Advertisement

ಹೊಣೆ ಸಿಕ್ಕಾಯ್ತು; ಟಿಕೆಟ್‌ ಇನ್ನೂ ಪಕ್ಕಾ ಇಲ್ಲ

09:23 AM Nov 29, 2017 | Team Udayavani |

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಮೂರನೇ ತಲೆಮಾರು ರಾಜಕೀಯ ಪ್ರವೇಶ ಕುರಿತ ಸಂಘರ್ಷದಲ್ಲಿ ಕೊನೆಗೂ ಪ್ರಜ್ವಲ್‌ ರೇವಣ್ಣ ಮೇಲುಗೈ ಸಾಧಿಸಿ ಪಕ್ಷದಲ್ಲಿ ಉನ್ನತ ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿಗೆ ಪ್ರಜ್ವಲ್‌ ರೇವಣ್ಣ ಅವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿಯಂತಹ ಮಹತ್ವದ ಹುದ್ದೆ ಕೊಡುವ ವಿಚಾರದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಂತಾಗಿದೆ.

Advertisement

ಪಕ್ಷದಲ್ಲಿ ಅಧಿಕೃತ ಸ್ಥಾನಮಾನ ಗಿಟ್ಟಿಸಿಕೊಳ್ಳುವಲ್ಲಿ ಸೈ ಎನಿಸಿಕೊಂಡಿರುವ ಪ್ರಜ್ವಲ್‌ ರೇವಣ್ಣ ಮುಂದಿನ ಗುರಿ ಚುನಾವಣಾ “ಅಖಾಡ’ ಪ್ರವೇಶವೇ ಆಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿದ್ದರೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ 
ಮಾಡುವುದು ಖಚಿತ. ಇದಕ್ಕೆ ಖುದ್ದು ಎಚ್‌ .ಡಿ.ದೇವೇಗೌಡರೇ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ ಎಂದು ಹೇಳಲಾಗಿದೆ.

ಪ್ರಜ್ವಲ್‌ ರೇವಣ್ಣಗೆ ಟಿಕೆಟ್‌ ವಿಚಾರ ಬಂದಾಗಲೆಲ್ಲಾ ಮೊದಲು ಪಕ್ಷ ಸಂಘಟನೆ ಮಾಡಲಿ ಎಂಬ ಮಾತು ದೇವೇಗೌಡರ ಕುಟುಂಬದಲ್ಲಿ ಕೇಳಿ ಬರುತ್ತಿತ್ತು. ಇದಕ್ಕೆ ಆಸ್ಪದ ನೀಡದಿರಲು ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಇದೀಗ ಪಕ್ಷದ ಎಲ್ಲ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗಿಯಾಗಿ ವೇದಿಕೆ ಏರಲು “ಲೈಸೆನ್ಸ್‌’ ಸಿಕ್ಕಂತಾಗಿದೆ. ಹುಣಸೂರು ಕಾರ್ಯಕ್ರಮವೊಂದರಲ್ಲಿ ಸೂಟ್‌ ಕೇಸ್‌ ಕೊಟ್ಟವರಿಗೆ ಟಿಕೆಟ್‌ ಕೊಡಲಾಗುತ್ತದೆ ಎಂದು, ಆ ನಂತರ ರಾಜರಾಜೇಶ್ವರಿ ನಗರದ ಕಾರ್ಯಕ್ರಮವೊಂದರಲ್ಲಿ ಕೆಲವು ಬಕೆಟ್‌ ಹಿಡಿಯುವವರು ಪಕ್ಷದಲ್ಲಿದ್ದಾರೆ ಎಂದು ವಿವಾದದ ಹೇಳಿಕೆ ಕೊಟ್ಟಿದ್ದರು ಎಂಬ ವಿಚಾರ ಪಕ್ಷದಲ್ಲಿ ಹಾಗೂ  ಕುಟುಂಬದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಬಾಯಿ ಬಿಡಬಾರದು, ಬಹಿರಂಗವಾಗಿ ಕಾಣಿಸಿ ಕೊಳ್ಳಬಾರದು ಎಂದು ತಾಕೀತು ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಅದರ ಬೆನ್ನಲ್ಲೇ ದೇವೇಗೌಡರು, ಪ್ರಜ್ವಲ್‌ ರಾಜಕೀಯದಲ್ಲಿ
ಬೆಳೆಯುವುದನ್ನು ಯಾರೂ ತಡೆಯಲಾಗದು. 

