Advertisement

ತಾಳೆಎಣ್ಣೆ ಆಮದು ಮೇಲೆ ನಿರ್ಬಂಧ ಮಲೇಷ್ಯಾಕ್ಕೆ ಪಾಠ

12:28 AM Jan 18, 2020 | mahesh |

ಕಾಶ್ಮೀರ ಮತ್ತು ಪೌರತ್ವ ಕಾಯಿದೆಗೆ ಸಂಬಂಧಿಸಿದಂತೆ ಮಲೇಷ್ಯಾ ಪ್ರಧಾನಿ ಮಹತಿರ್‌ ಮೊಹಮ್ಮದ್‌ ಅನಪೇಕ್ಷಿತ ಹೇಳಿಕೆ ನೀಡಿದ್ದಾರೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿರುವುದಾಗಲಿ ಪೌರತ್ವ ಕಾಯಿದೆಜಾರಿಗೊಳಿಸಿರುವುದಾಗಲಿ ಮಲೇಷ್ಯಾಕ್ಕೆ ಯಾವ ರೀತಿಯಲ್ಲೂ ಸಂಬಂಧಪಡದ ವಿಚಾರ.

Advertisement

ನಮ್ಮ ಆಂತರಿಕ ವಿಚಾರದಲ್ಲಿ ಅನಗತ್ಯವಾಗಿ ಮೂಗುತೂರಿಸಿರುವ ಮಲೇಷ್ಯಾಕ್ಕೆ ತಾಳೆಎಣ್ಣೆ ಆಮದು ಮೇಲೆ ನಿರ್ಬಂಧ ಹೇರುವ ಮೂಲಕ ಕೇಂದ್ರ ಸರಿಯಾದ ಹೊಡೆತ ನೀಡಿದೆ. ಕಾಶ್ಮೀರ ಮತ್ತು ಪೌರತ್ವ ಕಾಯಿದೆಗೆ ಸಂಬಂಧಿಸಿದಂತೆ ಮಲೇಷ್ಯಾದ ಪ್ರಧಾನಿ ಮಹತಿರ್‌ ಮೊಹಮ್ಮದ್‌ ಅನಪೇಕ್ಷಿತ ಹೇಳಿಕೆ ನೀಡಿದ್ದಾರೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿರುವುದಾಗಲಿ ಪೌರತ್ವ ಕಾಯಿದೆಯನ್ನು ಜಾರಿಗೊಳಿಸಿರುವುದಾಗಲಿ ಮಲೇಷ್ಯಾಕ್ಕೆ ಯಾವ ರೀತಿಯಲ್ಲೂ ಸಂಬಂಧಪಡದ ವಿಚಾರ. ಅದಾಗ್ಯೂ ಆ ದೇಶದ ಪ್ರಧಾನಿ ನೀಡಿರುವ ಹೇಳಿಕೆ ಭಾರತದ ಸಾರ್ವಭೌಮತೆಯನ್ನು ಪ್ರಶ್ನಿಸುವಂತಿದೆ. ಕಾಶ್ಮೀರವನ್ನು ಭಾರತ ಆಕ್ರಮಿಸಿ ಹಕ್ಕು ಸ್ಥಾಪನೆ ಮಾಡಿದೆ ಎಂಬರ್ಥದಲ್ಲಿ ಟೀಕೆಗಳನ್ನು ಮಾಡಿದ್ದಾರೆ ಮಹತಿರ್‌. ಆ ಬಳಿಕ ಮಲೇಷ್ಯಾ ಜೊತೆಗಿನ ವಾಣಿಜ್ಯ ವ್ಯವಹಾರಗಳನ್ನು ಕಡಿಮೆಗೊಳಿಸುವ ಕುರಿತು ಚಿಂತನೆಗಳು ನಡೆದಿವೆ.

ಅಧಿಕೃತವಾಗಿ ಸರಕಾರ ಮಲೇಷ್ಯಾದಿಂದ ತಾಳೆಎಣ್ಣೆ ಆಮದಿಗೆ ನಿರ್ಬಂಧ ಹೇರಿಲ್ಲವಾದರೂ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವ ಕ್ರಮವಾಗಿ ಆಮದು ಸುಂಕವನ್ನು ಹೆಚ್ಚಿಸಿದೆ. ಇದೇ ವೇಳೆ ಇಂಡೋನೇಷ್ಯಾ ಮತ್ತು ಉಕ್ರೇನ್‌ನಿಂದ ಮಲೇಷ್ಯಾಕ್ಕಿಂತ ಕಡಿಮೆ ಬೆಲೆಗೆ ಸಿಗುವ ತಾಳೆಎಣ್ಣೆ ಆಮದು ಮಾಡಿಕೊಳ್ಳಲು ಮುಂದಾಗಿದೆ. ಕೆಲವು ವ್ಯಾಪಾರಿಗಳೇ ಮಲೇಷ್ಯಾ ಬದಲು ಇಂಡೋನೇಷ್ಯಾದಿಂದ ತಾಳೆಎಣ್ಣೆ ಆಮದು ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ. ಆಮದು ಕಡಿಮೆಯಾಗಿರುವುದರ ಬಿಸಿ ಈಗಾಗಲೇ ಮಲೇಷ್ಯಾಕ್ಕೆ ತಟ್ಟಿದೆ. ಈ ವಿಚಾರವನ್ನು ರಾಜತಾಂತ್ರಿಕತೆಯ ಮೂಲಕವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಮಹತಿರ್‌ ಹೇಳಿರುವುದು ಇದನ್ನು ಪುಷ್ಟೀಕರಿಸುತ್ತದೆ.

