Advertisement
ಸರಕಾರದ ಆದೇಶದಂತೆ ಸೋಮವಾರ ಬೆಳಗ್ಗೆಯಿಂದಲೇ ಬಹುತೇಕ ಎಲ್ಲ ಕಡೆ ಅಂಗಡಿ-ಮುಂಗಟ್ಟುಗಳು, ಕೆಲವು ಕೈಗಾರಿಕೆಗಳು, ಕಂಪೆನಿಗಳು ಕಾರ್ಯಾರಂಭ ಮಾಡಿದವು. ಅದಕ್ಕೆ ಪೂರಕವಾಗಿ ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಸುಮಾರು ಒಂದೂವರೆ ತಿಂಗಳಿನಿಂದ ಮನೆಯಲ್ಲೇ ಇದ್ದ ಉದ್ಯೋಗಿಗಳು, ಕಾರ್ಮಿಕರು ಬೆಳಗ್ಗೆ 9 ಗಂಟೆಗಾಗಲೇ ಸ್ವಂತ ವಾಹನಗಳೊಂದಿಗೆ ರಸ್ತೆಗಿಳಿದರು. ಕಿರಾಣಿ, ಮನೆಗೆ ಬೇಕಾದ ಸಾಮಗ್ರಿಗಳ ಖರೀದಿಗಾಗಿ ಗ್ರಾಹಕರು ಅಂಗಡಿಗಳತ್ತ ಹೆಜ್ಜೆ ಹಾಕಿದರು.
Related Articles
Advertisement
ಸಡಿಲಿಕೆಯ ಬೆನ್ನಲ್ಲೇ ಕಟ್ಟಡ ನಿರ್ಮಾಣ, ಐಟಿ-ಬಿಟಿ ಕಂಪೆನಿಗಳು, ಸಂಘ-ಸಂಸ್ಥೆಗಳ ಕಚೇರಿಗಳು, ಸ್ಟಾರ್ಟ್‌ಅಪ್ ಗಳು, ಫ್ಯಾಕ್ಟರಿಗಳು ತಮ್ಮ ಉದ್ಯೋಗಿಗಳಿಗೆ ಇ-ಮೇಲ್ ಅಥವಾ ಮೊಬೈಲ್ ಸಂದೇಶಗಳ ಮೂಲಕ ಕೆಲಸಕ್ಕೆ ಹಾಜರಾಗುವಂತೆ ಹಿಂದಿನ ದಿನವೇ ಸೂಚನೆ ನೀಡಿ ದ್ದವು. ಅದರಂತೆ ಬೆಳಗ್ಗೆ 9 ಗಂಟೆಗಾಗಲೇ ಒಂದೊಂದಾಗಿ ವಾಹನಗಳು ರಸ್ತೆಗಿಳಿದವು. ಕಾರು ಮತ್ತು ದ್ವಿಚಕ್ರ ವಾಹನಗಳು ಹೆಚ್ಚಾಗಿದ್ದವು. ಇದರಿಂದ ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ, ಆನಂದರಾವ್ ವೃತ್ತ, ಕಿನೋ ಥಿಯೇಟರ್ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಿತ್ತು. ಈ ಹಿಂದೆ ನಿರ್ಬಂಧಿಸಿದ್ದ ಮೇಲ್ಸೇತುವೆ, ಕೆಳಸೇತುವೆ, ದ್ವಿಪಥದಲ್ಲಿ ಏಕಪಥವನ್ನು ಮುಕ್ತಗೊಳಿಸಲಾಗಿತ್ತು.
