ಬಂಗಾರಪೇಟೆ: ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಗ್ರಾಮೀಣ ಜನರ ಕಡೆಗೆ ತಾಪಂ ಸದಸ್ಯರು ಹೆಚ್ಚಿನ ಗಮನ ಹರಿಸಬೇಕೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಪಟ್ಟಣದಲ್ಲಿ 4 ಲಕ್ಷ ರೂ.ನಲ್ಲಿ ನಿರ್ಮಾಣ ಮಾಡಿರುವ ತಾಪಂ ಕಚೇರಿ ಕಾಂಪೌಂಡ್ ಉದ್ಘಾಟನೆ ಮತ್ತು ಕೆಜಿಎಫ್ ತಾಲೂಕಿಗೆ ಸೇರ್ಪಡೆಯಾಗಿರುವ 13 ತಾಪಂ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಲವು ದಶಕಗಳ ಕಾಲ ಕೆಜಿಎಫ್ ಮತ್ತು ಬಂಗಾರಪೇಟೆ ಒಂದೇ ತಾಲೂಕಾಗಿತ್ತು, ಈಗ ಪ್ರತ್ಯೇಕವಾಗಿರುವುದರಿಂದ ತಾಪಂ ಸಹ ಬೇರೆಯಾಗಿದೆ. ಕೆಜಿಎಫ್ ಕ್ಷೇತ್ರದಿಂದ ಆಯ್ಕೆಯಾಗಿರುವ ಹಾಲಿ ತಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿ 13 ಸದಸ್ಯರನ್ನು ಬಿಟ್ಟುಕೊಡುವುದಕ್ಕೆ ನೋವಾದರೂ ಅನಿವಾರ್ಯವಾಗಿದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಗಳು ತಾಂಡವಾಡುತ್ತಿವೆ,
ಸದಸ್ಯರು ಅವರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಅವರ ಋಣ ತೀರಿಸಬೇಕು. ನಾಲ್ಕು ವರ್ಷಗಳು ಪಕ್ಷ ಭೇದವಿಲ್ಲದೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೆವು. ಅಭಿವೃದ್ಧಿಗಾಗಿ ಜಗಳವಾಡಿರಬಹುದು. ಆದರೆ, ಅದು ವೈಯುಕ್ತಿಕವಲ್ಲ, ಇಲ್ಲಿ ನನಗೆ ಬೆಂಬಲ ನೀಡಿದಂತೆ ಕೆಜಿಎಫ್ ಕ್ಷೇತ್ರದಲ್ಲಿಯೂ ಅಲ್ಲಿನ ಶಾಸಕರೊಂದಿಗೆ ಉತ್ತಮ ಒಡನಾಟ ಬೆಳೆಸಿಕೊಂಡು ನಿಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ತಾಪಂ ಅಧ್ಯಕ್ಷೆ ಮಮತಾ ರಮೇಶ್, ಉಪಾಧ್ಯಕ್ಷೆ ಗಿರಿಜಮ್ಮ ತಿಮ್ಮರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜ್, ತಾಪಂ ಇಒ ಎನ್. ವೆಂಕಟೇಶಪ್ಪ, ಎಇಇ ಎಚ್.ಡಿ.ಶೇಷಾದ್ರಿ, ಬಿಇಒ ಕೆಂಪಯ್ಯ, ಎ.ಡಿ. ಮಂಜುನಾಥ್, ರೇಷ್ಮೆ ಇಲಾಖೆ ಎ.ಡಿ. ಎಸ್.ಎನ್. ಶ್ರೀನಿವಾಸ್, ಕೃಷಿ ಇಲಾಖೆ ಎ.ಡಿ. ಅಸೀಪುಲ್ಲಾ, ಪಿಡಿಒಗಳಾದ ಕಾರಹಳ್ಳಿ ಸುರೇಶ್‌ಬಾಬು, ಸೂಲಿಕುಂಟೆ ಶಂಕರ್ ಇದ್ದರು.