Advertisement

Anil Gokak: ಆಸ್ಪತ್ರೆಗೆ 10,000 ರೂ. ಕಟ್ಟಬೇಕಿತ್ತು, ನನ್ನಲ್ಲಿ ಅಷ್ಟು ಹಣವಿರಲಿಲ್ಲ…

01:02 PM Aug 20, 2023 | Team Udayavani |

ಲಾಬಿಗೆ ಮಣಿಯದ, ನೇರ ಮಾತಿನ, ದಕ್ಷ, ಪ್ರಾಮಾಣಿಕ ಐಎಎಸ್‌ ಅಧಿಕಾರಿ ಎಂದು ಹೆಸರಾದವರು ಅನಿಲ ಗೋಕಾಕ್‌. ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ, ವಿವಿಧ ಇಲಾಖೆಗಳ ಮುಖ್ಯಸ್ಥರಾಗಿ ಎಲ್ಲರೂ ಮೆಚ್ಚುವಂತೆ ಆಡಳಿತ ನಡೆಸಿದ್ದು ಅವರ ಹೆಚ್ಚುಗಾರಿಕೆ. ವಾರದ ಹಿಂದೆ, ತಮ್ಮ ತಂದೆ ವಿ. ಕೃ. ಗೋಕಾಕರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಸಿಕ್ಕಿದ ಅವರು, ಹಲವು ವಿಷಯಗಳ ಕುರಿತು ಮಾತಾಡಿದರು. ಅಧಿಕಾರಿ- ಅಧಿಕಾರ ವರ್ಗದ ನಡುವೆ ಸಂಘರ್ಷ ನಡೆವ ಈ ದಿನಗಳಲ್ಲಿ ಅನಿಲ್‌ ಗೋಕಾಕರ ಆ ದಿನಗಳ ನೆನಪು ಸ್ಮರಣೀಯ ಅನ್ನಿಸುತ್ತದೆ… 

  1. ಸರ್‌, ಐಎಎಸ್‌ ನೀವೇ ಆಯ್ದುಕೊಂಡದ್ದೋ ಅಥವಾ ಬೇರೆಯವರ ಸಲಹೆಯ ಮೇರೆಗೆ ಒಪ್ಪಿಕೊಂಡದ್ದೋ ?
Advertisement

ನಾನು ಎಕನಾಮಿಕ್ಸ್‌ ವಿಷಯದಲ್ಲಿ ಪರಿಣಿತನಾಗಬೇಕೆಂದು ನಿರ್ಧರಿಸಿದ್ದೆ. “ಲಂಡನ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌’ನಲ್ಲಿ ಪ್ರವೇಶವೂ ಸಿಕ್ಕಿತ್ತು. ಆದರೆ ಆ ಕೋರ್ಸ್‌ ಸೇರಲಿಲ್ಲ. ಅಷ್ಟರಲ್ಲಾಗಲೇ ಐಎಎಸ್‌ಗೆ ಸೆಲೆಕ್ಟ್ ಆಗಿದ್ದೆ. ಐಎಎಸ್‌ ಆಯ್ಕೆ ಮಾಡಿಕೊಳ್ಳುವುದಕ್ಕೆ ನಮ್ಮ ತಂದೆ ವಿ. ಕೃ. ಗೋಕಾಕ್‌ ಅವರೇ ಕಾರಣ. ಅವರಿಗೆ ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಅನುಭವ ಸರಿ ಇರಲಿಲ್ಲ. ಹಾಗಾಗಿ ನನಗೆ ಸುರಕ್ಷಿತವಾದ ಸರ್ಕಾರಿ ನೌಕರಿ ಸಿಗಲಿ ಎಂದು ಯೋಚಿಸಿ ಐಎಎಸ್‌ ಮಾಡುವುದಕ್ಕೆ ಹೇಳಿದರು. ಯುಪಿಎಸ್ಸಿ ಅಪ್ಲಿಕೇಷನ್‌ ಕೂಡ ಅವರೇ ತರಿಸಿ, ತುಂಬಿಸಿ ಕಳಿಸಿದ್ದರು. ಐಎಎಸ್‌ ಆಯ್ದುಕೊಂಡದ್ದಕ್ಕೆ ನನಗೆ ಬಹಳಷ್ಟು ಲಾಭವಾಯ್ತು. ದೇಶದ ಬಗ್ಗೆ ಒಳನೋಟಗಳು ದೊರೆತವು.