ಅಮಲಿಗಾಗಿ ಇನ್ನಿಲ್ಲದ ಕಸರತ್ತು!ಇದೆಲ್ಲದರ ನಡುವೆ ರಾಜ್ಯಾದ್ಯಂತ ಇಡೀ ದಿನದ ಪ್ರಮುಖ ಆಕರ್ಷಣೆ ಮದ್ಯ ಮಾರಾಟಗಾರರು ಮತ್ತು ಖರೀದಿದಾರರಾಗಿದ್ದರು. ಸ್ಟಾಕ್ ಖಾಲಿ ಆದೀತೆಂಬ ಆತಂಕ ಮತ್ತು ಸಂಜೆ 7ರ ಅನಂತರ ಸಿಗುವುದಿಲ್ಲ ಎಂಬ ಆತಂಕದಲ್ಲಿ ಮುಂಚಿತ ಖರೀದಿಗಾಗಿ ನಾನಾ ಕಸರತ್ತು ನಡೆಯಿತು. ಮದ್ಯ ಅಂಗಡಿಗಳು ತೆರೆಯುತ್ತಿದ್ದಂತೆ ಪಾನಪ್ರಿಯರು ಲಗ್ಗೆ ಇರಿಸಿದರು. ಅಲ್ಲಿ ಸಾಮಾಜಿಕ ಅಂತರಕ್ಕಾಗಿ ಗುರುತು ಹಾಕಿದ್ದ ಬಾಕ್ಸ್‌ಗಳಲ್ಲಿ ಪಾದರಕ್ಷೆ, ಟವಲ್, ಟೊಪ್ಪಿಗೆ ಇಟ್ಟು ಕಾಯ್ದಿರಿಸಿಕೊಳ್ಳುವ ಜಾಣ್ಮೆಯೂ ಕಂಡುಬಂತು. ನೂಕುನುಗ್ಗಲಿನ ಮುನ್ಸೂಚನೆ ದೊರೆತ ವ್ಯಾಪಾರಿಗಳು ಕೂಡ ನಿಯಂತ್ರಣಕ್ಕೆ ಪೂರ್ವಸಿದ್ಧತೆ ಮಾಡಿಕೊಂಡಿದ್ದರು. ಹಾಗಾಗಿ ಬಹುತೇಕ ಕಡೆ ವ್ಯವಸ್ಥಿತವಾಗಿ ಮದ್ಯದ ವ್ಯಾಪಾರ ನಡೆಯಿತು. ಎಲ್ಲ ಕಡೆಯೂ ಪಾರ್ಸೆಲ್‌ಗೆ ಮಾತ್ರ ಅವಕಾಶ ಇತ್ತು. ಈ ಮಧ್ಯೆ ಸಡಿಲಿಕೆ ನೆಪದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ನೂರಾರು ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದರು. ವಲಸೆ ಕಾರ್ಮಿಕರು, ಊರುಗಳಿಗೆ ತೆರಳಿರುವ ಉದ್ಯೋಗಿ ಗಳು ಮತ್ತೆ ಬೆಂಗಳೂರು, ಮೈಸೂರು, ಮಂಗಳೂರು ಒಳಗೊಂಡಂತೆ ಕೆಲಸ ಮಾಡುವ ಜಾಗ ತಲುಪಲು ಅಗತ್ಯ ಇರುವ ಪಾಸು ಪಡೆಯಲು ಸಹಸ್ರಾರು ಸಂಖ್ಯೆಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ಮಂಜೂರಾದ ಪಾಸು ಸಂಗ್ರಹಕ್ಕೆ ಕೆಲವರು ಗಂಟೆಗಟ್ಟಲೆ ಸರದಿ ನಿಂತಿದ್ದರು. ಸಡಿಲಿಕೆ; ಗೂಡು ಸೇರುವ ಧಾವಂತ
ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಮಾತ್ರ ಸಡಿಲಿಕೆ ಇದ್ದುದರಿಂದ ಉಳಿದ ಸಮಯದಲ್ಲಿ ಇಡೀ ರಾಜ್ಯ ಮತ್ತೆ ಸ್ತಬ್ಧಗೊಂಡಿತು. ಸಂಜೆ 5 ಗಂಟೆ ಆಗುತ್ತಿದ್ದಂತೆ ಜನರು ಕೆಲಸದ ಸ್ಥಳದಿಂದ ಮನೆಗಳತ್ತ ಧಾವಂತದಲ್ಲಿ ಹೆಜ್ಜೆ ಹಾಕಿದರು. ಇದರಿಂದ ಪ್ರಮುಖ ಜಂಕ್ಷನ್‌ಗಳು, ರಸ್ತೆಗಳಲ್ಲಿ ಸಂಚಾರದಟ್ಟಣೆ ಬಿಸಿ ಉಂಟಾಯಿತು. ಮತ್ತೂಂದೆಡೆ ವಲಸೆ ಕಾರ್ಮಿಕರ ತವರಿನ ಪಯಣ ಸೋಮವಾರ ಕೂಡ ಮುಂದುವರಿಯಿತು. ಇಡೀ ದಿನ 550 ಬಸ್‌ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ತೆರಳಿದರು. ಇದರೊಂದಿಗೆ ಒಟ್ಟಾರೆ ಆರು ರೈಲುಗಳಲ್ಲೂ ಜನರು ಊರಿಗೆ ಹೋಗಿದ್ದು, ಕಳೆದೆರಡು ದಿನಗಳಲ್ಲಿ ಒಟ್ಟಾರೆ ಸುಮಾರು 30 ಸಾವಿರ ಕಾರ್ಮಿಕರು ತೆರಳಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.