Advertisement

ಶಾಲೆ ಪುನಾರಂಭ: ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ

07:05 PM Dec 27, 2020 | Suhan S |

ಹೊಸಕೋಟೆ: ಸರ್ಕಾರ ಜ.1ರಿಂದ ಪ್ರೌಢಶಾಲೆಯ 10ನೇ ತರಗತಿ ಪ್ರಾರಂಭಕ್ಕೆ ವಿಧಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕ ಗಂಗಮಾರೇಗೌಡ ಹೇಳಿದರು.

Advertisement

ನಗರದಲ್ಲಿ ನಡೆದ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಅವರು, 6ರಿಂದ 9ನೇ ತರಗತಿಯವರೆಗೂ ಶಾಲಾ ಆವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯಾಗಮ ಯೋಜನೆಯಡಿ ಬೋಧನೆ ಮಾಡಬೇಕು. ಯಾವುದೇ ಲೋಪದೋಷಗಳು ಉಂಟಾಗದಂತೆ ಮುಖ್ಯ ಶಿಕ್ಷಕರು ಗಮನಹರಿಸಬೇಕು ಎಂದು ಹೇಳಿದರು.

ಪೋಷಕರು ಸಹಕರಿಸಲಿ: ಹಿಂದಿನ ಸಾಲಿನಲ್ಲಿ ತಾಲೂಕಿನ ಎಸ್‌ಎಸ್‌ ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫ‌ಲಿತಾಂಶ ಪಡೆಯದ ಕಾರಣದಿಂದಾಗಿ ಜಿಲ್ಲೆಯು ರಾಜ್ಯಮಟ್ಟದಲ್ಲಿ ಗಳಿಸಿದ ಸ್ಥಾನದ ಮೇಲೆ ಪರಿಣಾಮ ಬೀರಿತ್ತು. ಈ ಬಾರಿ ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಯ ಬಗ್ಗೆಯೂ ಕಾಳಜಿವಹಿಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಶ್ರಮಿಸಬೇಕು.ಈ ದಿಶೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ವಿದ್ಯಾರ್ಥಿಗಳಿಗೆ ಸ್ವಾಗತ: ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎನ್‌.ಕನ್ನಯ್ಯ ಮಾತನಾಡಿ, ತಾಲೂಕಿನಲ್ಲಿ 19 ಸರ್ಕಾರಿ, 3 ವಸತಿ, 7 ಅನುದಾನಿತ, 47 ಖಾಸಗಿ ಪ್ರೌಢಶಾಲೆಗಳಿದ್ದು, ಜ.1ರಂದು ಶಾಲೆಗಳನ್ನು ಹಬ್ಬದ ವಾತಾವರಣದೊಂದಿಗೆ ಪುನಾರಂಭಿಸಲು ಯೋಜಿಸಲಾಗಿದೆ. ಶಿಕ್ಷಕರುಸಾಂಪ್ರಾದಾಯಿಕ ಉಡುಗೆಗಳನ್ನು ಧರಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸುವರು. ಎಲ್ಲಾ ಶಿಕ್ಷಕರನ್ನು ಕೋವಿಡ್‌-19ನ ಆರ್‌ಟಿಪಿಸಿಆರ್‌ತಪಾಸಣೆಗೆ ಒಳಪಡಿಸಲಾಗಿದ್ದು, ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ತಿಳಿವಳಿಕೆ ಸಹ ನೀಡಲಾಗಿದೆ ಎಂದು ಹೇಳಿದರು.

ಶಾಲಾ ನಿಧಿಯಿಂದ ಥರ್ಮಲ್‌ ಸ್ಕ್ಯಾನ್‌ ಉಪಕರಣಗಳನ್ನು ಖರೀದಿಸಿ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಪಾಸಣೆ ಮಾಡಬೇಕು.ಪ್ರತಿ ಕೊಠಡಿಯಲ್ಲಿ ಗರಿಷ್ಠ 15-20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶಕಲ್ಪಿಸಲಾಗಿದ್ದು ಕಟ್ಟುನಿಟ್ಟಾಗಿ ಪಾಲಿಸಬೇಕು. ತಾಲೂಕು ಮಟ್ಟದಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಸಹ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ಡಿ.29ರಂದು ತಾಲೂಕಿನ ಎಲ್ಲಾ 24 ಕ್ಲಸ್ಟರ್‌ಗಳ ವ್ಯಾಪ್ತಿಯಲ್ಲಿ ಶಿಕ್ಷಕರ ಸಭೆಗಳನ್ನು ಏರ್ಪಡಿಸಿ ಸೂಕ್ತ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

Advertisement

ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ನಾಗರಾಜಗುಪ್ತ ಇನ್ನಿತರರು, ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next