  1. “ಪರಿಸ್ಥಿತಿಗಳ ಒತ್ತಡದಿಂದ ಐಎಎಸ್‌ ಆಯ್ಕೆ ಮಾಡ್ಕೊಂಡು ತಪ್ಪು ಮಾಡಿದೆ’ ಎಂದು ಯಾವಾಗಲಾದರೂ ಅನಿಸಿದೆಯೇ ಸರ್‌?

ಆ ರೀತಿ ಯಾವತ್ತೂ ನನಗೆ ಅನಿಸಲಿಲ್ಲ. ಹಾಗಂತ ನಾನು ಐಎಎಸ್‌ ಅಧಿಕಾರಿಯಾಗಿದ್ದಾಗ ಒತ್ತಡಗಳು ಇರಲಿಲ್ಲ ಎಂದು ಹೇಳಲಿಕ್ಕಾಗುವುದಿಲ್ಲ. ಒಮ್ಮೊಮ್ಮೆ ನಮಗೆ ಒಳ್ಳೆಯ ಮಂತ್ರಿಗಳು ಸಿಗ್ತಾರೆ. ಕೆಲವೊಮ್ಮೆ ಸಿಗಲ್ಲ. ಆ ಕಷ್ಟಗಳನ್ನು ನಾನೂ ಅನುಭವಿಸಿದ್ದೀನಿ. ಆ ದಿನಗಳಲ್ಲಿ ಅಧಿಕಾರಿಗಳಿಗೆ ಒಂದು ಧೈರ್ಯ ಇತ್ತು. ಅಧಿಕಾರಿಗಳು ಸರಳ ರೀತಿಯಿಂದ ನಡೆದುಕೊಂಡರೆ, ಮಿನಿಸ್ಟರ್‌ಗಳಿಗೂ ಹೆದರದೇ ಇದ್ದರೆ, ಅಂಥವರನ್ನು ಮಂತ್ರಿಗಳು ಸೈಡ್‌ಲೈನ್‌ ಮಾಡುತ್ತಿದ್ದರೇ ಹೊರತು, ಬೇರ್ಯಾವ ಹಾನಿಯನ್ನೂ ಮಾಡುತ್ತಿರಲಿಲ್ಲ. ಹಿಂದೆ ಅಧಿಕಾರಿಗಳ ಮೇಲೆ ಸೇಡು ತೀರಿಸಿಕೊಳ್ಳುವ ಮನೋವೃತ್ತಿಯವರು ಇರಲಿಲ್ಲ.

ನನಗೆ ಅತ್ಯಂತ ತೃಪ್ತಿ ತಂದುಕೊಟ್ಟದ್ದು ಟೆಲಿಕಮ್ಯುನಿಕೇಷನ್‌ ಇಲಾಖೆ. ನಾನು ಆ ಇಲಾಖೆಗೆ ಹೋಗುವ ವೇಳೆಗೆ ಖಾಸಗೀಕರಣದ ನೀತಿ ಪ್ರಕಟವಾಗಿತ್ತು. ಆದರೆ ಅದನ್ನು ಯಾರೂ ಜಾರಿಗೆ ತಂದಿರಲಿಲ್ಲ. ಸುಖರಾಂ ಎನ್ನುವ ಮಂತ್ರಿಯೊಬ್ಬರ ಕಾಲಘಟ್ಟದಲ್ಲಿ ಭ್ರಷ್ಟಾಚಾರದ ಅನೇಕ ಆರೋಪಗಳು ಬಂದಿದ್ದವು. ಆ ಕಾರಣದಿಂದಲೇ ಅನೇಕ ಕೆಲಸಗಳು ನಿಂತುಹೋಗಿದ್ದವು. ನನಗೆ ಅವರು ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಹೇಳಿ ಕಳುಹಿಸಿದ್ದರು. ನಾನು  ಸಮಸ್ಯೆಯನ್ನು ಬಗೆಹರಿಸಿದೆ. ಹೀಗಾಗಿ ಟೆಲಿಕಮ್ಯುನಿಕೇಷನ್‌ ಇಲಾಖೆಯಲ್ಲಿ ಖಾಸಗೀಕರಣದ ಪ್ರಕ್ರಿಯೆ ಶುರುವಾಗಿದ್ದು ನನ್ನಿಂದಲೇ ಎನ್ನಬಹುದು!

