Advertisement

ಮುಳ್ಳಿಕಟ್ಟೆಯಲ್ಲಿ ಇನ್ನೂ ಆರಂಭಗೊಳ್ಳದ ವಿಶ್ರಾಂತಿ ವಲಯ

10:18 PM Sep 19, 2020 | mahesh |

ಕುಂದಾಪುರ: ಸಾಲುಗಟ್ಟಿ ನಿಲ್ಲುವ ಸರಕು ಲಾರಿಗಳಿಂದ ಮರವಂತೆಯ ಪ್ರಾಕೃತಿಕ ಸೊಬಗು ಪ್ರವಾಸಿಗರಿಗೆ ಕಣ್ತುಂಬಿಕೊಳ್ಳಲು ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕೆ ರಾ.ಹೆ. 66ರ ಮುಳ್ಳಿಕಟ್ಟೆಯಲ್ಲಿ “ವಿಶ್ರಾಂತಿ ವಲಯ’ (ರೆಸ್ಟ್‌ ಏರಿಯಾ) ಆರಂಭಿಸುವ ಪ್ರಸ್ತಾವವಿತ್ತು. ಆದರೆ ಅದಿನ್ನೂ ಆರಂಭಗೊಂಡಿಲ್ಲ.

Advertisement

ಮರವಂತೆಯ ಕಡಲ ಕಿನಾರೆಯು ವಿಶ್ವ ಪ್ರಸಿದ್ಧ. ಪ್ರವಾಸಿಗರು ಆಗಮಿಸಿ ಇಲ್ಲಿನ ಮನೋಹರವಾದ ಸೌಂದರ್ಯವನ್ನು ಆಸ್ವಾದಿಸುತ್ತಾರೆ. ಹೆದ್ದಾರಿಗೆ ಹೊಂದಿಕೊಂಡೇ ಇರುವ ಕಿನಾರೆ ಇದಾಗಿರುವು ದರಿಂದ ವಾಹನಗಳಲ್ಲಿ ಸಂಚರಿಸುತ್ತಲೇ ಸೊಬಗು ಕಣ್ತುಂಬಿಕೊಳ್ಳುವವರು ಅನೇಕರಿದ್ದಾರೆ.

ಸಾಲು ಸಾಲು ಲಾರಿಗಳು
ಆದರೆ ಗೋವಾ, ಮುಂಬಯಿ ಕಡೆಗೆ ಸಾಗುವ ಸರಕು ಲಾರಿಗಳನ್ನು ಇಲ್ಲಿ ನಿಲ್ಲಿಸಿ ಚಾಲಕರು ವಿಶ್ರಾಂತಿ ಪಡೆಯುವುದೂ ಸಾಮಾನ್ಯವಾಗಿದೆ. ಇದರಿಂದಾಗಿ ಪ್ರವಾಸಿಗರಿಗೆ ಕಡಲ ಸೊಬಗನ್ನು ವೀಕ್ಷಿಸಲು ಅಡ್ಡಿಯಾಗುತ್ತಿದೆ.

ಲಾರಿ ಚಾಲಕರು, ನಿರ್ವಾಹರಿಕಗೆ ವಿಶ್ರಾಂತಿ ವಲಯ ಆರಂಭಿಸಬೇಕು ಎನ್ನುವ ಬೇಡಿಕೆ ಹಿನ್ನೆಲೆಯಲ್ಲಿ ಮರವಂತೆಯಿಂದ ಸುಮಾರು ಎರಡು ಕಿ.ಮೀ. ದೂರದ ಮುಳ್ಳಿಕಟ್ಟೆಯಲ್ಲಿ ಅಗತ್ಯ ಜಾಗ ಗುರುತಿಸಲಾಗಿದೆ. ಸದ್ಯ ಅಲ್ಲಿ ಶೌಚಾಲಯ ನಿರ್ಮಾಣ ಆಗಿದ್ದು ಬಿಟ್ಟರೆ ಇನ್ನಿತರ ಮೂಲ ಸೌಕರ್ಯ ಒದಗಿಸುವ ಕೆಲಸಗಳು ಆಗಿಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳಲ್ಲಿ ಜಾಗ ಹಸ್ತಾಂತರದ ಬಗ್ಗೆ ಕೇಳಿದರೆ ನಮಗೆ ಏನೂ ಗೊತ್ತಿಲ್ಲ ಎನ್ನುತ್ತಾರೆ. ಪ್ರವಾಸಿಗರ ವೀಕ್ಷಣೆಗೆ ಅಡ್ಡಿ ಎಂಬ ಕಾರಣಕ್ಕೆ ಈ ಮೊದಲು ಇಲ್ಲಿನ ಗೂಡಂಗಡಿಗಳನ್ನು ತೆರವು ಮಾಡಲಾಗಿತ್ತು. ಈಗ ಸಾಲುಗಟ್ಟಲೆ ಲಾರಿಗಳು ನಿಂತಿದ್ದರೂ ಪರ್ಯಾಯ ವ್ಯವಸ್ಥೆ ಯಾಕಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಬೇಡಿಕೆ ಈಡೇರಿಲ್ಲ
ಫೆ. 12ರಂದು ಕುಂದಾಪುರ-ಗೋವಾ ಚತುಷ್ಪಥ ಹೆದ್ದಾರಿಯ ಶಿರೂರು ಟೋಲ್‌ಗೇಟ್‌ನಲ್ಲಿ ಸುಂಕ ಸಂಗ್ರಹ ಆರಂಭವಾಗಿತ್ತು. ಟೋಲ್‌ಗೇಟಲ್ಲಿ ಸುಂಕ ಸಂಗ್ರಹ ಆರಂಭವಾಗಿ 7 ತಿಂಗಳು ಕಳೆದಿದೆ. ಆದರೆ ಇನ್ನೂ ಕೂಡ ಮುಳ್ಳಿಕಟ್ಟೆಯಲ್ಲಿ ವಿಶ್ರಾಂತಿ ವಲಯದ ಬೇಡಿಕೆ ಮಾತ್ರ ಈಡೇರಿಲ್ಲ.

