ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರು ವುದರಿಂದ ತಕ್ಷಣವೇ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಕರೆದು ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಮಹಾರಾಷ್ಟ್ರದಲ್ಲಿ ಅಪಾರ ಪ್ರಮಾಣದ ಮಳೆಯಾಗುತ್ತಿ ರುವುದರಿಂದ ಹಿಪ್ಪರಗಿ, ನಾರಾಯಣಪುರ, ಆಲಮಟ್ಟಿ ಜಲಾಶಯಗಳ ಹಿನ್ನೀರಿನ ಪ್ರದೇಶಗಳು ಜಲಾವೃತಗೊಂಡಿವೆ. ಕೃಷ್ಣಾ ನದಿಗೆ 2.3 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಕೃಷ್ಣಾ ಹಾಗೂ ಉಪ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ನದಿ ತೀರದ ಹಲವು ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸಬೇಕಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪ ವಿಭಾಗದ 37 ಗ್ರಾಮಗಳು ಪ್ರವಾಹದಿಂದ ಬಾಧಿತವಾಗಿವೆ. ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ ತಾಲೂಕುಗಳ ಗ್ರಾಮಗಳು ಜಲಾವೃತವಾಗಿದ್ದು, ಮುಳು ಗಡೆ ಪ್ರದೇಶದಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸಲು ವಿಶೇಷ ದೋಣಿಗಳ ವ್ಯವಸ್ಥೆ ಮಾಡಬೇಕಿದೆ. ಇಷ್ಟೆಲ್ಲ ಗಂಭೀರ ಪರಿಸ್ಥಿತಿ ಇದ್ದರೂ ಸಮರೋಪಾದಿಯಲ್ಲಿ ತುರ್ತು ಪರಿಹಾರ ಕಾರ್ಯಗಳಿಗೆ ಸನ್ನದ್ಧರಾಗಬೇಕಾದ ಆಡಳಿತ ಯಂತ್ರ ಪ್ರವಾಹ ಪರಿಸ್ಥಿತಿಯನ್ನು ಗಂಭೀರ ವಾಗಿ ಎದುರಿಸುತ್ತಿಲ್ಲ.
ಎನ್‌ಡಿಆರ್‌ಎಫ್ ತಂಡ ಹಾಗೂ ದೋಣಿ ರಕ್ಷಣಾ ತಂಡಗಳನ್ನು ಸನ್ನದ್ದಗೊಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ತಾವು ದೆಹಲಿ ಪ್ರವಾಸವನ್ನು ರದ್ದುಗೊಳಿಸಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡು ವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರಧಾನಿ ಭೇಟಿ ನೀಡಿ ಸಮೀಕ್ಷೆ ನಡೆಸು ವಂತೆ ಒತ್ತಾಯಿಸಬೇಕೆಂದು ಎಚ್.ಕೆ. ಪಾಟೀಲ್ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸಿಎಂ ಪ್ರತಿಕ್ರಿಯೆ: ಎಚ್.ಕೆ.ಪಾಟೀಲ್ ಅವರ ಪತ್ರಕ್ಕೆ ಮುಖ್ಯಮಂತ್ರಿ ಯಡಿ ಯೂರಪ್ಪ ಪತ್ರದ ಮೂಲಕ ಉತ್ತರ ನೀಡಿದ್ದು, ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾ ಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮಾಡಲಾಗಿದ್ದು, ಸೋಮವಾರ ಖುದ್ದು ವೈಮಾನಿಕ ಸಮೀಕ್ಷೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ದೆಹಲಿಗೆ ಭೇಟಿ ನೀಡಿ, ಕೇಂದ್ರ ಸರ್ಕಾರದಿಂದ ಅಗತ್ಯ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದು ಎಚ್.ಕೆ.ಪಾಟೀಲ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಭಾಗಮಂಡಲ ಜಲಾವೃತ: ಕೊಡಗಿನ ಭಾಗಮಂಡಲದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ನಾಪೋಕ್ಲು – ಭಾಗಮಂಡಲ ರಸ್ತೆಯ ನೆಲಜಿ ಜಂಕ್ಷನ್ ಬಳಿ ರಸ್ತೆಗೆ ಮರ ಉರುಳಿ ಸಂಚಾರಕ್ಕೆ ತಡೆಯಾಗಿತ್ತು. ವೀರಾಜಪೇಟೆ ತಾಲೂಕಿನ ನಾಂಗಾಲ ಗ್ರಾಮದಲ್ಲಿ ಭೂಕುಸಿತವಾಗಿ ಮನೆಗೆ ಹಾನಿಯಾಗಿದೆ. ಗೋಣಿಕೊಪ್ಪದ ವೆಂಕಟಪ್ಪ ಬಡಾವಣೆಯ ಪಕ್ಕದ ಕೀರೆ ಹೊಳೆ ಉಕ್ಕಿ ಹರಿದು 12ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಲಕ್ಷ್ಮಣತೀರ್ಥ ನದಿಯಲ್ಲಿ ಏಕಾಏಕಿ ನೀರು ಏರಿಕೆಯಾಗಿ ಭತ್ತದ ಗದ್ದೆಗಳು ಪ್ರವಾಹಕ್ಕೆ ಸಿಲುಕಿವೆ.