  1. ನೀವು ಅಧಿಕಾರಿಯಾಗಿದ್ದಾಗಿನ ಸಂದರ್ಭದ ಆರ್ಥಿಕ ಪರಿಸ್ಥಿತಿಯ ಬಗ್ಗೆ ತಿಳಿಸಿ?

ನಾನು ಐಎಎಸ್‌ ಅಧಿಕಾರಿಯಾಗಿದ್ದರೂ ಆ ಕಾಲದಲ್ಲಿ ಅಷ್ಟೇನೂ ತೃಪ್ತಿದಾಯಕ ಸಂಬಳ ಸೌಲಭ್ಯ ದೊರೆಯುತ್ತಿರಲಿಲ್ಲ. ನನ್ನ ತಂದೆಯವರು ತೀರಿಕೊಳ್ಳುವ ಮುನ್ನಾ ದಿನಗಳಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಬೇಕಿತ್ತು. ಬಾಂಬೆ ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದೆ. ಆಸ್ಪತ್ರೆಯವರು ಮುಂಗಡವಾಗಿ 10 ಸಾವಿರ ಕಟ್ಟಬೇಕು. ಇಲ್ಲವಾದರೆ ಅಡ್ಮಿಟ್‌ ಮಾಡಿಕೊಳ್ಳುವುದಿಲ್ಲ ಎಂದರು. ನನ್ನ ಹತ್ರ ಅಷ್ಟು ಹಣವಿರಲಿಲ್ಲ. ಪ್ರಾವಿಡೆಂಟ್‌ ಫ‌ಂಡ್‌ ಪಡೆದುಕೊಳ್ಳುವುದಕ್ಕೆ ಹೋದರೆ ತಡವಾಗುತ್ತಿತ್ತು. ಆಸ್ಪತ್ರೆಯವರಿಗೆ ತಕ್ಷಣವೇ ಹಣ ಕೊಡಬೇಕಿತ್ತು. ಆಗ, ಈ ಆಸ್ಪತ್ರೆ ಬೇಡ ಅಂತ ವಾಪಸ್‌ ಬಂದೆ. ವಿಷಯ ತಿಳಿದು ನನ್ನ ಸ್ನೇಹಿತ ಹಣಕೊಟ್ಟ. ಆದರೆ ನನ್ನ ತಂದೆಯವರೇ ಆಸ್ಪತ್ರೆಗೆ ಸೇರುವುದು ಬೇಡ ಅಂತ ಹಠ ಹಿಡಿದುಬಿಟ್ಟರು. ಆ ಆಸ್ಪತ್ರೆಗೆ ಸೇರಿಸಲಿಲ್ಲ.

