ಬೆಂಗಳೂರು: ರಾಜ್ಯ ವಿಧಾನಸಭೆಯ ನಿವೃತ್ತ ಕಾರ್ಯದರ್ಶಿಯನ್ನು ತಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಳ್ಳುವ ಮೂಲಕ ಇದೇ ಮೊದಲ ಬಾರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಹೊಸ ಸಂಪ್ರದಾಯ ಹುಟ್ಟು ಹಾಕಿದ್ದಾರೆ.
ವಿಧಾನಸಭೆಯ ನಿವೃತ್ತ ಕಾರ್ಯದರ್ಶಿ ಓಂಪ್ರಕಾಶ್ ಅವರನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆಗಾರರಾಗಿ ನೇಮಕ ಮಾಡಿಕೊಂಡಿದ್ದು, ಇದು ವಿಧಾನಸಭೆ ಸಚಿವಾಲಯದಲ್ಲಿ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ನಿವೃತ್ತ ಕಾರ್ಯದರ್ಶಿಯನ್ನೇ ಸಲಹೆಗಾರರನ್ನಾಗಿ ನೇಮಿಸಿಕೊಂಡಿರುವುದಕ್ಕೆ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಓಂಪ್ರಕಾಶ್ ಅವರನ್ನು 10 ದಿನದ ಹಿಂದೆಯೇ ಸಲಹೆಗಾರರನ್ನಾಗಿ ಸ್ಪೀಕರ್ ನೇಮಿಸಿಕೊಂಡಿದ್ದು, ಅ.4 ರಿಂದ ಅವರ ನೇಮಕ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ. ಓಂ ಪ್ರಕಾಶ್ ನೇಮಕದ ಹಿಂದೆಯೂ ಆರ್‌ಎಸ್‌ಎಸ್ ನಾಯಕರ ಸೂಚನೆ ಇರಬಹುದೆಂಬ ಮಾತು ಕೇಳಿ ಬರುತ್ತಿವೆ. ಮತ್ತೂಂದೆಡೆ, ಓಂಪ್ರಕಾಶ್ ಅವರನ್ನು ನೇಮಿಸಿಕೊಂಡಿರುವುದಕ್ಕೆ ಅನುಭವದ ಕೊರತೆಯೋ?
ಅಥವಾ ಕಾಗೇರಿ ಅವರಿಗೆ ಸಚಿವಾಲಯದ ಅಧಿಕಾರಿಗಳ ಮೇಲಿನ ಅಪನಂಬಿಕೆಯೋ ಎಂಬ ಚರ್ಚೆ ಕೇಳಿಬರುತ್ತಿದೆ. ಈ ಹಿಂದೆಯೂ ಓಂ ಪ್ರಕಾಶ್‌ರನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ತು ಎರಡೂ ಸದನಗಳಿಗೂ ಮಹಾ ಕಾರ್ಯದರ್ಶಿ ಮಾಡುವ ಪ್ರಯತ್ನ ನಡೆದಿತ್ತು. ಆಗ ಸಚಿವಾಲಯ ಸಿಬ್ಬಂದಿಯಿಂದ ತೀವ್ರ ವಿರೋಧ ವ್ಯಕ್ತವಾಗಿದ್ದ ಕಾರಣ ನೇಮಕ ಕೈಬಿಡಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಎಂ.ಬಿ.ಪಾಟೀಲ್, ಸ್ಪೀಕರ್‌ಗೆ ಸಲಹೆಗಾರ ಹುದ್ದೆ ನಿರ್ಮಾಣಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಈ ಬಗ್ಗೆ ಸ್ಪೀಕರ್ ಅವರೇ ಹೇಳಬೇಕು. ಸಚಿವರಿಗೆ ಸಲಹೆಗಾರರಾಗಿ ಇರುವುದು ನೋಡಿದ್ದೇವೆ. ಆದರೆ ಸ್ಪೀಕರ್‌ಗೂ ಸಲಹೆಗಾರರು ಇರುತ್ತಾರೆ ಎಂಬ ಬಗ್ಗೆ ಕೇಳಿಲ್ಲ ಎಂದು ಹೇಳಿದ್ದಾರೆ.