ಬೆಂಗಳೂರು: ಸಿವಿಲ್ ನ್ಯಾಯಾಂಗ ನಿಂದನೆ ಪ್ರಕರಣವೊಂದರ ಸಂಬಂಧ ಬಿಬಿಎಂಪಿ ನಗರ ಯೋಜನಾ ವಿಭಾಗದ ನಿವೃತ್ತ ಹೆಚ್ಚುವರಿ ನಿರ್ದೇಶಕ ಎಂ.ಬಿ.ತಿಪ್ಪಣ್ಣ ಅವರಿಗೆ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿದೆ.
ತಿಪ್ಪಣ್ಣ ಅವರ ವಿರುದ್ಧ ಅಬ್‌ಶಾಟ್ ಲೇಔಟ್ ನಿವಾಸಿಗಳ ಸಂಘ ದಾಖಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ಗುರುವಾರ ಇತ್ಯರ್ಥಗೊಳಿಸಿದ ನ್ಯಾಯಮೂರ್ತಿ ಜಯಂತ್ ಪಟೇಲ್ ಹಾಗೂ ಎಸ್. ಸುಜಾತಾ ಅವರಿದ್ದ ವಿಭಾಗೀಯ ಪೀಠ, ಪ್ರತಿವಾದಿ ತಿಪ್ಪಣ್ಣ ಮುಂದಿನ 15ದಿನಗಳಲ್ಲಿ 1 ಲಕ್ಷ ರೂ. ದಂಡ ಪಾವತಿಸುವಂತೆ ತೀರ್ಪಿನಲ್ಲಿ ತಿಳಿಸಿದೆ.
ತಿಪ್ಪಣ್ಣ ಪಾವತಿಸುವ ದಂಡದ ಮೊತ್ತ 1 ಲಕ್ಷ ರೂ.ಗಳಲ್ಲಿ 50 ಸಾವಿರ ರೂ.ಗಳನ್ನು ಅರ್ಜಿದಾರರಿಗೆ ನೀಡಬೇಕು. 25 ಸಾವಿರ ರೂ.ಗಳನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ 25. ಸಾವಿರ ರೂ.ಗಳನ್ನು ಬೆಂಗಳೂರು ವಕೀಲರ ಸಂಘಕ್ಕೆ (ವಕೀಲರ ಸಹಾಯ ನಿಧಿ) ಠೇವಣಿ ಇಡುವಂತೆ ನ್ಯಾಯಪೀಠ ತಿಳಿಸಿದೆ. ದಂಡ ಪಾವತಿ ಮಾಡುವ ತನಕ ತಿಪ್ಪಣ್ಣ, ವಿದೇಶಗಳಿಗೆ ತೆರಳಲು ಅನುಮತಿ ನೀಡಬಾರದು ಎಂದು ಸಕ್ಷಮ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಿದೆ.
ಏನಿದು ಪ್ರಕರಣ?: ಬಿಬಿಎಂಪಿ ನಗರ ಯೋಜನಾ ಪ್ರಾಧಿಕಾರ ಸ್ಯಾಂಕಿ ಕೆರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ನಿತೇಶ್ ಎಸ್ಟೇಟ್ ಲಿಮಿಟೆಡ್‌ನವರಿಗೆ ಕಿರಿದಾದ ರಸ್ತೆ ಉಪಯೋಗಿಸಲು ಅನುಮತಿ ನೀಡಿರುವುದರಿಂದ ಸ್ಥಳೀಯರಿಗೆ ತೊಂದರೆಯಾಗಲಿದೆ ಎಂದು ಆಕ್ಷೇಪಿಸಿ ಅಬ್‌ಶಾಟ್ ಲೇಔಟ್ ನಿವಾಸಿಗಳ ಸಂಘ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು . 2016ರ ಜುಲೈ 21ರಂದು ಈ ಅರ್ಜಿ ಇತ್ಯರ್ಥಗೊಳಿಸಿದ್ದ ಹೈಕೋರ್ಟ್, ಅರ್ಜಿದಾರರ ಮನವಿಗೆ ಸ್ಪಂದಿಸಿ ಬಿಬಿಎಂಪಿ ಯೋಜನಾ ಪ್ರಾಧಿಕಾರದ ನಿರ್ದೇಶಕರು ಕ್ರಮ ಕೈಗೊಳ್ಳಲಿ ಎಂದು ಆದೇಶಿಸಿತ್ತು.
ಆದರೆ 2016 ಆಗಸ್ಟ್ 20ರಂದು ಜಂಟಿ ನಿರ್ದೇಶಕ ತಿಪ್ಪಣ್ಣ, ನಿತೇಶ್ ಎಸ್ಟೇಟ್‌ನವರಿಗೆ ಕಾನೂನು ಪ್ರಕಾರವೇ ರಸ್ತೆಯ ಅನುಮತಿ ನೀಡಲಾಗಿದೆ ಎಂದು ನ್ಯಾಯಾಲಯದ ಆದೇಶದ ಮಾದರಿಯಲ್ಲಿಯ ಪದ ಬಳಕೆ ಮಾಡಿ ಆದೇಶ ಹೊರಡಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅರ್ಜಿದಾರರು,ನಮ್ಮ ಮನವಿಯನ್ನು ಪರಿಗಣಿಸದೇ ಅಧಿಕಾರಿ ತಿಪ್ಪಣ್ಣ ಏಕಪಕ್ಷೀಯವಾಗಿ ಆದೇಶ ಹೊರಡಿಸಿದ್ದಾರೆ ಎಂದು ಅವರ ವಿರುದ್ಧ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಓವರ್ ಸ್ಮಾರ್ಟ್ ನಡವಳಿಕೆ ಸಹಿಸುವುದಿಲ್ಲ!
ಮತ್ತೂಂದೆಡೆ ನಿತೇಶ್ ಎಸ್ಟೇಟ್ ಪರವಾಗಿ ಆಗಸ್ಟ್ 20, 2016ಕ್ಕೆ ಆದೇಶ ಹೊರಡಿಸಿದ್ದ ಅಧಿಕಾರಿ ತಿಪ್ಪಣ್ಣ, ಆದೇಶ ಪ್ರತಿಗೆ ಹಿಂದಿನ ಸಹಿ ಹಾಗೂ ದಿನಾಂಕ ನಮೂದಿಸಿದ್ದರು. ಈ ಅಂಶವನ್ನು ಪರಿಗಣಿಸಿರುವ ನ್ಯಾಯಪೀಠ,ನ್ಯಾಯಾಲಯದ ಆದೇಶಗಳನ್ನು ಪಾಲಿಸದೇ ” ಓವರ್ ಸ್ಮಾರ್ಟ್’ ವರ್ತನೆ ತೋರುವುದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ ತಪ್ಪಿತಸ್ಥ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.