Advertisement

ನಾಳೆಯಿಂದ ದೇಶದಲ್ಲಿ ಚಿಲ್ಲರೆ ಡಿಜಿಟಲ್‌ ರೂಪಾಯಿ ಚಾಲ್ತಿಗೆ ಬರಲಿದೆ: ಆರ್‌ಬಿಐ

08:47 PM Nov 29, 2022 | Team Udayavani |

ಮುಂಬಯಿ: ದೇಶದಲ್ಲಿ ಚಿಲ್ಲರೆ ಡಿಜಿಟಲ್‌ ರೂಪಾಯಿಯನ್ನು ಡಿ. 1ರಿಂದ ಪ್ರಾಯೋಗಿಕವಾಗಿ ಜಾರಿಗೊಳಿಸುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಂಗಳವಾರ ಪ್ರಕಟಿಸಿದೆ.

Advertisement

ಗುರುವಾರದಿಂದ ಬೆಂಗಳೂರು, ಮುಂಬಯಿ, ಹೊಸದಿಲ್ಲಿ ಮತ್ತು ಭುವನೇಶ್ವರಗಳಲ್ಲಿ ಆರಂಭಿಕವಾಗಿ ಸೀಮಿತ ಬಳಕೆದಾರರ ಸಮೂಹದೊಳಗೆ ಡಿಜಿಟಲ್‌ ರೂಪಾಯಿ ಚಾಲ್ತಿಗೆ ಬರಲಿದೆ.

ಇ-ರೂಪಾಯಿಯು ಡಿಜಿಟಲ್‌ ಟೋಕನ್‌ನ ರೂಪದಲ್ಲಿದ್ದು, ಅದಕ್ಕೆ ಕಾನೂನು ಮಾನ್ಯತೆ ಇರುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳ ಮುಖಬೆಲೆಯಲ್ಲೇ ಡಿಜಿಟಲ್‌ ರೂಪಾಯಿಯ ವಹಿವಾಟು ನಡೆಯುತ್ತದೆ. ಇವುಗಳನ್ನು ಮಧ್ಯವರ್ತಿಗಳು ಅಂದರೆ ಬ್ಯಾಂಕ್‌ಗಳ ಮೂಲಕ ವಿತರಿಸಲಾಗುತ್ತದೆ.

ಬಳಕೆ ಹೇಗೆ?
ನಿರ್ದಿಷ್ಟ ಬ್ಯಾಂಕ್‌ಗಳು ಒದಗಿಸುವಂಥ ಡಿಜಿಟಲ್‌ ವ್ಯಾಲೆಟ್‌ಗಳ ಮುಖಾಂತರ ನೀವು ಇ-ರೂಪಾಯಿ ವಹಿವಾಟು ನಡೆಸಬಹುದು. ಪೇಟಿಎಂ, ಗೂಗಲ್‌ಪೇ, ಫೋನ್‌ಪೇಗಳಂತೆಯೇ ಇ-ರೂಪಾಯಿಯ ಮೊತ್ತವನ್ನೂ ನೀವು ಡಿಜಿಟಲ್‌ ವ್ಯಾಲೆಟ್‌ ರೂಪದಲ್ಲಿ ಮೊಬೈಲ್‌ ಫೋನ್‌ನಲ್ಲಿ ಸೇವ್‌ ಮಾಡಿಟ್ಟುಕೊಳ್ಳಬಹುದು. ಇಲ್ಲಿ ನೀವು ವ್ಯಕ್ತಿಯಿಂದ ವ್ಯಕ್ತಿಗೆ (ಪಿ2ಪಿ) ಮತ್ತು ವ್ಯಕ್ತಿಯಿಂದ ವ್ಯಾಪಾರಿಗೆ (ಪಿ2ಎಂ) ಎಂಬ ಎರಡು ವಿಧಾನಗಳಲ್ಲಿ ವಹಿವಾಟು ನಡೆಸಬಹುದು ಎಂದು ಆರ್‌ಬಿಐ ಹೇಳಿದೆ. ವ್ಯಾಪಾರಿಗಳಿಗೆ ಪಾವತಿ ಮಾಡುವಾಗ ಅವರ ಬಳಿಯಿರುವ ಕ್ಯೂಆರ್‌ ಕೋಡ್‌ ಬಳಸಿಕೊಳ್ಳಬೇಕಾಗುತ್ತದೆ.

ಯಾವೆಲ್ಲ ಬ್ಯಾಂಕ್‌ಗಳು ಭಾಗಿ?
ಹಂತ ಹಂತವಾಗಿ ಈ ಯೋಜನೆ ಜಾರಿಗೆ ಬರಲಿದ್ದು, ಮೊದಲ ಹಂತದಲ್ಲಿ ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌, ಯೆಸ್‌ ಬ್ಯಾಂಕ್‌ ಮತ್ತು ಐಡಿಎಫ್ಸಿ ಫ‌ಸ್ಟ್‌ ಬ್ಯಾಂಕ್‌ಗೆ ಅನುಮತಿ ನೀಡಲಾಗಿದೆ. ಅನಂತರದಲ್ಲಿ ಬ್ಯಾಂಕ್‌ ಆಫ್ ಬರೋಡಾ, ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ, ಎಚ್‌ಡಿಎಫ್ಸಿ ಬ್ಯಾಂಕ್‌ ಮತ್ತು ಕೋಟಕ್‌ ಮಹೀಂದ್ರಾ ಬ್ಯಾಂಕ್‌ಗಳು ಕೂಡ ಈ ಯೋಜನೆ ವ್ಯಾಪ್ತಿಗೆ ಬರಲಿವೆ.

Advertisement

ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ ಪೂರ್ಣ ಪ್ರಮಾಣದಲ್ಲಿ ದೇಶಾದ್ಯಂತ ಇ-ರುಪೀ ಜಾರಿ ಮಾಡುವುದು ಆರ್‌ಬಿಐ ಉದ್ದೇಶ. ಸಗಟು ವಲಯದ ಡಿಜಿಟಲ್‌ ರೂಪಾಯಿಯ ಪ್ರಾಯೋಗಿಕ ಯೋಜನೆ ನ. 1ರಿಂದ ಅನುಷ್ಠಾನಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next