Advertisement

ಬಿಜೆಪಿ, ವಿರೋಧಿಗಳ ಟೀಕೆಗಳಿಗೆ ಸೂಕ್ತ ಉತ್ತರ ನೀಡಿ

11:15 PM Apr 13, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಜೆಡಿಎಸ್‌ನ ಸಾಮಾಜಿಕ ಜಾಲತಾಣ ತಂಡಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ವಿದ್ಯುನ್ಮಾನ ಮಾಧ್ಯಮ ಹಾಗೂ ಸೈನಿಕರ ಕುರಿತು ತಾವು ನೀಡಿದ ಹೇಳಿಕೆಯನ್ನು ವಿವಾದದ ಸ್ವರೂಪ ಮಾಡಿ ರಾಜಕೀಯ ಲಾಭಕ್ಕೆ ಬಿಜೆಪಿ ಹಾಗೂ ರಾಜಕೀಯ ವಿರೋಧಿಗಳು ಯತ್ನಿಸುತ್ತಿದ್ದಾರೆ.

Advertisement

ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕವೇ ಸೂಕ್ತ ಉತ್ತರ ನೀಡಬೇಕಿದೆ. ಹೀಗಾಗಿ, ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಿರುವ ತಂಡ ಮತ್ತಷ್ಟು ಎಫೆಕ್ಟ್ ಆಗಬೇಕು ಎಂದು ನಿರ್ದೇಶನ ನೀಡಿದ್ದಾರೆ. ಬಿಜೆಪಿಯ ಸೋಷಿಯಲ್‌ ಮೀಡಿಯಾ ತಂಡ ಜೆಡಿಎಸ್‌ನ್ನು ಗುರಿಯಾಗಿಸಿಕೊಂಡು ನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ಹೇಳಿಕೆಗೂ ಪ್ರತಿಕ್ರಿಯೆ ನೀಡುತ್ತಿದೆ.

ಅದಕ್ಕೆ ತಕ್ಕಂತೆ ಜೆಡಿಎಸ್‌ನಿಂದ ಪ್ರತಿಕ್ರಿಯೆ ನೀಡುವ ಕೆಲಸ ಆಗುತ್ತಿಲ್ಲ. ನಮ್ಮ ಟೀಂ ವೀಕ್‌ ಆಗಿದೆ. ಜೆಡಿಎಸ್‌ ಸ್ಪರ್ಧೆ ಮಾಡಿರುವ ಕ್ಷೇತ್ರಗಳಿಗೆ ಮಾತ್ರ ಸೋಷಿಯಲ್‌ ಮೀಡಿಯಾ ಟೀಂ ಸೀಮಿತವಾಗಬಾರದು. 28 ಕ್ಷೇತ್ರಗಳಲ್ಲೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿ ಎಂದು ಸೂಚಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಸೋಷಿಯಲ್‌ ಮೀಡಿಯಾ ತಂಡ ಪರಿಣಾಮಕಾರಿಯಾಗಿ ಕೆಲಸ ಮಾಡಿತ್ತಾದರೂ ಲೋಕಸಭಾ ಚುನಾವಣೆಯಲ್ಲಿ ಅಷ್ಟು ಸಕ್ರಿಯವಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಏಪ್ರಿಲ್‌ 23ರವರೆಗೆ ಸೋಷಿಯಲ್‌ ಮೀಡಿಯಾ ತಂಡಕ್ಕೆ ಪ್ರತಿ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುವಂತೆ ತಿಳಿಸಲಾಗಿದೆ.

ಅದಕ್ಕಾಗಿ ಐಟಿ ಪರಿಣಿತರು ಸೇರಿ ಅಗತ್ಯ ಸಿಬ್ಬಂದಿ ನೇಮಿಸಿಕೊಂಡು ಅಗತ್ಯ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಪದಾಧಿಕಾರಿಗಳಿಗೆ ತಿಳಿಸಲಾಗಿದೆ. ಜೆಡಿಎಸ್‌ ರಾಜ್ಯ ಕಚೇರಿಯಲ್ಲೇ ಸಾಧ್ಯವಾದರೆ ಸೋಷಿಯಲ್‌ ಮೀಡಿಯಾ ತಂಡ ಕಾರ್ಯ ನಿರ್ವಹಿಸಲಿ ಎಂದು ತಿಳಿಸಲಾಗಿದೆ.

