಾನಿಯನ್ನೂ ಮಾಡಿಕೊಳ್ಳಬಹುದು.
ಹಾಗಾದರೆ ವೃತ್ತಿ ನಿವೃತ್ತಿ ಹೊಂದಿದ ವ್ಯಕ್ತಿಯು ಖಿನ್ನತೆಗೆ ಒಳಗಾಗದಂತೆ ತಡೆಯುದಾದರೂ ಹೇಗೆ?
ವೃತ್ತಿ ನಿವೃತ್ತಿಯ ಬಳಿಕ ಏನು ಮಾಡಬೇಕು ಎಂಬ ಯೋಜನೆಗಳನ್ನು ರೂಪಿಸುವುದರಿಂದ ವ್ಯಕ್ತಿಯು ಖಿನ್ನತೆಗೆ ಒಳಗಾಗುವುದನ್ನು ತಡೆಯಲು ಸಾಧ್ಯವಿದೆ.
-ಮುಂದೆ ಹಣಕಾಸು ಹಾಗೂ ಭಾವನಾತ್ಮಕವಾಗಿ ಹೇಗೆ ಸ್ಥಿರವಾಗಬೇಕು ಎಂಬ ಯೋಜನೆ ಸಿದ್ಧಪಡಿಸಬೇಕು.
-ಸಮಾಜದೊಂದಿಗಿನ ಒಡನಾಟವನ್ನು ನಿಲ್ಲಿಸದೆ ಮುಂದುವರಿಸುವುದು.
-ಹೊಸ ಹೊಸ ಉತ್ತಮ ಅಭ್ಯಾಸಗಳನ್ನು ಕಲಿಯುವುದು.
-ಸ್ವಯಂ ಸೇವಾ ಕಾರ್ಯ, ಅರೆಕಾಲಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು.
-ಮನಸ್ಥಿತಿ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವುದು.
ನಿಮ್ಮ ಮನೆಯಲ್ಲಿಯೋ ಅಥವಾ ನಿಮ್ಮ ಪರಿಚಿತರಲ್ಲಿಯೋ ಯಾರಾದರು ಹಿರಿಯರು ವೃತ್ತಿ ನಿವೃತ್ತಿಯನ್ನು ಪಡೆಯುವವರಿದ್ದರೆ ಈ ಸಲಹೆಗಳು ಉಪಯುಕ್ತವಾಗಬಹುದು.
ಹಾಗಾದರೆ ನಿವೃತ್ತಿ ಖಿನ್ನತೆಗೆ ಒಳಗಾದಾಗ ಏನು ಮಾಡಬಹುದು?
ಆತಂಕ ಹಾಗು ಖಿನ್ನತೆಗೊಳಗಾಗುವ ವ್ಯಕ್ತಿಯು ಮನಶ್ಶಾಸ್ತ್ರ ತಜ್ಞರಂತಹ ವೃತ್ತಿಪರರ ಸಹಾಯವನ್ನು ಪಡೆಯುವುದು ಅತ್ಯಗತ್ಯ. ಅವರು ಸೂಕ್ತ ಮಾರ್ಗದರ್ಶನವನ್ನು ನೀಡುತ್ತಾರೆ.
ನಿವೃತ್ತಿ ಖಿನ್ನತೆಯನ್ನು ನಿರ್ವಹಿಸಲು ಹೆಚ್ಚುವರಿ ತಂತ್ರಗಳು ಇಲ್ಲಿವೆ
ನಿವೃತ್ತಿಯ ಬಳಿಕ ಸಾಮಾಜದೊಂದಿಗಿನ ಒಡನಾಟವನ್ನು ಹೆಚ್ಚಿಸಿಕೊಳ್ಳಿ. ಹೊರಗಿನ ಇತರರೊಂದಿಗೆ ಬೆರೆಯುವುದು, ಭಾವನೆಗಳನ್ನು ಹಂಚಿಕೊಳ್ಳುವುದು, ಗುಂಪುಗಳೊಂದಿಗೆ ಬೆರೆಯುವುದು ಮುಂತಾದ ಹೊಸ ಅಭ್ಯಾಸಗಳು ಒಂಟಿತನವನ್ನು, ಖಿನ್ನತೆಯನ್ನು ಎದುರಿಸಲು ಸಹಾಯಮಾಡುತ್ತದೆ.
ನಿಯಮಿತವಾಗಿ ವ್ಯಾಯಾಮ ಮಾಡುವುದು, ಯೋಗ, ಧ್ಯಾನಗಳಂತಹ ಚಟುವಟಿಕೆಯನ್ನು ಅಭ್ಯಾಸ ಮಾಡುವುದು, ಸಮತೋಲಿತ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸುವುದು ಉತ್ತಮ.
ಕೆಲವು ತಿಂಗಳಿಗೊಮ್ಮೆ ಪ್ರವಾಸಕ್ಕೆ ತೆರಳುವುದು, ಪುಸ್ತಕಗಳನ್ನು ಓದುವುದು ಮುಂತಾದ ಕೆಲವು ಸಣ್ಣ ಪುಟ್ಟ ಗುರಿಯನ್ನು ಹೊಂದುವುದು ಒಳ್ಳೆಯದು.
ಕುಟುಂಬದೊಂದಿಗಿನ ಸದಸ್ಯರೊಂದಿಗೆ ಮುಕ್ತ ಸಂವಹನವು ಭಾವನೆಗಳನ್ನು ಹಂಚಿಕೊಳ್ಳಲು, ಭಾವನಾತ್ಮಕ ಬೆಂಬಲವನ್ನು ಪಡೆಯಲು ಸಹಾಯ ಮಾಡುತ್ತದೆ.
ವೃತ್ತಿ ನಿವೃತ್ತಿಯು ಜೀವನದ ಪ್ರಮುಖ ಬದಲಾವಣೆಯಾಗಿದ್ದು, ಈ ಸಂದರ್ಭದಲ್ಲಿ ಹಣಕಾಸಿನ ಜೊತೆಗೆ ಮುಂದಿನ ಜೀವನವನ್ನು ಹೇಗೆ ನಿಭಾಯಿಸುವುದು ಎನ್ನುವ ಯೋಜನೆಯನ್ನು ಹಾಕುವುದು ಉತ್ತಮ.
*ಪೂರ್ಣಶ್ರೀ