Advertisement

ಸಂಸ್ಕಾರಯುತ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರದ್ದು 

02:59 PM Dec 13, 2017 | Team Udayavani |

ಪುತ್ತೂರು: ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಮಹತ್ತರ ಜವಾಬ್ದಾರಿಯನ್ನು ಶಿಕ್ಷಕರು ಹೊಂದಿದಾಗ ಸಮಾಜದಲ್ಲಿ ಶಾಂತಿ, ಸಾಮರಸ್ಯದ ವಾತಾವರಣವನ್ನು ನಿರ್ಮಿಸಬಹುದು ಎಂದು ಸಂಸದೀಯ ಕಾರ್ಯದರ್ಶಿ, ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.

Advertisement

ದಕ್ಷಿಣ ಕನ್ನಡ ಜಿಲ್ಲಾ ಪ.ಪೂ. ಕಾಲೇಜು ಪ್ರಾಂಶುಪಾಲರ ಸಂಘ ಮತ್ತು ಪುತ್ತೂರು ಸಂತ ಫಿಲೋಮಿನಾ ಪ.ಪೂ. ಕಾಲೇಜು ಸಹಯೋಗದಲ್ಲಿ ಮಂಗಳವಾರ ಫಿಲೋಮಿನಾ ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ಕಾಲೇಜಿನ ವಜ್ರಮಹೋತ್ಸವದ ಅಂಗವಾಗಿ ಆಯೋಜಿಸಲಾದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಪ್ರಾಂಶುಪಾಲರ ಡೈರಿ-2018ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜಿಲ್ಲೆಯ ಪ್ರಾಂಶುಪಾಲರ ಸಂಘವು ಶೈಕ್ಷಣಿಕ ವರ್ಷದಲ್ಲಿ ವಿವಿಧ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸುವ ಉದ್ದೇಶದಿಂದ ಡೈರಿಯನ್ನು ರೂಪುಗೊಳಿಸಿದ್ದು, ಇದೊಂದು ಕರ್ನಾಟಕ ರಾಜ್ಯದಲ್ಲಿಯೇ ಮಾದರಿಯ, ಇತರರಿಗೆ ಆದರ್ಶ ಕೆಲಸವಾಗಿದೆ ಎಂದು ಹೇಳಿದರು.

ಸಮರ್ಥರಿರಬೇಕು
ಗೌರವ ಅತಿಥಿಗಳಾಗಿದ್ದ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್‌ ನಿರ್ದೇಶಕ ವಂ| ಡಾ| ಆ್ಯಂಟನಿ ಪ್ರಕಾಶ್‌ ಮೊಂತೆರೊ ಮಾತನಾಡಿ, ಶಿಕ್ಷಕಕರು ಪಡೆದಿರುವ ಉನ್ನತ ಮಟ್ಟದ ಪದವಿಗಳಿಗಿಂತ ಅವರು ಹೊಂದಿರುವ ಸೃಜನಾತ್ಮಕ ಚಿಂತನೆಗಳೇ ವಿದ್ಯಾರ್ಥಿಗಳ ಬದುಕನ್ನು ನಿರ್ಧರಿಸುತ್ತವೆ. ಶಿಕ್ಷಣ ಸಂಸ್ಥೆಗಳ ಆಡಳಿತವನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿರುವವರು ಹೊಸತನ ಮತ್ತು ಪರಿಣಾಮಕಾರಿಯಾದ ಯೋಜನೆಗಳನ್ನು ರೂಪಿಸುವಲ್ಲಿ ಸಮರ್ಥರಾಗಿರಬೇಕು ಎಂದು ಹೇಳಿದರು.

ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷರಾದ ಕುಂಬ್ರ ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲ ದುಗ್ಗಪ್ಪ ಎನ್‌., ಉಳ್ಳಾಲ ಹಜರತ್‌ ಸಯ್ಯದ್‌ ಮದನಿ ಮಹಿಳಾ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಡಾ| ಸಂಗೀತಾ ಎಂ. ಮತ್ತು ಕೋಶಾಧಿಕಾರಿ ತುಂಬೆ ಪ.ಪೂ. ಕಾಲೇಜಿನ ಪ್ರಾಂಶುಪಾಲ ಕೆ. ಎನ್‌. ಗಂಗಾಧರ ಆಳ್ವ ಉಪಸ್ಥಿತರಿದ್ದರು.

