ಸಿಂದಗಿ: ವಿಜಯಪುರ ಜಿಲ್ಲೆ ಗೊಳಗುಮ್ಮಟಕ್ಕೆ ಪ್ರಸಿದ್ಧಿ ಹೇಗೋ ಹಾಗೆ ಬರಗಾಲಕ್ಕೂ ಪ್ರಸಿದ್ಧಿಯಾಗಿದೆ. ಪ್ರಕೃತಿ ವಿಕೋಪದಿಂದ ಉಂಟಾದ ಬರಗಾಲದಿಂದ ರೈತ ತತ್ತರಿಸಿ ಹೋಗಿದ್ದಾನೆ. ರೈತರ ಸಂಕಷ್ಟ ನಿವಾರಣೆಗೆ ಹೋರಾಡುತ್ತಿರುವ ರೈತ ಸಂಘಟನೆಗಳ ಹೋರಾಟ ಹೋರಾಟಗಳಾಗಿ ಉಳಿದಿವೆ. ಆದರೆ ಸರಕಾರಗಳಿಂದ ರೈತರಿಗೆ ಯಾವದೇ ರೀತಿಯಿಂದ ಸಹಾಯ ಸಿಕ್ಕಿಲ್ಲ. ಪ್ರಸಕ್ತ ವರ್ಷದಲ್ಲಿ ತೊಗರಿ ಬೆಳೆ ನಂಬಿದ ರೈತ ಮತ್ತಷ್ಟು ಸಂಕಷ್ಟದಲ್ಲಿ ಸಿಲುಕಿದ್ದಾನೆ.
ಕಳೆದ 4 ವರ್ಷದಿಂದ ಬರಗಾಲ ದಿಂದ ಕಂಗೆಟ್ಟ ಸಂದರ್ಭದಲ್ಲಿ ಮಳೆಗಾಲದ ಪ್ರಾರಂಭದ ದಿನಗಳಲ್ಲಿ ಸಮರ್ಪಕವಾಗಿ ಮಳೆ ಬಂತು. ಆಗ ರೈತರು ಸಾಲಸೂಲ ಮಾಡಿ ಬೀಜ ಗೊಬ್ಬರ ತಂದು ತಾಲೂಕಿನಲ್ಲಿ 92,475 ಹೆಕ್ಟೇರ್ ಕೃಷಿ ಭೂಮಿಯಲ್ಲಿ ತೊಗರಿ ಬಿತ್ತಿದ್ದಾರೆ. ಹೂ, ಕಾಯಿ ಬಿಟ್ಟ ಸಂದರ್ಭದಲ್ಲಿ ಮುಂಗಾರು ಮಳೆ ಹೆಚ್ಚಾದ್ದರಿಂದ ತೊಗರಿ ಬೆಳೆ ಹಾನಿಯಾಯಿತು. ನಂತರ ದಿನಗಳಲ್ಲಿ ಬಂದ
ಇಳುವರಿ ರೈತರಿಗೆ ಸಮರ್ಪಕವಾಗಿ ಬರಲಿಲ್ಲ.
ರೈತರ ಕೈಗೆ ತೊಗರಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ತೊಗರಿಗೆ ಬೆಲೆಯಲ್ಲ. ಮಾರುಕಟ್ಟೆಯಲ್ಲಿ 4 ಸಾವಿರ ರೂ. ಇದ್ದರೇ ರೈತರ ಗತಿಯೇನು. ಸರಕಾರ ಪ್ರತಿ ಕ್ವಿಂಟಲ್‌ಗೆ 6 ಸಾವಿರ ರೂ. ಘೋಷಣೆ ಮಾಡಿ ತೊಗರಿ ಖರೀದಿ ಕೇಂದ್ರದ ಮೂಲಕ ಖರೀದಿಸುವುದಾಗಿ ಹೇಳಿದೆ. ಅದರಂತೆ ಜಿಲ್ಲಾಧಿಕಾರಿಗಳು ತೊಗರಿ ಕೇಂದ್ರಗಳ ಮೂಲಕ ತೊಗರಿ ಖರಿದಿ ಮಾಡುವುದಾಗಿ ತಿಳಿಸಿದ್ದಾರೆ. ತೊಗರಿ ಬೆಳೆದ ರೈತರು ತಮ್ಮ ಹೆಸರು ನೋಂದಾಯಿಸಲು ಎಪಿಎಂಸಿಯಲ್ಲಿನ ಸಿಂದಗಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತದ ಕಚೇರಿಗೆ ಬಂದು ಕಳೆದ 3-4 ದಿನಗಳಿಂದ ಪಾಳೆ ಹಚ್ಚುತ್ತಿದ್ದರೂ ಆದರೇ ಹೆಸರು ನೋಂದಣಿ ಮಾಡಿಕೊಳ್ಳುತ್ತಿಲ್ಲ.
