Advertisement

ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದನೆ

05:00 PM Mar 20, 2022 | Shwetha M |

ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಡಳಿತದಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಗ್ರಾಮದ ಸಮಗ್ರ ಅಭಿವೃದ್ಧಿ ವಿಷಯದಲ್ಲಿ ಗ್ರಾಮಸ್ಥರ ಸಹಕಾರವೂ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಹೇಳಿದರು.

Advertisement

ಶನಿವಾರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸಿ, ಅಹವಾಲು ಸ್ವೀಕರಿಸಿದ ಸ್ಥಳದಲ್ಲೇ ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟಂತೆ 128 ಅರ್ಜಿಗಳು ಸಲ್ಲಿಕೆಯಾಗಿದ್ದು, ಎಲ್ಲ ಸ್ವೀಕೃತ ಅಹವಾಲುಗಳಿಗೆ ಪರಿಹಾರ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ನಿಮ್ಮ ಗ್ರಾಮದ ಗಂಭೀರ ಸಮಸ್ಯೆಗಳಲ್ಲಿ ಪ್ರಮುಖವಾಗಿರುವ ಸ್ಮಶಾನ ಭೂಮಿ ಒತ್ತುವರಿಗೆ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸ್ಮಶಾನ ರಕ್ಷಣೆಗೆ ಕಾಂಪೌಂಡ್‌ ನಿರ್ಮಿಸುವುದಾಗಿ ಭರವಸೆ ನೀಡಿದರು.

ಇದಲ್ಲದೇ ಕಾಲುದಾರಿ ಸಮಸ್ಯೆಯನ್ನು ಗ್ರಾಮಸ್ಥರು ಪಂಚಾಯತ್‌ ವ್ಯಾಪ್ತಿಯಲ್ಲೇ ಪರಸ್ಪರ ಮಾತುಕತೆ ಮೂಲಕ ಪರಿಹರಿಸಿಕೊಳ್ಳಬಹುದು. ಇದಕ್ಕಾಗಿ ನಮ್ಮ ಅಧ್ಯಕ್ಷತೆಯಲ್ಲಿ ಈಗಾಗಲೇ ಪೂರ್ವಭಾವಿ ಸಭೆ ನಡೆಸಲಾಗಿದೆ. ದೊಡ್ಡ ದಾರಿ ಸಮಸ್ಯೆ ಪರಿಹಾರಕ್ಕೆ ಶಾಸಕರ ಅನುದಾನದ ಅಡಿ ಕ್ರಮ ಕೈಗೊಳ್ಳಬಹುದಾಗಿದೆ ಎಂದರು.

Advertisement

ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಚರಂಡಿ ಸಮಸ್ಯೆ ಗಂಭೀರವಾಗಿದ್ದು, 15ನೇ ಹಣಕಾಸು ಯೋಜನೆಯ ಅಂದಾಜು ವೆಚ್ಚದಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಗ್ರಾಮದ ಪ್ರತಿ ಮನೆ ಮನೆಗೂ ಜಲಜೀವನ ಮಿಷನ್‌ ಯೋಜನೆ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಾರಿಗೆ ಸೌಲಭ್ಯ ಹಾಗೂ ಬಸ್‌ ನಿಲ್ದಾಣ ನಿರ್ಮಿಸಲಾಗುತ್ತದೆ. ಮನೆಗಳ ಮೇಲೆ ಹಾಯ್ದು ಹೋಗಿರುವ ವಿದ್ಯುತ್‌ ತಂತಿ ಸಮಸ್ಯೆ ಪರಿಹಾರಕ್ಕೂ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಗ್ರಾಮದ ಕೆಲ ಪಾನ್‌ ಶಾಪ್‌ಗ್ಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದರಿಂದ ಅಂಥ ಅಂಗಡಿಗಳನ್ನು ಸೀಸ್‌ ಮಾಡಲಾಗಿದೆ. ಗ್ರಾಮದಲ್ಲಿ ಸಾರಾಯಿ ಅಂಗಡಿ ಬೇಡ ಎಂಬ ಮಹಿಳೆಯರ ಆಗ್ರಹದ ಭಾವನೆಗೆ ಜಿಲ್ಲಾಡಳಿತ ಸೂಕ್ತ ಸ್ಪಂದನೆ ನೀಡಲಿದೆ. ಈ ವಿಷಯದಲ್ಲಿ ಪುರುಷರ ಇಚ್ಛಾಶಕ್ತಿಯೂ ಮುಖ್ಯ ಎಂದರು.

ಜಿಪಂ ಸಿಇಒ ರಾಹುಲ್‌ ಶಿಂಧೆ ಮಾತನಾಡಿ, ಉಪ್ಪಲದಿನ್ನಿ ಗ್ರಾಮದಲ್ಲಿರುವ ಸಮಸ್ಯೆಗಳಲ್ಲಿ ತಮ್ಮ ವ್ಯಾಪ್ತಿಗೆ ಬರುವ ಎಲ್ಲ ಸಮಸ್ಯೆಗಳಿಗೆ ಶಾಸ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಉಪ್ಪಲದಿನ್ನಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಕಟ್ಟಡ, ಊಟದ ಕೊಠಡಿ, ಆಹಾರ ಸಾಮಗ್ರಿ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಉಪ ವಿಭಾಗಾಧಿಕಾರಿ ಬಲರಾಮ್‌ ಲಮಾಣಿ, ಡಿವೈಎಸ್ಪಿ ಲಕ್ಷ್ಮೀನಾರಾಯಣ, ಉಪ್ಪಲದಿನ್ನಿ ಗ್ರಾಪಂ ಅಧ್ಯಕ್ಷೆ ಗಂಗೂಬಾಯಿ ಶಿಂಧೆ, ತಹಶೀಲ್ದಾರ್‌ ಸಂತೋಷ ಮ್ಯಾಗೇರಿ, ತಾಪಂ ಇಒ ಜಿ.ಎಸ್‌. ಪಠಾಣ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next