Advertisement

ಸಂತ ಫಿಲೋಮಿನಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ವಂ| ವಿಜಯ್‌ ಲೋಬೊ ಸ್ವಾಗತಿಸಿ, ಸಂಘದ ಅಧ್ಯಕ್ಷೆ ಹಾಗೂ ಮಂಗಳೂರು ರಥಬೀದಿ ಸ. ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಎಲ್ವೀರಾ ಫಿಲೋಮಿನಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಕಾರ್ಯದರ್ಶಿ ಹಾಗೂ ಮಂಗಳೂರಿನ ಶ್ರೀ ರಾಮಕೃಷ್ಣ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಾ| ಕಿಶೋರ್‌ ಕುಮಾರ್‌ ಶೇಣಿ ವಂದಿಸಿದರು. ಉಪನ್ಯಾಸಕ ಪ್ರಶಾಂತ ಭಟ್‌ ಪಿ. ನಿರೂಪಿಸಿದರು.

ತಾಂತ್ರಿಕ ಅಧಿವೇಶನ
ಉದ್ಘಾಟನ ಸಮಾರಂಭದ ಬಳಿಕ ಬೆಂಗಳೂರಿನ ಅಂತಾರಾಷ್ಟ್ರೀಯ ಸೃಜನಾ ಶೀಲ ಕಲಿಕಾ ತರಬೇತಿ ಕೇಂದ್ರದ ಸ್ಥಾಪಕ ಹಾಗೂ ಅಧ್ಯಕ್ಷ ಡಾ| ಗುರುರಾಜ ಕರ್ಜಗಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಎರಡು ತಾಂತ್ರಿಕ ಅಧಿವೇಶನಗಳನ್ನು ನಡೆಸಿಕೊಟ್ಟರು.

ಜವಾಬ್ದಾರಿ ಕಡಿಮೆಯಾಗಿದೆ 
ಅಧ್ಯಕ್ಷತೆ ವಹಿಸಿದ ಪ.ಪೂ. ಶಿಕ್ಷಣ ಇಲಾಖೆಯ ದ.ಕ. ಜಿಲ್ಲಾ ಉಪ ನಿರ್ದೇಶಕ ಕೆ. ಆರ್‌. ತಿಮ್ಮಯ್ಯ ಕಾರ್ಯಾಗಾರವನ್ನು ಉದ್ಘಾಟಿಸಿ, ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯು ವರ್ಷಂಪ್ರತಿ ಉತ್ತಮ ಶೈಕ್ಷಣಿಕ ಫಲಿತಾಂಶವನ್ನು ನೀಡುವ ಮೂಲಕ ರಾಜ್ಯದಲ್ಲಿಯೇ ಹೆಸರನ್ನು ಗಳಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಇಲ್ಲಿಯ ಪ್ರಾಂಶುಪಾಲರ ಸಂಘವು ಅತ್ಯಂತ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುವುದರಿಂದ ಉಪ ನಿರ್ದೇಶಕರ ಜವಾಬ್ದಾರಿ ಬಹಳಷ್ಟು ಕಡಿಮೆಯಾಗಿದೆ. ಈ ಜಿಲ್ಲೆಯಲ್ಲಿ ವಿಷಯವಾರು ಸಂಘಗಳೂ ಇರುವುದು ಮತ್ತೂಂದು ವಿಶೇಷತೆಯಾಗಿದೆ ಎಂದು ಹೇಳಿದರು.

ಮಹತಪೂರ್ಣ ಜವಾಬ್ದಾರಿ
ಮಾಯಿದೆ ದೇವುಸ್‌ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ| ಆಲ್ಫ್ರೆಡ್ ಜೆ. ಪಿಂಟೊ ಮಾತನಾಡಿ, ಮೊ. ಆ್ಯಂಟನಿ ಪತ್ರಾವೊ ಅವರು ಪುತ್ತೂರಿನಲ್ಲಿ ವಿವಿಧ ಹಂತಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನೇ ಸೃಷ್ಟಿ ಮಾಡಿರುವುದು ಹೆಮ್ಮೆಯ ಸಂಗತಿ. ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರಲ್ಲಿ ಉತ್ತಮ ನಾಗರಿಕರನ್ನು ರೂಪುಗೊಳಿಸುವ ಮಹತ್ವಪೂರ್ಣ ಜವಾಬ್ದಾರಿಯಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next