Advertisement

ನಿಖಿಲ್‌ಗೆ ಪ್ರತ್ಯೇಕ ವಾರ್‌ ರೂಂ: ಮಂಡ್ಯದಿಂದ ಕಣಕ್ಕಿಳಿದಿರುವ ನಿಖಿಲ್‌ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಟ್ರೋಲ್‌ಗ‌ಳಿಗೆ ತಿರುಗೇಟು ನೀಡಲು ಪ್ರತ್ಯೇಕ ವಾರ್‌ ರೂಂ ಸ್ಥಾಪಿಸಲು ಸೂಚನೆ ನೀಡಿದ್ದಾರೆ. ಮೈಸೂರಿನಲ್ಲಿ ವಾರ್‌ ರೂಂ ಸ್ಥಾಪಿಸಿದ್ದು, 50 ಜನರ ತಂಡ ಕೆಲಸ ಮಾಡುತ್ತಿದೆ. ನಿತ್ಯ ಟೀಕೆ-ಟಿಪ್ಪಣಿಗಳಿಗಾಗಿಯೇ ಒಂದು ತಂಡ ಕೆಲಸ ಮಾಡುತ್ತಿದೆ ಎಂದು ಹೇಳಲಾಗಿದೆ.

ಗೌಡರ ಪರ ಕಾಂಗ್ರೆಸ್‌ ಬ್ಯಾಟಿಂಗ್‌: ಇನ್ನು, ದೇವೇಗೌಡರು ಸ್ಪರ್ಧೆ ಮಾಡಿರುವ ತುಮಕೂರಿನಲ್ಲಿಯೂ ಬಿಜೆಪಿ, ಸಾಮಾಜಿಕ ಜಾಲತಾಣದ ಮೂಲಕ ಹೇಮಾವತಿ ನೀರಿನ ವಿಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ನಿತ್ಯ ಟೀಕೆಗಳನ್ನು ಮಾಡುತ್ತಿದೆ. ಆದರೆ, ಅದನ್ನು ಜೆಡಿಎಸ್‌ ಸಮರ್ಥವಾಗಿ ಎದುರಿಸುತ್ತಿಲ್ಲ. ಜೆಡಿಎಸ್‌ನ ಬದಲಿಗೆ ಕಾಂಗ್ರೆಸ್‌ನವರು ಸಾಮಾಜಿಕ ಜಾಲತಾಣಗಳ ಮೂಲಕ ಉತ್ತರಿಸುವ ಕೆಲಸ ಮಾಡುತ್ತಿದ್ದಾರೆ.

ಅಲ್ಲಿಯೂ ಜೆಡಿಎಸ್‌ನ ಸೋಷಿಯಲ್‌ ಮೀಡಿಯಾ ಸರಿಯಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಲಾಗಿದೆ. ಹಾಸನ ವಿಚಾರಕ್ಕೆ ಬಂದರೆ ಪ್ರಜ್ವಲ್‌ ಬ್ರಿಗೇಡ್‌ ವ್ಯವಸ್ಥಿತವಾಗಿ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಿದ್ದು, ಅಲ್ಲಿ ಯಾವುದೇ ಸಮಸ್ಯೆಯಿಲ್ಲ. ಖುದ್ದು ಪ್ರಜ್ವಲ್‌ ರೇವಣ್ಣ ಅವರೇ ತಮ್ಮ ಫೇಸ್‌ಬುಕ್‌ ಖಾತೆಯ ಮೂಲಕ ರಾಜಕೀಯ ವಿರೋಧಿಗಳಿಗೆ “ಟಾಂಗ್‌’ ನೀಡುತ್ತಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ಸೋಷಿಯಲ್‌ ಮೀಡಿಯಾ ತಂಡ ಕೆಲಸ ಮಾಡುತ್ತಿದೆ. ಮುಂದಿನ ಹತ್ತು ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲಾಗುವುದು. “ನಮ್ಮ ಎಚ್‌ಡಿಕೆ’, “ಎಚ್‌ಡಿ ಕುಮಾರಸ್ವಾಮಿ’, “ಕುಮಾರಣ್ಣ ಎಚ್‌ಡಿಕೆ’ ಫೇಸ್‌ಬುಕ್‌ ಖಾತೆಗಳು ಕಾರ್ಯ ನಿರ್ವಹಿಸುತ್ತಿವೆ. “ಕುಮಾರಸ್ವಾಮಿ ಫಾರ್‌ ಸಿಎಂ ಜಾಲತಾಣ’ 82 ಲಕ್ಷ ಜನರನ್ನು ತಲುಪಿದೆ. ಬಿಜೆಪಿ ಪೇಜ್‌ಗಿಂತ ಹೆಚ್ಚು ಜನರನ್ನು ತಲುಪಿದೆ ಎಂದು ಜೆಡಿಎಸ್‌ ಐಟಿ ತಂಡದ ರವಿ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next