  1. ಭಾರತ ಭ್ರಷ್ಟಾಚಾರದ ವಿರುದ್ಧ ನಿಲ್ಲಲು, ಸಾಮಾಜಿಕ ಸಮಸ್ಯೆಗಳಿಂದ ಹೊರಬರಲು ನಿಮ್ಮ ಸಲಹೆಗಳೇನು?
Advertisement

ನಮ್ಮ ದೇಶದಲ್ಲಿ ಮೊದಲು ನೈತಿಕ ಕ್ರಾಂತಿಯಾಗಬೇಕು. ರಾಜ್ಯವನ್ನು ನಡೆಸುವ ಮುಖ್ಯಮಂತ್ರಿ,  ಸಚಿವರು ಮತ್ತು ಶಾಸಕರುಗಳು ಮತ್ತು ಅವರಿಗೆ  ಸಲಹೆ ನೀಡುವ ಅಧಿಕಾರಿಗಳ  ಮೇಲೆ ಎಲ್ಲವೂ ನಿಂತಿರುತ್ತದೆ. ಅವರು ಎಷ್ಟರಮಟ್ಟಿಗೆ ತಮ್ಮ ಸಿದ್ಧಾಂತಕ್ಕೆ, ಮತದಾರರಿಗೆ ಮತ್ತು ವೃತ್ತಿಗೆ ನಿಷ್ಠರಾಗಿರುತ್ತಾರೋ ಅಷ್ಟರಮಟ್ಟಿಗೆ ಸಮಸ್ಯೆಗಳನ್ನು ಬಗೆಹರಿಸಬಹುದು. ಆದರೆ ನಾವು ಎಲ್ಲರ ಪ್ರಾಮಾಣಿಕತೆಯನ್ನು ಪ್ರಶ್ನಿಸುವುದಕ್ಕೆ ಸಾಧ್ಯವಿರುವುದಿಲ್ಲ.

ನಾನು ಅರಣ್ಯ ಇಲಾಖೆಯ ಕಾರ್ಯದರ್ಶಿಯಾಗಿದ್ದಾಗ ನಡೆದ ಘಟನೆ. ಸಿಎಂ ಆಗಿದ್ದ ಶರದ್‌ ಪವಾರ್‌ ಅವರು- “ಈ ಖಾತೆ ಸುಧಾರಿಸಬೇಕು. ಆ ರೀತಿಯಲ್ಲಿ ದಕ್ಷತೆಯಿಂದ ವ್ಯವಹರಿಸುವುದೇ ನಿಮ್ಮ ಕೆಲಸ’ ಅಂತ ಹೇಳಿದ್ದರು. ನಾನು “ಹ್ಞೂಂ…’ ಅಂದಿದ್ದೆ. ಅದರ ಬೆನ್ನಿಗೇ- “ಸರ್‌, ನೀವು ದಯವಿಟ್ಟು ಯಾರ ವರ್ಗಾವಣೆ­ಯಲ್ಲೂ ಯಾವುದೇ ಹಸ್ತಕ್ಷೇಪ ಮಾಡಬೇಡಿ. ಆಗ ಮಾತ್ರ ನಾವು ಇಲಾಖೆಯಲ್ಲಿ ದಕ್ಷತೆಯನ್ನು ತರಲು ಸಾಧ್ಯ’ ಅಂತ ವಿನಂತಿಸಿಕೊಂಡಿದ್ದೆ. ಅವರು ಸರಿ ಎಂದು ಒಪ್ಪಿಕೊಂಡು, ಹಾಗೆಯೇ ನಡೆದುಕೊಂಡಿದ್ದರು. ನನ್ನ ವಿರುದ್ಧ ಹಲವು ಮಂತ್ರಿ, ಶಾಸಕರು ದೂರಿತ್ತರೂ ಅದನ್ನು ಮಾನ್ಯ ಮಾಡದೆ, ನನಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟರು. ಪರಿಣಾಮ; ಅರಣ್ಯ ಇಲಾಖೆಯಲ್ಲಿ ಶಿಸ್ತು ಬಂತು.

ಈ ವಾರದ ಅತಿಥಿ:

ಅನಿಲ್‌ ಗೋಕಾಕ್‌ (ನಿವೃತ್ತ ಐಎಎಸ್‌ ಅಧಿಕಾರಿ)

ಸಂದರ್ಶನ:

ನ.ರವಿಕುಮಾರ

Advertisement

Udayavani is now on Telegram. Click here to join our channel and stay updated with the latest news.

Next