Advertisement

Army: ನಿವೃತ್ತ ಮೇಜರ್‌ ಜನರಲ್‌ ಸಿ.ಕೆ.ಕರುಂಬಯ್ಯ ನಿಧನ

10:55 PM Jan 04, 2024 | Team Udayavani |

ಮೈಸೂರು: ನಿವೃತ್ತ ಮೇಜರ್‌ ಜನರಲ್‌ ಸಿ.ಕೆ.ಕರುಂಬಯ್ಯ(88) ಅವರು ಗುರುವಾರ ಬೆಳಗ್ಗೆ ತಾಲೂಕಿನ ಹೆಮ್ಮನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Advertisement

ಮಡಿಕೇರಿಯಲ್ಲಿ 1936ರ ಡಿ.3ರಂದು ಜನಿಸಿದ್ದ ಕರುಂಬಯ್ಯ ಅವರ ತಂದೆ ಡಾ| ಸಿ.ಬಿ.ಕಾರಿಯಪ್ಪ. ಅವರು ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರಿಯಪ್ಪ ಅವರ ಹತ್ತಿರದ ಸಂಬಂಧಿ. ಮಡಿಕೇರಿಯ ಸೆಂಟ್ರಲ್‌ ಪ್ರೌಢಶಾಲೆ, ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅವರು, 1957ರಲ್ಲಿ ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಗೆ ಸೇರಿದರು. ಮರಾಠ ಲಘು ಪದಾತಿದಳದ 5ನೇ ಬೆಟಾಲಿಯನ್‌ನಲ್ಲಿ ಸೇನಾ ಸೇವೆ ಆರಂಭಿಸಿದರು. ನಾಗಾಲ್ಯಾಂಡ್‌, ಮಿಜೋರಾಂ, ತ್ರಿಪುರಾದ ಸೇನೆ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು. 1965ರ ಭಾರತ-ಪಾಕಿಸ್ಥಾನ ಯುದ್ಧದಲ್ಲಿ ರಾಜಸ್ಥಾನ ಗಡಿಯಲ್ಲಿ ಹೋರಾಟ ನಡೆಸಿ ಪಾಕ್‌ನ ಹಲವು ಗ್ರಾಮಗಳನ್ನು ವಶಪಡಿಸಿಕೊಂಡಿದ್ದರು.

1971ರ ಬಾಂಗ್ಲಾ ವಿಮೋಚನೆ ಯುದ್ಧದಲ್ಲಿ ಸಾವಿರಾರು ಪಾಕ್‌ ಯೋಧರ ಶರಣಾಗತಿಗೆ ಕಾರಣರಾಗಿದ್ದರು. ಅಲ್ಲದೆ ಮಗುರಾದಲ್ಲಿ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಪಾಕಿಸ್ಥಾನದ 300 ಟ್ರಕ್‌ಗಳನ್ನು ವಶಕ್ಕೆ ಪಡೆದಿದ್ದರು. ಅವರು ಮುನ್ನಡೆಸಿದ್ದ ಪಡೆಗೆ ರಾಷ್ಟ್ರಪತಿ ಗೌರವ ದೊರೆತಿತ್ತು. ಕರುಂಬಯ್ಯ ಅವರಿಗೆ ಸೇನಾ ಪದಕವೂ ಸಿಕ್ಕಿತ್ತು. 1972ರಲ್ಲಿ ಉತ್ತರ ಪ್ರದೇಶದ ಜಹಾಂಗೀರಾಬಾದ್‌ ದಂಗೆಯನ್ನು ಹತ್ತಿಕ್ಕಿದ್ದರು. ಸಿಕ್ಕಿಂನ ನಾತೂಲಾದಲ್ಲಿ ಇವರ ಬೆಟಾಲಿಯನ್‌ ಗೆ ಬ್ಲ್ಯಾಕ್‌ ಕ್ಯಾಟ್‌ ಟ್ರೋಫಿ ಪಡೆದುಕೊಂಡಿದ್ದರು.

ಮೃತರ ಅಂತ್ಯಕ್ರಿಯೆ ಶುಕ್ರವಾರ (ಜ.5) ಮಧ್ಯಾಹ್ನ ವಿಜಯನಗರದ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next