Advertisement

ಎಲ್ಲೂರಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮತ್ತೆ ಗ್ರಾಮಸ್ಥರಿಂದ ತಡೆ

09:46 PM May 09, 2019 | sudhir |

ಪಡುಬಿದ್ರಿ: ಗ್ರಾಮಸ್ಥರ ವಿರೋಧದ ನಡುವೆಯೂ ಉಡುಪಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಎಲ್ಲೂರು ಗ್ರಾ. ಪಂ. ವ್ಯಾಪ್ತಿಯ ಕೆಮುಂಡೇಲ್‌ – ಉಳ್ಳೂರು ಪ್ರದೇಶದ ಉಳ್ಳಾಲ ಕಾಡಿನಲ್ಲಿ ಸ್ಥಾಪಿಸಿಲುದ್ದೇಶಿಸಿರುವ ಕಾಪು ಪುರಸಭೆಯ ಘನ ತ್ಯಾಜ್ಯ ಸಂಸ್ಕರಣಾ ಘಟಕದ ಆವರಣಗೋಡೆ ಕಾಮಗಾರಿಗೆ ಗುರುವಾರದಂದು ಎರಡನೇ ಬಾರಿ ಗ್ರಾಮಸ್ಥರು ತಡೆಯೊಡ್ಡಿದ್ದಾರೆ. ಕಾಪು ತಹಶೀಲ್ದಾರ್‌ ರಶ್ಮಿ ಸೂಚನೆಯಂತೆ ಕಾಮಗಾರಿಯನ್ನು ಮೇ 28ರ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Advertisement

ಆವರಣಗೋಡೆ ನಿರ್ಮಿಸಲು ಗುತ್ತಿಗೆದಾರರು ಪೊಲೀಸ್‌ ಬಂದೋಬಸ್ತ್ ನಲ್ಲಿ ಗುರುವಾರ ಬೆಳಿಗ್ಗೆ ಎರಡು ಜೆಸಿಬಿ ಮೂಲಕ ಕಾಮಗಾರಿ ಆರಂಭಿಸಿದ್ದರು.  ವಿಷಯ ತಿಳಿದ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಯೋಜನೆ ವಿರೋಧಿಸಿ ಗ್ರಾ. ಪಂ. ನಿರ್ಣಯವಿದ್ದರೂ ಕಾಮಗಾರಿ ನಡೆಸುವುದು ಸರಿಯಲ್ಲ ಎಂದು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಕಾಮಗಾರಿ ಕೂಡಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಆದರೆ ಪೊಲೀಸರು ಅದಕ್ಕೊಪ್ಪಲಿಲ್ಲ.

ಗ್ರಾಮಸ್ಥರೂ ಪಟ್ಟು ಬಿಡಲಿಲ್ಲ. ಈ ಹಂತದಲ್ಲಿ ಘಟನಾ ಸ್ಥಳಕ್ಕೆ ಆಗಮಿಸದ ಎಲ್ಲೂರು ಗ್ರಾ. ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಒ ವಿರುದ್ಧ ಗ್ರಾಮಸ್ಥರೂ ಆಕ್ರೋಶಿತರಾದರು. ಆ ವೇಳೆಗೆ ಅಲ್ಲಿಗೆ ಆಗಮಿಸಿದ ಶಾಸಕ ಲಾಲಾಜಿ ಆರ್‌. ಮೆಂಡನ್‌, ತಹಶೀಲ್ದಾರ್‌ ರಶ್ಮಿ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.

ಜಿಲ್ಲಾಧಿಕಾರಿ ಆದೇಶದಂತೆ ಕಾಮಗಾರಿ
ಕಾಮಗಾರಿಗೆ ತಡೆ ಕೋರಿ ಗ್ರಾ. ಪಂ. ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ಕಳೆದ 2018 ಡಿಸೆಂಬರ್‌ ತಿಂಗಳಿನಲ್ಲಿ ವಜಾಗೊಂಡಿದೆ. ಕಾಮಗಾರಿ ಆರಂಭಿಸದಿದ್ದಲ್ಲಿ ಅನುದಾನ ಹಿಂದಕ್ಕೆ ಹೋಗುವ ಕಾರಣ ಉಡುಪಿ ಜಿಲ್ಲಾಧಿಕಾರಿ ಆದೇಶದಂತೆ ಕಾಮಗಾರಿ ಆರಂಭಿಸಲಾಗಿದೆ. ಆಧುನಿಕ ರೀತಿಯಲ್ಲಿ ಘಟಕ ನಿರ್ಮಾಣವಾಗಲಿದೆ.  ಪ್ರಥಮವಾಗಿ 10 ಎಕರೆ ಪ್ರದೇಶಕ್ಕೆ ಆವರಣಗೋಡೆ ನಿರ್ಮಾಣ ಮಾಡಲಾಗುವುದು. ಮಧ್ಯದಲ್ಲಿನ ಎರಡು ಎಕರೆ ಪ್ರದೇಶದಲ್ಲಿ ಘಟಕ ಸ್ಥಾಪನೆಯಾಗಲಿದೆ. ಈ ಪ್ರದೇಶದಲ್ಲಿನ ಮರಗಳನ್ನು ಮಾತ್ರ ತೆರವು ಮಾಡಲಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಮತ್ತೆ ಗಿಡಗಳನ್ನು ನೆಡಲಾಗುತ್ತದೆ ಎಂದು ರಾಯಪ್ಪ ತಹಶೀಲ್ದಾರ್‌ಗೆ ವಿವರಿಸಿದರು. ಹತ್ತು ಎಕರೆ ಪ್ರದೇಶದಲ್ಲಿ 700 ಮರಗಳನ್ನು ಗುರುತಿಸಲಾಗಿದೆ. ಆದರೆ ಯಾವುದೇ ಮರಗಳನ್ನು ತೆರವು ಮಾಡಲು ಆದೇಶವಾಗಿಲ್ಲ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದರು.