Advertisement

ಏನೆಲ್ಲ ಇರುತ್ತೆ ?
ವಿಶ್ರಾಂತಿ ವಲಯದಲ್ಲಿ ಘನ ಹಾಗೂ ಎಲ್ಲ ರೀತಿಯ ವಾಹನಗಳ ನಿಲುಗಡೆಗೆ ವಿಶಾಲವಾಗದ ಜಾಗ, ಕ್ಯಾಂಟೀನ್‌, ವಿಶ್ರಾಂತಿ ಗೃಹ, ಕುಡಿಯುವ ನೀರು, ಸ್ನಾನಗೃಹ, ಶೌಚಾಲಯ, ಸೇರಿದಂತೆ ಇನ್ನಿತರ ಸೌಲಭ್ಯಗಳು ಇರಲಿವೆ. ಲಾರಿ, ಇನ್ನಿತರ ವಾಹನಗಳ ದುರಸ್ತಿ, ಟಯರ್‌ ಪಂಕ್ಚರ್‌ ವ್ಯವಸ್ಥೆಗಳೂ ಇರಲಿವೆ.

ಶೀಘ್ರ ಆಗಲಿ
ಮರವಂತೆಯಲ್ಲಿ ಸಾಲುಗಟ್ಟಿ 20-30 ಲಾರಿಗಳು ಪ್ರತಿ ನಿತ್ಯ ನಿಲ್ಲುತ್ತವೆ. ಇದರಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೆ ತುಂಬಾ ತೊಂದರೆಯಾಗುತ್ತದೆ. ಇದಲ್ಲದೆ ಆಗಾಗ ಇಲ್ಲಿ ಅಪಘಾತಗಳು ಕೂಡ ಆಗುತ್ತಿರುತ್ತವೆೆ. ಆದಷ್ಟು ಬೇಗ ಬೇರೆ ಕಡೆ ರೆಸ್ಟ್‌ ಏರಿಯಾ
ಆದರೆ ಒಳ್ಳೆಯದಿತ್ತು.
– ಹರೀಶ್‌ ಖಾರ್ವಿ ತ್ರಾಸಿ, ಸ್ಥಳೀಯರು

ಭೂಸ್ವಾಧೀನ ಪ್ರಕ್ರಿಯೆ
ವಿಶ್ರಾಂತಿ ವಲಯಕ್ಕಾಗಿ ಹೊಸಾಡು ಗ್ರಾ.ಪಂ. ವ್ಯಾಪ್ತಿಯ ಮುಳ್ಳಿಕಟ್ಟೆಯಲ್ಲಿ ಜಾಗವನ್ನು ಗುರುತಿಸಿ, ಭೂಸ್ವಾಧೀನ ನಡೆಯುತ್ತಿದೆ. ಕಂದಾಯ ಇಲಾಖೆಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಆ ಬಳಿಕ ಮೂಲಸೌಕರ್ಯ ಸಹಿತ ವಿವಿಧ ಸೌಲಭ್ಯಗಳನ್ನು ಒದಗಿಸುವ ಕಾರ್ಯ ನಡೆಯಲಿದೆ.
– ಕೆ. ರಾಜು, ಸಹಾಯಕ ಆಯುಕ್ತರು, ಕುಂದಾಪುರ ಉಪ ವಿಭಾಗ

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next