ತೊಗರಿ ಖರೀದಿ ಕೇಂದ್ರದಲ್ಲಿ ತೊಗರಿ ಕೊಟ್ಟರೆ ನಮಗೆ ಹೆಚ್ಚಿನ ಹಣ ಬರುತ್ತದೆ ಎಂದು ನಂಬಿ ಮಹಿಳೆಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ರೈತರು ರಾತ್ರಿಯಿಂದಲೇ ಕಚೇರಿ ಎದರು ಪಾಳಿ ಹಚ್ಚಿದ್ದಾರೆ. ಆದರೆ ಹೆಸರು ನೋಂದಾಯಿಸಿಕೊಳ್ಳುವವರು ಯಾರು ಇಲ್ಲ. ಇಲ್ಲಿ ಯಾರಿಗೆ ಕೇಳಬೇಕು ಎಂಬುದು ರೈತರ ಯಕ್ಷ ಪ್ರಶ್ನೆಯಾಗಿದೆ.
ಸಿಂದಗಿ ತಾಲೂಕಿನಲ್ಲಿ ಒಟ್ಟು ಹತ್ತು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಿಂದಗಿ, ಆಲಮೇಲ, ದೇವರಹಿಪ್ಪರಗಿ (ಹೊಸೂರ), ಹಿಕ್ಕನಗುತ್ತಿ, ಚಾಂದಕವಠೆ, ಮೋರಟಗಿ, ಗೋಲಗೇರಿ, ಕಲಕೇರಿ, ಕೊಂಡಗೂಳಿ, ಜಾಲವಾದ ತೊಗರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿರುವುದಾಗಿ ಎಪಿಎಂಸಿಯಲ್ಲಿನ ಸಿಂದಗಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಹಕಾರ ಸಂಘ ನಿಯಮಿತದ ಕಚೇರಿ ಗೋಡೆಗೆ ಮಾಹಿತಿ ಅಂಟಿಸಿದ್ದಾರೆ. ಆದರೆ ಎಲ್ಲಿ ತೊಗರಿ ಬೆಳೆದ ರೈತರ ಹೆಸರುಗಳು ನೋಂದಣಿ ಪ್ರಾರಂಭವಾಗಿಲ್ಲ. ಶಿಘ್ರದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ರೈತರ ಒತ್ತಾಸೆಯಾಗಿ¨
ರೈತರು ಬೆಳೆದ ತೊಗರಿಯನ್ನು ಸಂಪೂರ್ಣವಾಗಿ ಸರಕಾರ ಶಿಘ್ರದಲ್ಲಿ ಖರೀದಿ ಮಾಡಬೇಕು. ಸಿಂದಗಿ ತಾಲೂಕಿನಲ್ಲಿ
ಪ್ರಾರಂಭಿಸಿದ 10 ತೊಗರಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ರೈತರೊಂದಿಗೆ ಸೇರಿ ಉಗ್ರ
ಹೋರಾಟ ಮಾಡಬೇಕಾಗುತ್ತದೆ.
ಶೇಖರಗೌಡ ಹರನಾಳ, ವಿಎಚ್‌ಪಿ ಮುಖಂಡ
ತಾಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆಗಳಿವೆ. ಕಾರ್ಖಾನೆ ಪ್ರಾರಂಭದಲ್ಲಿ ತಾಲೂಕಿನಲ್ಲಿ ರೆತರು ಹೆಚ್ಚು ಕಬ್ಬು ಬೆಳೆಯುತ್ತಿದ್ದರು. ಕಳೆದ 2-3 ವರ್ಷದಿಂದ ಕಬ್ಬಿಗೆ ಸೂಕ್ತ ವೈಜ್ಞಾನಿಕ ಬೆಲೆ ನೀಡದ್ದರಿಂದ ರೈತರು ತೊಗರಿ ಬಿತ್ತನೆ ಮಾಡಿದ್ದಾರೆ. ಸರಕಾರ ರೈತರು ಬೆಳೆದ ತೊಗರಿಯನ್ನು ಸಂಪೂರ್ಣ ಖರೀದಿ ಮಾಡಬೇಕು.
ಸಿದ್ದಣ್ಣ ಚೌಧರಿ ಕನ್ನೊಳ್ಳಿ, ಜೆಡಿಎಸ್ ತಾಲೂಕು ವಕ್ತಾರ
ನನ್ನ ಹೆಸರಿನಲ್ಲಿ ಹೊಲ ಇದೆ. ಹೊಲದಾಗ 20 ಚೀಲ ತೊಗರಿ ಬೆಳೆಯಲಾಗಿದೆ. ಹೆಸರ ಹಚ್ಚಲಾಕ ಮಕ್ಕಳು ನನಗ ಕಳಿಸ್ಯಾರ. ಆದರ ಇಲ್ಲಿ ಹೆಸರ ಹಚ್ಚಿಕೊಳ್ಳೊರು ಯಾರೂ ಇಲ್ಲ. ಒಂದ ನಸಕನ್ಯಾಗ ಬಂದಿನಿ, ಹೊಟ್ಟಿ ಹಸ್ತದ, ಎದ್ದ ಹೋದರ ಪಾಳಿ ಹೋಗತಾದ ಏನ ಮಾಡೋದು ಗೊತ್ತಾಗತಿಲ್ಲ.
ಮುರಗೆಮ್ಮ ಪೂಜಾರಿ, ರೈತ ಮಹಿಳೆ, ಯರಗಲ್ ಬಿ.ಕೆ.
ರಮೇಶ ಪೂಜಾರ