ನಾವು ಈಗಾಗಲೇ ಯುಪಿಸಿಎಲ್‌ ಯೋಜನೆಯಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಪುರಸಭಾ ವ್ಯಾಪ್ತಿಯ ತ್ಯಾಜ್ಯವನ್ನು ಇಲ್ಲಿ ತಂದು ಸುರಿದು ಡಂಪಿಂಗ್‌ ಯಾರ್ಡ್‌ ಮಾಡುವುದು ಬೇಡ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ಈಗಾಗಲೇ ಕಾಪು ಕ್ಷೇತ್ರದ ಅಲೆವೂರಿನಲ್ಲಿ ಉಡುಪಿ ನಗರಸಭೆಯ ಘನತ್ಯಾಜ್ಯವನ್ನು ತಂದು ಸುರಿಯುತ್ತಿರುವುದರಿಂದ ಅಲ್ಲಿಯೂ ಸಮಸ್ಯೆಯಾಗಿದೆ ಎಂದು ಲಾಲಾಜಿ ತಹಶೀಲ್ದಾರ್‌ ಗಮನಕ್ಕೆ ತಂದರು. ಮತ ಎಣಿಕೆ ಮುಗಿಯುವವರೆಗೆ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

Advertisement

ಗರಂ ಆದ ಪೊಲೀಸರು
ಸ್ಥಳಕ್ಕೆ ಆಗಮಿಸಿದ್ದ ಕಾಪು ವೃತ್ತ ನಿರೀಕ್ಷಕ ಶಾಂತರಾಮ್‌, ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ ಅವರು ನೇತೃತ್ವ ವಹಿಸದೆ ನಡೆಸುವ ಕಾಮಗಾರಿ ಬಗ್ಗೆ ಗರಂ ಆದರು. ತಕ್ಷಣ ಅವರನ್ನು ಕರೆ ಮಾಡಿ ಸ್ಥಳಕ್ಕೆ ಆಗಮಿಸುವಂತೆ ತಾಕೀತು ಮಾಡಿದರು. ಆ ಬಳಿಕಷ್ಟೇ ರಾಯಪ್ಪ ಸ್ಥಳಕ್ಕಾಗಮಿಸಿದರು.

ಜಿಪಂ ಸದಸ್ಯೆ ಶಿಲ್ಪಾ ಸುವರ್ಣ, ಗ್ರಾ. ಪಂ. ಸದಸ್ಯೆ ಪೂರ್ಣಿಮಾ ಗುರುಪ್ರಸಾದ್‌, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ನಾಗೇಶ್‌ ಭಟ್‌, ಸಂದೇಶ್‌ ಶೆಟ್ಟಿ, ಅಶೋಕ್‌ ಪೂಜಾರಿ, ಅರಣ್ಯಾಧಿಕಾರಿ ನಾಗೇಶ್‌ ಬಿಲ್ಲವ,
ಅರಣ್ಯ ರಕ್ಷಕ ಅಭಿಲಾಷ್‌, ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ ಮಿಥುನ್‌ ಶೆಟ್ಟಿ, ಪಡುಬಿದ್ರಿ ಠಾಣಾಧಿಕಾರಿ ಸತೀಶ್‌ ಸ್ಥಳದಲ್ಲಿದ್ದರು.

ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ
ಘಟಕ ನಿರ್ಮಾಣದ ವಿರುದ್ಧ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಅದರ ವಿಚಾರಣೆ ಮೇ 16 ರಂದು ನಡೆಯಲಿದೆ. ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಬಾರದು. ಯೋಜನೆಯ ವಿರುದ್ಧ ತಡೆಯಾಜ್ಞೆ ದೊರೆಯುವ ವಿಶ್ವಾಸವಿದೆ ಎಂಬುದಾಗಿ ಗ್ರಾಮಸ್ಥ ನಾಗೇಶ್‌ ಭಟ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next