ನವದೆಹಲಿ: ದೇಶಾದ್ಯಂತ ಪ್ರತಿದಿನ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚನೆ ಎಸಗುತ್ತಿರುವ ಪ್ರಕರಣ ವರದಿಯಾಗುತ್ತಿರುವ ನಡುವೆಯೇ ರಾಜಧಾನಿ ರೋಹಿಣಿ ಸೆಕ್ಟರ್ 10ರ ನಿವಾಸಿ, ನಿವೃತ್ತ ಇಂಜಿನಿಯರ್ ಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಹತ್ತು ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಿರುವ ಘಟನೆ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
72 ವರ್ಷದ ಇಂಜಿನಿಯರ್ ಪತ್ನಿ ಜತೆ ರೋಹಿಣಿ ಸೆಕ್ಟರ್ 10ರಲ್ಲಿ ವಾಸವಾಗಿದ್ದರು. ಅವರು ನೀಡಿರುವ ದೂರಿನಂತೆ, ದೆಹಲಿಯ ಸೈಬರ್ ಸೆಲ್ ಪೊಲೀಸರು ನಿಮ್ಮ ಮೇಲೆ ಎಫ್ ಐಆರ್ ದಾಖಲಿಸಲಾಗಿದ್ದು, ಇದರ ಮುಂದುವರಿದ ಭಾಗವಾಗಿ ನಿಮ್ಮನ್ನು ಇಂಟೆಲಿಜೆನ್ಸ್ ಫ್ಯೂಶನ್ ಅಂಡ್ ಸ್ಟ್ರೆಟಜಿಕ್ ಆಪರೇಷನ್ಸ್ ದಳ ವಿಚಾರಣೆಗೆ ಒಳಪಡಿಸಲಿದೆ ಎಂದು ಹೇಳಿ, ಡಿಜಿಟಲ್ ಅರೆಸ್ಟ್ ಆಗಿರುವುದಾಗಿ ತಿಳಿಸಿದ್ದರು.
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಇಂಜಿನಿಯರ್ ಅನ್ನು ಮನೆಯಲ್ಲಿ ಸುಮಾರು 8 ಗಂಟೆಗಳ ಕಾಲ ಅತ್ತಿತ್ತ ಅಲುಗಾಡದಂತೆ ಮಾಡಿ ಬರೋಬ್ಬರಿ ಹತ್ತು ಕೋಟಿ ರೂಪಾಯಿ ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.
ದೂರಿನ ನಂತರ ಪೊಲೀಸರು ಸುಮಾರು 60 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ವಿದೇಶದಿಂದ ಕರೆ ಮಾಡಿದ ವ್ಯಕ್ತಿ ಇಂಜಿನಿಯರ್ ಗೆ ವಂಚನೆ ಎಸಗಿರುವುದಾಗಿ ಶಂಕಿಸಲಾಗಿದೆ. ಆದರೆ ಭಾರತದಲ್ಲಿರುವ ನಿಕಟವರ್ತಿಗಳು ಗ್ಯಾಂಗ್ ಗೆ ಮಾಹಿತಿಯನ್ನು ಪೂರೈಕೆ ಮಾಡಿ, ನೆರವು ನೀಡಿರುವ ಸಾಧ್ಯತೆ ಇದ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತೈವಾನ್ ನಿಂದ ಪಾರ್ಸೆಲ್ ವೊಂದು ಬಂದಿರುವುದಾಗಿ ದೂರವಾಣಿ ಕರೆ ಮಾಡಿದಾತ ತಿಳಿಸಿದ್ದು, ಈ ಪಾರ್ಸೆಲ್ ನಿಮ್ಮ ಹೆಸರಿನಲ್ಲಿದೆ. ಇದನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ನಿಮಗೆ ಬಂದ ಪಾರ್ಸೆಲ್ ನಲ್ಲಿ ನಿಷೇಧಿತ ಮಾದಕ ದ್ರವ್ಯವಿದ್ದು, ಈ ಬಗ್ಗೆ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಮಾತನಾಡಲಿದ್ದಾರೆ ಎಂದು ಹೇಳಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ನಂತರ ವಿಡಿಯೋ ಕರೆ ಮಾಡಲು ಸ್ಕೈಪೆ ಡೌನ್ ಲೋಡ್ ಮಾಡುವಂತೆ ಸೂಚಿಸಿದ್ದರು. ವಿಡಿಯೋ ಕರೆ ಮಾಡಿ ಸುಮಾರು 8 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ ಆಗಿರುವುದಾಗಿ ತಿಳಿಸಿ, ಪ್ರತ್ಯೇಕ ಬ್ಯಾಂಕ್ ಖಾತೆಗಳಿಗೆ 10.3 ಕೋಟಿ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡಿದ್ದರು. ಈ ಘಟನೆ ನಡೆದು ಒಂದು ವಾರದ ನಂತರ ಇಂಜಿನಿಯರ್ ಕುಟುಂಬ ಸದಸ್ಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಷ್ಟೇ ಅಲ್ಲದೇ ನಿಮ್ಮ ಮಗ ದುಬೈನಲ್ಲಿ ವಾಸವಾಗಿದ್ದು, ಮಗಳು ಸಿಂಗಾಪುರ್ ನಲ್ಲಿ ವಾಸವಾಗಿದ್ದಾಳೆ..ಅವರನ್ನೂ ಕೂಡಾ ಟಾರ್ಗೆಟ್ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ. ಪ್ರಕರಣದ ಬಗ್ಗೆ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದು, ಹಣ ಜಪ್ತಿ ಮಾಡಲು ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.