ಭಾರತ ಜಗತ್ತಿನ ಅತಿ ಹೆಚ್ಚು ತಾಳೆಎಣ್ಣೆ ಆಮದು ಮಾಡಿಕೊಳ್ಳುತ್ತಿರುವ ದೇಶ. ಅಂತೆಯೇ ಮಲೇಷ್ಯಾ ಭಾರತಕ್ಕೆ ಅತಿ ಹೆಚ್ಚು ತಾಳೆಎಣ್ಣೆ ರಫ್ತು ಮಾಡುವ ದೇಶ. ಕಳೆದ ವರ್ಷ ಮಲೇಷ್ಯಾದಿಂದ 4.40 ಲಕ್ಷ ಟನ್‌ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗಿದೆ. 2014ರಿಂದೀಚೆಗೆ ಮಲೇಷ್ಯಾದ ತಾಳೆ ಎಣ್ಣೆಯ ಮುಖ್ಯ ಗ್ರಾಹಕ ಭಾರತ. ಮಲೇಷ್ಯಾದ ಒಟ್ಟು ತಾಳೆ ಎಣ್ಣೆ ರಫ್ತಿನಲ್ಲಿ ಶೇ. 24 ಭಾರತಕ್ಕೆ ಬರುತ್ತದೆ. ಎರಡನೇ ಅತಿ ದೊಡ್ಡ ಗ್ರಾಹಕ ದೇಶವಾಗಿರುವ ಚೀನ ಆಮದು ಮಾಡಿಕೊಂಡಿರುವುದು ಬರೀ 2.4 ದಶಲಕ್ಷ ಟನ್‌. ಈ ಅಂಕಿಅಂಶವೇ ದ್ವಿಪಕ್ಷೀಯ ವಾಣಿಜ್ಯ ದಲ್ಲಿ ಮಲೇಷ್ಯಾಕ್ಕೆ ಭಾರತ ಎಷ್ಟು ಅನಿವಾರ್ಯ ಎನ್ನುವುದು ತಿಳಿಯುತ್ತದೆ. ತಾಳೆಎಣ್ಣೆ ಮಲೇಷ್ಯಾದ ಪ್ರಮುಖ ರಫ್ತು ಉತ್ಪನ್ನ. ಅದರ ರಫ್ತು ಕಡಿಮೆಯಾದರೆ ಆ ದೇಶದ ಆರ್ಥಿಕತೆಯ ಮೇಲೆ ಭಾರೀ ಪರಿಣಾಮವಾಗುತ್ತದೆ.

ವಾಣಿಜ್ಯ ಈಗ ಬರೀ ವಾಣಿಜ್ಯವಾಗಿ ಉಳಿದಿಲ್ಲ. ಅದೀಗ ರಾಜತಾಂತ್ರಿಕ ಅಸ್ತ್ರವಾಗಿಯೂ ಬಳಕೆಯಾಗುತ್ತಿದೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಅಸಮಾಧಾನವಾಗಿದ್ದರೆ ಅದನ್ನು ತಿಳಿಸಲು ವಾಣಿಜ್ಯವನ್ನು ಅಸ್ತ್ರವಾಗಿ ಬಳಸುವುದು ಹೊಸತೇನಲ್ಲ. ಚೀನ ಮತ್ತು ಅಮೆರಿಕದ ನಡುವೆ ಆಗಾಗ ಇಂಥ ವಾಣಿಜ್ಯ ಸಮರ ನಡೆಯುತ್ತಿರುತ್ತದೆ. ಆದರೆ ಭಾರತ ಈ ಮಾರ್ಗವನ್ನು ಆಯ್ದುಕೊಂಡಿರುವುದು ಇದೇ ಮೊದಲು. ಜನರಲ್ಲೂ ಮಲೇಷ್ಯಾ ವಿರುದ್ಧ ಆಕ್ರೋಶವಿದೆ.ಅಲ್ಲಿಂದ ಒಂದೇ ಒಂದು ಬ್ಯಾರಲ್‌ ಎಣ್ಣೆಯನ್ನು ಆಮದು ಮಾಡಿಕೊಳ್ಳಬಾರದು ಎಂದು ಅನೇಕ ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಒತ್ತಾಯಿಸಿದ್ದರು.

Advertisement

ನಮ್ಮ ಆಂತರಿಕ ವಿಚಾರಗಳಲ್ಲಿ ಮೂಗುತೂರಿಸುವ ಅಧಿಕಾರ ಯಾವ ದೇಶಕ್ಕೂ ಇಲ್ಲ. ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವದ ಬಲಾಡ್ಯ ದೇಶಗಳೇ ಇದು ದ್ವಿಪಕ್ಷೀಯ ಮಾತುಕತೆಯಿಂದ ಬಗೆಹರಿಸಿಕೊಳ್ಳಬೇಕಾದ ವಿವಾದ, ಅನ್ಯರ ಹಸ್ತಕ್ಷೇಪ ಅಗತ್ಯವಿಲ್ಲ ಎಂದು ಹೇಳಿರುವ ಹೊರತಾಗಿಯೂ ಮಲೇಷ್ಯಾ, ಟರ್ಕಿಯಂಥ ಲೆಕ್ಕಕ್ಕೇ ಇಲ್ಲದ ದೇಶಗಳು ಅಧಿಕ ಪ್ರಸಂಗ ಮಾಡುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇನ್ನೊಂದು ದೇಶವನ್ನು ಖುಷಿಪಡಿಸುವ ಉದ್ದೇಶದಿಂದ ನಮ್ಮ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವ ದೇಶಗಳಿಗೆ ಈ ಮೂಲಕ ನಾವು ಕಠಿಣವಾದ ಸಂದೇಶವನ್ನು ರವಾನಿಸಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next