Advertisement

ನೈಟ್ ಕರ್ಫ್ಯೂ: ಕರಾವಳಿಯಲ್ಲಿ ಉತ್ಸವ, ಮೆಹಂದಿ, ಕೋಲ ನಿರ್ಬಂಧ

08:48 AM Dec 24, 2020 | keerthan |

ಉಡುಪಿ: ಕೋವಿಡ್ ನವರೂಪವನ್ನು ನಿರ್ಬಂಧಿಸಲು ಸರಕಾರ ಹೊರಡಿಸಿದ ಹೊಸ ಮಾರ್ಗಸೂಚಿಯಂತೆ ಡಿ. 24ರ ರಾತ್ರಿ 11ರಿಂದ ಜ.2ರ ಬೆಳಗ್ಗೆ 5ರ ವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರುವುದರಿಂದ ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ತುರ್ತು ಸೇವೆಗಳಿಗೆ ರಿಯಾಯಿತಿ ಇರುತ್ತದೆ.

Advertisement

ರಾತ್ರಿ ನಡೆಯುವ ಯಕ್ಷಗಾನ, ದೇವಸ್ಥಾನ ಗಳ ಉತ್ಸವಗಳು, ಮೆಹಂದಿಯಂತಹ ಕಾರ್ಯಕ್ರಮಗಳು, ಕೋಲಗಳು ನಡೆಯುವಂತಿಲ್ಲ. ರಾತ್ರಿ 11ರ ಬಳಿಕ ಯಾವುದೇ ಸಂಸ್ಥಾಪನೆಗಳು ತೆರೆದು ಕೊಂಡಿರುವಂತಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು ಸ್ಪಷ್ಟಪಡಿಸಿದ್ದಾರೆ.

ಕರ್ಫ್ಯೂ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಪ್ರದರ್ಶನವಾಗುತ್ತಿರುವ ಯಕ್ಷಗಾನ ಪ್ರದರ್ಶನವನ್ನು ರಾತ್ರಿ 11 ಗಂಟೆಯ ಒಳಗೆ ಪೂರ್ಣಗೊಳಿಸುವಂತೆ ದ.ಕ. ಜಿಲ್ಲಾಡಳಿತ ಸೂಚಿಸಿದೆ.

ಬೆಂಗಳೂರಿನಂತಹ ದೂರದ ಊರುಗಳಿಗೆ ಹೋಗುವ ಬಸ್‌ಗಳಿಗೆ ಮಾತ್ರ ಅವಕಾಶವಿದೆ. ಕರ್ಫ್ಯೂ ಇರುವ ರಾತ್ರಿ ವೇಳೆ ಬಸ್‌ ನಿಲ್ದಾಣ, ರೈಲು ನಿಲ್ದಾಣಗಳಿಂದ ಪ್ರಯಾಣಿಕರನ್ನು ಕರೆದೊಯ್ಯಲು/ ಕರೆತರಲು ಮಾತ್ರ ಟ್ಯಾಕ್ಸಿ/ ಆಟೋರಿಕ್ಷಾಗಳಿಗೆ ಅವಕಾಶವಿದೆ. ಹೀಗಾಗಿ ರೈಲು, ಬಸ್‌ ನಿಲ್ದಾಣಗಳಲ್ಲಿ ಟ್ಯಾಕ್ಸಿ, ಆಟೋ ರಿಕ್ಷಾಗಳು ನಿಲುಗಡೆ ಮಾಡಬಹುದು ಎಂದರು.

ರಾತ್ರಿ ನಡೆಯುವ ಕಾರ್ಖಾನೆಗಳಲ್ಲಿ ಶೇ.50ರಷ್ಟು ಸಿಬಂದಿಯನ್ನು ಇರಿಸಿಕೊಂಡು ಕಾರ್ಯ ನಿರ್ವಹಣೆ ಮಾಡಬಹುದು. ಕ್ರಿಸ್ಮಸ್‌, ಹೊಸ ವರ್ಷಾಚರಣೆಯನ್ನು ಸರಳವಾಗಿ ನಡೆಸಬೇಕು. ನಾವು ಜಾಗ್ರತೆ ಮಾಡಿದರೆ ಮೂರು ತಿಂಗಳಲ್ಲಿ ಕೊರೊನಾ ಮುಕ್ತವಾಗಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ರಾತ್ರಿ ಕರ್ಫ್ಯೂ ವ್ಯರ್ಥ ಪ್ರಯತ್ನ

ಉಡುಪಿ ಜಿಲ್ಲೆಗೆ ಸಂಬಂಧಿಸಿ ಪ್ರತ್ಯೇಕ ಆದೇಶವನ್ನು ಗುರುವಾರ ಹೊರಡಿಸಲಾಗುವುದು. ಪೊಲೀಸ್‌ ವರಿಷ್ಠಾಧಿಕಾರಿಗಳಿಗೂ ಮುಖ್ಯ ಕಾರ್ಯದರ್ಶಿಯವರು ನಿರ್ದೇಶ ನೀಡಿದ್ದು ಗುರುವಾರ ರಾತ್ರಿಯಿಂದ ಕರ್ಫ್ಯೂ ಜಾರಿಗೊಳಿಸಲು ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆಗೊಳಿಸುವರು ಎಂದು ಡಿಸಿ ತಿಳಿಸಿದರು

ಪತ್ರಿಕೆಗಳಿಗೆ ರಿಯಾಯಿತಿ

ಪತ್ರಿಕೆಗಳ ಸಾಗಾಟ ಮತ್ತು ವಿತರಣೆಗೆ ಯಾವುದೇ ತೊಂದರೆ ಇಲ್ಲ. ಹಿಂದೆಯೂ ಕರ್ಫ್ಯೂ ಇದ್ದಾಗ ಪತ್ರಿಕೆಗಳಿಗೆ ರಿಯಾಯಿತಿ ಇತ್ತು. ಅದರಂತೆಯೇ ಈ ಬಾರಿಯೂ ಇರಲಿದೆ. ಯಾವುದೇ ಸಾಮಾನು ಸರಂಜಾಮುಗಳ ಸಾಗಾಟಕ್ಕೂ ತೊಂದರೆ ಇಲ್ಲದಿರುವಾಗ ಪತ್ರಿಕೆ ಗಳಿಗೂ ನಿರ್ಬಂಧವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next