ನಿಖೀಲ್‌ ಕುಮಾರಸ್ವಾಮಿ ಸಹ ರಾಜಕೀಯಕ್ಕೆ ಬರಬಹುದು ಎಂದು ಮುಗುಮ್ಮಾಗಿ ಹೇಳಿದ್ದರು. ಹೀಗಾಗಿ ನಿಖೀಲ್‌ಗ‌ೂ ಅವಕಾಶ ಸಿಗುತ್ತಾ ಎಂಬ ಬಗ್ಗೆ ಕುತೂಹಲ ಮೂಡಿದೆ. ಏಕೆಂದರೆ, ನಿಖೀಲ್‌ ಸಹ, ತಂದೆ ಜತೆಗೆ ಚುನಾವಣಾ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ಇದಕ್ಕಾಗಿ ಫೆಬ್ರವರಿಯಿಂದ ಚಿತ್ರೀಕರಣದಲ್ಲೂ ಭಾಗಿಯಾಗಲ್ಲವೆಂದೂ ತಿಳಿಸಿದ್ದಾರೆ. ಮತ್ತೂಂದು ಮೂಲಗಳ ಪ್ರಕಾರ ಚೆನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿಗೆ ಟಿಕೆಟ್‌ ಕೊಡುವುದಾದರೆ ನನ್ನ ಮಗನಿಗೂ ಟಿಕೆಟ್‌ ಕೊಡಬೇಕು ಎಂದು ಭವಾನಿ
ರೇವಣ್ಣ ಪಟ್ಟು ಹಿಡಿದಿದ್ದರು. ಹೀಗಾಗಿ, ಪಕ್ಷದಲ್ಲಿ ಸ್ಥಾನಮಾನ ನೀಡಿ ಸಮಾಧಾನಪಡಿಸಲಾಗಿದೆ.  

ಸ್ಪರ್ಧೆ ವಿಚಾರದಲ್ಲಿ ಇನ್ನೂ ಗೊಂದಲ
ಪ್ರಜ್ವಲ್‌ ಬೇಲೂರಿನಿಂದ ಕಣಕ್ಕೆ ಇಳಿಯಲು ತಯಾರಿ ನಡೆಸಿದ್ದರು, ಆದರೆ ಅಲ್ಲಿ ಲಿಂಗಾಯಿತ ಸಮುದಾಯಕ್ಕೆ ಟಿಕೆಟ್‌ ಕೊಡುವ ಲೆಕ್ಕಾಚಾರದಿಂದ ಒಪ್ಪಿಗೆ ಸಿಕ್ಕಿರಲಿಲ್ಲ. ನಂತರ ಹುಣಸೂರು ಕಡೆ ಕಣ್ಣು ಹಾಕಿದರೂ, ಅಲ್ಲಿಗೆ ಕಾಂಗ್ರೆಸ್‌ನಿಂದ ಬಂದ ಎಚ್‌.ವಿಶ್ವನಾಥ್‌ ಅವರಿಗೆ ಟಿಕೆಟ್‌ ಭರವಸೆ ನೀಡಲಾಗಿದೆ.ಇತ್ತೀಚೆಗೆ ರಾಜರಾಜೇಶ್ವರಿ ನಗರದಲ್ಲಿ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದರು. ಆದರೆ, ಅಲ್ಲಿನ ಹಾಲಿ ಶಾಸಕ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ನಿಖೀಲ್‌ ಕುಮಾರಸ್ವಾಮಿ ಅಭಿನಯಿಸುತ್ತಿದ್ದಾರೆ. ಅಲ್ಲಿ ಪ್ರಜ್ವಲ್‌ ಸ್ಪರ್ಧೆ
ಮಾಡಿದರೆ ಕಸಿವಿಸಿಯಾಗಬಹುದು ಎಂಬ ಕಾರಣಕ್ಕೆ ಸ್ಪರ್ಧೆ ವಿಚಾರ ಪೆಂಡಿಂಗ್‌ ಇದೆ ಎನ್ನಲಾಗಿದೆ.

Advertisement

●ಎಸ್‌.ಲಕ್ಷ್ಮಿನಾರಾಯಣ 

Advertisement

Udayavani is now on Telegram. Click here to join our channel and stay updated with the latest news.

Next